Government Employee; ನೌಕರರ ವರ್ಗಾವಣೆಗೆ ಒಪ್ಪಿಗೆ, ಷರತ್ತುಗಳು
ಬೆಂಗಳೂರು, ಮೇ 29: ಲೋಕಸಭೆ ಚುನಾವಣೆ 2024ರ ನೀತಿ ಸಂಹಿತೆ ಕರ್ನಾಟಕದಲ್ಲಿ ಸ್ವಲ್ಪ ಸಡಿಲಗೊಳ್ಳುತ್ತಿದ್ದಂತೆಯೆ ರಾಜ್ಯ ಸರ್ಕಾರ ಸರ್ಕಾರಿ ನೌಕರರ ವರ್ಗಾವಣೆ ಆರಂಭಿಸಿದೆ. ಆರೋಗ್ಯ ಇಲಾಖೆಯಲ್ಲಿ ವಿವಿಧ ಸಿಬ್ಬಂದಿಗಳ ವರ್ಗಾವಣೆಗೆ ಒಪ್ಪಿಗೆ ನೀಡಿದ್ದು, ಷರತ್ತುಗಳನ್ನು ಸಹ ಹಾಕಲಾಗಿದೆ.
ಈ ಕುರಿತು ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಬೆಂಗಳೂರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರಿಗೆ ಪತ್ರವನ್ನು ಬರೆದಿದ್ದಾರೆ. ಈ ಪತ್ರ 2024-25ನೇ ಸಾಲಿನ ವರ್ಗಾವಣೆಯನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ಕಾಯ್ದೆಯಂತೆ ವರ್ಗಾವಣೆಗೆ ಅರ್ಜಿ ಆಹ್ವಾನಿಸಿ ಮಾರ್ಗಸೂಚಿಗಳ ಮೂಲಕ ಸಮಾಲೋಚನೆ ವರ್ಗಾವಣೆಗಾಗಿ ಅಧಿಸೂಚನೆ ಹೊರಡಿಸಲು ಅನುಮತಿ ನೀಡುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

ವರ್ಗಾವಣೆ ಅಧಿಸೂಚನೆಯನ್ನು 10/6/2024ರಂದು ಹೊರಡಿಸಲಾಗುತ್ತದೆ. 15 ದಿನ ಅರ್ಜಿಗಳನ್ನು ಸಲ್ಲಿಕೆ ಮಾಡಲು ಅವಕಾಶವಿದೆ. ಅಂತಿಮ ವರ್ಗಾವಣೆ ಪಟ್ಟಿಯಂತೆ ವೃಂದವಾರು ಸಮಾಲೋಚನೆ ಪ್ರಾರಂಭಿಸುವ ದಿನಾಂಕ 18/7/2024. ವರ್ಗಾವಣೆಯನ್ನು 31/7/2024ರಂದು ಮುಕ್ತಾಯಗೊಳಿಸಬೇಕು ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಪತ್ರದ ವಿವರಗಳು: 2024-25 ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಯನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ಕಾಯ್ದೆ 2011, 2013 ಮತ್ತು 2017ರಂತೆ ಕಾಲ ಕಾಲಕ್ಕೆ ಆದ ತಿದ್ದುಪಡಿಗಳ ಅನ್ವಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಅಧಿಕಾರಿ/ ಸಿಬ್ಬಂದಿಗಳ ಸಮಾಲೋಚನೆ ವರ್ಗಾವಣೆ ಪ್ರಕ್ರಿಯೆಯನ್ನು ಪ್ರತಿ ವರ್ಷ ಏಪ್ರಿಲ್/ ಮೇ ತಿಂಗಳಿನಲ್ಲಿ ಕೈಗೊಳ್ಳಬೇಕಾಗಿರುತ್ತದೆ.
ಆದರೆ 2024ರ ಲೋಕಸಭಾ ಚುನಾವಣೆ ಪ್ರಕ್ರಿಯೆಯ ಕಾರಣ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವರ್ಗಾವಣೆ ಪ್ರಕ್ರಿಯೆಗಳು ಇಲಾಖೆಯಲ್ಲಿ ಪ್ರಾರಂಭಿಸಲು ಸಾಧ್ಯವಾಗಿರುವುದಿಲ್ಲ. ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಾಗೂ ಸರ್ವ ವೃಂದಗಳ ಸಂಘ, ಆರೋಗ್ಯ ಇಲಾಖೆಯ ಎಲ್ಲಾ ಸಂಘದ ಪದಾಧಿಕಾರಿಗಳು ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಲು ಒತ್ತಾಯಿಸುತ್ತಿರುತ್ತಾರೆ.
2020ನೇ ಸಾಲಿನಲ್ಲಿ ಕೋವಿಡ್-19 ರೋಗ 2020, 2021, 2022 ಮತ್ತು 2023 ಈ ಎಲ್ಲಾ ವರ್ಷಗಳಲ್ಲಿ ಸಮಾಲೋಚನೆ ವರ್ಗಾವಣೆ ಪ್ರಕ್ರಿಯೆಗಳು ನಡೆದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಇಲಾಖೆಯ ಎಲ್ಲಾ ವೃಂದದ ಅಧಿಕಾರಿಗಳು ಸಮಾಲೋಚನೆ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳುವಂತೆ ಒತ್ತಾಯಿಸುತ್ತಿರುವುದರಿಂದ 2024-25ನೇ ಸಾಲಿನಲ್ಲಿ ಗ್ರೂಪ್ 'ಎ' ಗ್ರೂಪ್ 'ಬಿ', ಗ್ರೂಪ್ 'ಸಿ' ಮತ್ತು ಗ್ರೂಪ್ 'ಡಿ' ವರ್ಗದ ಅಧಿಕಾರಿ/ ನೌಕರರಿಗೆ ವೃಂದ ಬಲದ ಮೀರದಂತೆ ಸಮಾಲೋಚನೆ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲು ಮಾರ್ಗಸೂಚಿಗಳನ್ವಯ ಅನುಮತಿ ನೀಡಿದೆ.
ಮಾರ್ಗಸೂಚಿಗಳು
* ಸರ್ಕಾರದ ಆದೇಶ ದಿನಾಂಕ 29/05/2021ರನ್ವಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದ 19 ಜಿಲ್ಲಾ ಆಸ್ಪತ್ರೆ/ ಜಿಲ್ಲಾ ಮಟ್ಟದ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ಕ್ರಮವಾಗಿ ತಲಾ 6 ಮತ್ತು 4ರಂತೆ ತುರ್ತುಚಿಕಿತ್ಸಾ ವೈದ್ಯಾಧಿಕಾರಿಗಳೆಂದು ಮರುಪದನಾಮೀಕರಿಸಿ ಹಂಚಿಕೆ ಮಾಡಿ ಆದೇಶಿಸಲಾಗಿದೆ. 2021ರಲ್ಲಿ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳೆಂದು ಮರು ಪದನಾಮೀಕರಣಗೊಂಡಿರುವುದರಿಂದ ವರ್ಗಾವಣೆ ಕಾಯ್ದೆಯಲ್ಲಿ ಈ ಹುದ್ದೆಗಳು ಉಲ್ಲೇಖಗೊಂಡಿರುವುದಿಲ್ಲ. ಪ್ರಸ್ತುತ ಖಾಲಿ ಇರುವ ಈ ಹುದ್ದೆಗಳಿಗೆ ಕೋರಿಕೆ ವರ್ಗಾವಣೆಗಿಂತ ಮೊದಲು (ಶೇಕಡಾ 15% ರಷ್ಟು ವರ್ಗಾವಣೆಯಿಂದ ಇದನ್ನು ಹೊರತುಪಡಿಸಿ) ಸಮಾಲೋಚನೆ ನಡೆಸಲು ಅನುಮತಿ ನೀಡಲು ಕೋರಿದೆ.
* ವೈದ್ಯರು ಹಾಗೂ ಇತರೇ ಸಿಬ್ಬಂದಿಗಳು ಸಂಬಂಧಪಟ್ಟ ನೇಮಕಾತಿ ನಿಯಮದಲ್ಲಿರುವಂತೆ ನಿಗದಿತ ಅವಧಿಯ ಕಡ್ಡಾಯ ಗ್ರಾಮೀಣ ಸೇವೆಯನ್ನು ಸಲ್ಲಿಸದೇ ಇದ್ದಲ್ಲಿ ಅಂತಹ ವೈದ್ಯರು/ ಸಿಬ್ಬಂದಿಯನ್ನು ಗ್ರಾಮೀಣ ಪ್ರದೇಶಕ್ಕೆ ಸಮಾಲೋಚನೆ ಮೂಲಕ ಸ್ಥಳ ನಿಯುಕ್ತಿಗೊಳಿಸಲು ಅನುಮತಿ ನೀಡಲು ಕೋರಿದೆ.
* ತಜ್ಞತೆವಾರು ಗುರುತಿಸಿರುವ ಹುದ್ದೆಗಳಲ್ಲಿ ವೈದ್ಯರುಗಳು ಅವರ ತಜ್ಞತೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸದೇ ಬೇರೆ ತಜ್ಞತೆ (CMO) ಇತರೆ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, (Specialist Designated Postings (Missmatch) ಅಂತಹ ತಜ್ಞ ವೈದ್ಯರುಗಳನ್ನು ಅವರ ತಜ್ಞತೆಗೆ ಅನುಗುಣವಾಗಿ ಖಾಲಿ ಇರುವ ಹುದ್ದೆಗಳಿಗೆ ಸಮಾಲೋಚನೆ ಮೂಲಕ ಸ್ಥಳ ನಿಯುಕ್ತಿಗೊಳಿಸಲು ಅನುಮತಿ ನೀಡಲು ಕೋರಿದೆ.
* ವಿವಿಧ ವೃಂದಗಳಲ್ಲಿ ಕೋರಿಕೆ ವರ್ಗಾವಣೆಗಳಿಗೆ ಅರ್ಜಿ ಸಲ್ಲಿಸಿದ ಅಧಿಕಾರಿ/ ನೌಕರರುಗಳನ್ನು ವರ್ಗಾವಣೆಗೆ ಪರಿಗಣಿಸಿ ನಿಯಮಾನುಸಾರ ಸಮಾಲೋಚನೆ ಮೂಲಕ ಸ್ಥಳ ನಿಯುಕ್ತಿಗೊಳಿಸಲು ಅನುಮತಿ ನೀಡಲು ಕೋರಿದೆ.
* 2015-16, 2016-17ನೇ ಸಾಲಿನ ವರ್ಗಾವಣೆ ಸಮಯದಲ್ಲಿ ಸರ್ಕಾರವು 10 ವರ್ಷಗಳಿಗೂ ಮೇಲ್ಪಟ್ಟು ಒಂದೇ ಸ್ಥಳದಲ್ಲಿ ದೀರ್ಘಕಾಲ ಸೇವೆ ಸಲ್ಲಿಸುತ್ತಿರುವ 'ಎ' ವೃಂದದ ತಜ್ಞರು/ ವೈದ್ಯಾಧಿಕಾರಿಗಳು, 'ಬಿ' ವೃಂದ ಮತ್ತು 'ಸಿ' ಮತ್ತು 'ಡಿ' ವೃಂದದ ಹುದ್ದೆಗಳನ್ನು ಖಾಲಿ ಹುದ್ದೆಗಳೆಂದು ಪ್ರಕಟಿಸಿ (ದೀರ್ಘಕಾಯಿಲೆಯಿಂದ ಬಳಲುತ್ತಿರುವ ಅಧಿಕಾರಿ/ ಸಿಬ್ಬಂದಿ ಮತ್ತು ವಯೋ ನಿವೃತ್ತಿ ಹೊಂದಲು 2 ವರ್ಷ ಸೇವೆ ಬಾಕಿ ಇರುವವರನ್ನು ಹೊರತುಪಡಿಸಿ) ಸಮಾಲೋಚನೆ ಮುಖಾಂತರ ಈ ಸ್ಥಳಗಳನ್ನು ಭರ್ತಿ ಮಾಡಲು ಹಾಗೂ ಈ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಹಾಜರಾದ ಬಳಿಕ ಕರ್ತವ್ಯದಿಂದ ಬಿಡುಗಡೆ ಹೊಂದಿದ ತಜ್ಞರು/ವೈದ್ಯಾಧಿಕಾರಿಗಳು, 'ಬಿ' ವೃಂದ, 'ಸಿ' ಮತ್ತು 'ಡಿ' ವೃಂದ ನೌಕರರನ್ನು ಮುಂದಿನ ಸ್ಥಳ ನಿಯುಕ್ತಿಗಾಗಿ ಆಯುಕ್ತಾಲಯದಲ್ಲಿ ವರದಿ ಮಾಡಿಕೊಂಡ ನಂತರ ಅವರುಗಳಿಗೆ ಸಮಾಲೋಚನೆ ಮುಖಾಂತರ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ ಸರ್ಕಾರ ಅನುಮತಿ ನೀಡಿದ್ದು, ಇದೇ ರೀತಿಯ ಕ್ರಮವನ್ನು 2024-25 ನೇ ಸಾಲಿನಲ್ಲಿ ಅಳವಡಿಸಿಕೊಳ್ಳಲು ಅನುಮತಿ ನೀಡಲು ಕೋರಿದೆ.












Click it and Unblock the Notifications