ನಾಡು ಬಂಗಾರದ ಗಿಂಡಿಲೇ.. ನಾಡು ಸಿರಿಯಾಗಿಲತೇ ಪರಾಕ್: ಗೊರವಯ್ಯ ಕಾರ್ಣಿಕದ ಅರ್ಥವೇನು?
ಹಾವೇರಿ, ಅಕ್ಟೋಬರ್ 02: ನಾಡು ಬಂಗಾರದ ಗಿಂಡಿಲೇ.. ನಾಡು ಸಿರಿಯಾಗಿಲತೇ ಪರಾಕ್ ಎಂದು ದೇವರಗುಡ್ಡದ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಸ್ವಾಮಿ ಕಾರ್ಣಿಕ ನುಡಿದಿದ್ದಾರೆ. ನಾಡಿನಾದ್ಯಂತ ಈ ವರ್ಷ ಮಳೆ, ಬೆಳೆ ಸಮೃದ್ಧವಾಗಿ ಬರಲಿದೆ. ರಾಜಕೀಯವಾಗಿ ಯಾವುದೇ ಬದಲಾವಣೆ ಇಲ್ಲ. ಮುಂದಿನ ದಿನಗಳಲ್ಲಿ ಉತ್ತಮ ನಾಯಕರು ಹೊರ ಹೊಮ್ಮುತ್ತಾರೆ ಎಂದು ನಾಗಪ್ಪ ಉರ್ಮಿ ಗೊರವಯ್ಯ ದೈವವಾಣಿ ನುಡಿದಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಮಾಲತೇಶ ದೇವರ ಕಾರ್ಣಿಕೋತ್ಸವ ಬುಧವಾರ ಸಂಜೆ ನಡೆಯಿತು. ಸಂಜೆಯಾಗುತ್ತಿದ್ದಂತೆ ಗೊರವಯ್ಯ ಸಹಸ್ರಾರು ಭಕ್ತರ ಮುಂದೆ ಕಾರ್ಣಿಕ ನುಡಿಯಲಾಗಿದೆ. ಸುಮಾರು 21 ಅಡಿ ಬಿಲ್ಲನೇರಿದ ಗೊರವಯ್ಯ ನಾಗಪ್ಪಜ್ಜ ಉರ್ಮಿ ನಾಡಿನ ಬಂಗಾರದ ಗಿಂಡಿ ನಾಡು ಸಿರಿಯಾಗಿಲತೇ ಪರಾಕ್ ಎಂದು ನುಡಿದ ಮೇಲಿನಿಂದ ದುಮುಕಿದ್ದಾರೆ. ಗೊರವಯ್ಯ ಕೆಳಗೆ ದುಮುಕುತ್ತಿದ್ದಂತೆ ಭಕ್ತರು ಕೆಳಗೆ ಬೀಳದಂತೆ ಹಿಡಿಯುತ್ತಾರೆ. 9 ದಿನ ಉಪವಾಸ ವ್ರತ ಮಾಡಿ, 18 ಅಡಿ ಎತ್ತರದ ಬಿಲ್ಲನೇರಿ ಗೊರವಯ್ಯ ಸ್ವಾಮಿ ಕಾರ್ಣಿಕ ನುಡಿಯೋದು ಇಲ್ಲಿನ ವಿಶೇಷ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ದೇವರಗುಡ್ಡದಲ್ಲಿ ಮಾಲತೇಶ ಸ್ವಾಮಿ ದೇವಸ್ಥಾನವಿದೆ. ಮಾಲತೇಶ ಸ್ವಾಮಿಗೆ ಹೊರ ರಾಜ್ಯ, ಹೊರ ದೇಶಗಳಲ್ಲೂ ಭಕ್ತರಿದ್ದಾರೆ.ಐತಿಹಾಸಿಕ ನೆಲೆಗಟ್ಟಿನ ಮಾಲತೇಶ ಸ್ವಾಮಿ ಕಾರ್ಣೀಕೋತ್ಸವ ಪ್ರತಿ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ನಡೆಯುತ್ತದೆ. ಬುಧವಾರ ಆಯುಧ ಪೂಜೆ ದಿನವೇ ಮಾಲತೇಶ ಸ್ವಾಮಿ ಕಾರ್ಣೀಕೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಸಾವಿರಾರು ಜನ ಭಕ್ತರು ಕಾರ್ಣೀಕೋತ್ಸವಕ್ಕೆ ಸಾಕ್ಷಿಯಾದರು.
ನಾಡು ಬಂಗಾರದ ಗಿಂಡಿಲೇ ನಾಡು ಸಿರಿಯಾತಲೇ ಪರಾಕ್ ಎಂದು ನುಡಿದಿದ್ದಾನೆ. ಗೊರವಯ್ಯ ಕಾರ್ಣಿಕ ನುಡಿಯುತ್ತಿದ್ದಂತೆ ಸೇರಿದ್ದ ಭಕ್ತರು ವಿಶ್ಲೇಷಣೆ ಆರಂಭಿಸಿದರು. ಅನ್ನದಾತರಿಗೆ ಶುಭ ಸೂಚನೆ ನೀಡಿದೆ ಎಂದು ಭಕ್ತರು ವಿಶ್ಲೇಷಣೆ ಮಾಡಿದರು. ಈ ನುಡಿ ಅನ್ನದಾತರ ಪಾಲಿಗೆ ಹರ್ಷ ತಂದಿದೆ. ಮುಂಗಾರು ಮಳೆ ಹಾನಿತಂದಿದೆ ಆದರೆ ಹಿಂಗಾರು ಮಳೆ ಬೆಳೆ ಉತ್ತಮವಾಗುತ್ತದೆ. ರೈತರಿಗೆ ಒಳ್ಳೆ ಫಸಲು ಬರುತ್ತೆ. ಮಳೆ ಚೆನ್ನಾಗಿ ಆಗುತ್ತದೆ. ಸಮೃದ್ದ ಬೆಳೆಯಿಂದ ರೈತರು ಸಂತುಷ್ಟಗೊಳ್ಳಲಿದ್ದಾರೆ ಎಂಬರ್ಥದಲ್ಲಿ ವಿಶ್ಲೇಷಣೆ ಮಾಡಿದರು.
ಶ್ರೀಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರೋ ದೇವರಗುಡ್ಡದ ಕಾರ್ಣಿಕ ವರ್ಷದ ಭವಿಷ್ಯವಾಣಿ ಅಂತಾನೆ ಪ್ರಸಿದ್ದ. ಸಾಕ್ಷಾತ್ ದೇವರಗುಡ್ಡದ ದೇವರೆ ಗೊರವಪ್ಪನ ಮೈಮೇಲೆ ಅವತರಿಸಿ ವರ್ಷದ ಭವಿಷ್ಯವಾಣಿ ನುಡಿಸುತ್ತಾನೆ ಅನ್ನೋದು ಕಾರ್ಣಿಕವಾಣಿಯ ವಿಶಿಷ್ಟತೆಗೆ ಸಾಕ್ಷಿಯಾಗಿದೆ. ವಿಜಯನಗರ ಜಿಲ್ಲೆ ಮೈಲಾರದ ಮಾಲತೇಶ್ ಕಾರ್ಣಿಕೋತ್ಸವ ಮುಂಗಾರು ಮಳೆಯ ಭವಿಷ್ಯ ನುಡಿದರೇ ದೇವರಗುಡ್ಡದ ಕಾರ್ಣಿಕ ಹಿಂಗಾರು ಮಳೆಯ ಭವಿಷ್ಯ ನುಡಿಯುತ್ತೆ ಎನ್ನುವ ನಂಬಿಕೆ ಸಹ ಇಲ್ಲಿಯ ಭಕ್ತರಲ್ಲಿ ಮನೆ ಮಾಡಿದೆ.
ಈ ಕಾರ್ಣಿಕವನ್ನು ರಾಜಕೀಯವಾಗಿವಾಗಿ ಸಹ ಹಲವು ದೃಷ್ಟಿಕೋನದಲ್ಲಿ ವಿಶ್ಲೇಷಣೆ ಮಾಡಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ನಾಯಕತ್ವ ಬದಲಾವಣೆಯಾಗುವದಿಲ್ಲ. ನಾಯಕತ್ವವನ್ನು ಕಾನೂನಿನ ಅಡೆತಡೆಯನ್ನೂ ಮೀರಿ ಎಲ್ಲರೂ ಒಪ್ಪಿಕೊಳ್ಳಬಹುದು ಎಂಬರ್ಥದಲ್ಲಿ ವಿಶ್ಲೇಷಣೆ ಮಾಡಲಾಗ್ತಿದೆ. ಸದ್ಯ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂಬ ವಿಶ್ಲೇಷಣೆಯನ್ನ ಭಕ್ತರು ವ್ಯಕ್ತಪಡಿಸಿದರು.












Click it and Unblock the Notifications