ಉತ್ತರ ಕರ್ನಾಟಕದ ಗ್ರಾಮೀಣ ಪ್ರತಿಭಾವಂತ ಮಕ್ಕಳ ಪೈಲಟ್ ಕನಸಿಗೆ ರೆಕ್ಕೆ: ಈ ಜಿಲ್ಲೆಯಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಸ್ಥಾಪನೆ!
ಉತ್ತರ ಕರ್ನಾಟಕದ ಗ್ರಾಮೀಣ ಪ್ರತಿಭಾವಂತ ಮಕ್ಕಳ ಪೈಲಟ್ ಕನಸಿಗೆ ರೆಕ್ಕೆ ಸಿಕ್ಕಂತಾಗಿದೆ. ಪ್ರಮುಖ ಜಿಲ್ಲೆಯಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಸ್ಥಾಪನೆ ಮಾಡುವ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಅವರು ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಚಿವ ಎಂ.ಬಿ ಪಾಟೀಲ್ ಅವರು, ಉತ್ತರ ಕರ್ನಾಟಕದ ಗ್ರಾಮೀಣ ಪ್ರತಿಭಾವಂತ ಮಕ್ಕಳ ಪೈಲಟ್ ಕನಸಿಗೆ ರೆಕ್ಕೆ: ವಿಜಯಪುರದಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ. ಉದ್ಘಾಟನೆಗೆ ಸಜ್ಜಾಗಿರುವ ವಿಜಯಪುರ ವಿಮಾನ ನಿಲ್ದಾಣವನ್ನು ವೈಮಾನಿಕ ಸಂಪರ್ಕದ ಕೇಂದ್ರವನ್ನಾಗಿಸುವುದಷ್ಟೇ ಅಲ್ಲದೆ, ವೈಮಾನಿಕ ಶಿಕ್ಷಣ, ಪೈಲೆಟ್ ತರಬೇತಿ ಹಾಗೂ ಉದ್ಯೋಗದ ಹೊಸ ತಾಣವನ್ನಾಗಿ ರೂಪಿಸುವ ನಮ್ಮ ಕಾರ್ಯ ಮುಂದುವರೆದಿದೆ ಎಂದೂ ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದ್ದಾರೆ.

ಈ ನಿಟ್ಟಿನಲ್ಲಿ, ಮಹಾರಾಷ್ಟ್ರದ ಬಾರಾಮತಿ ಮೂಲದ ಕಾರ್ವರ್ ಏವಿಯೇಷನ್ ಸಂಸ್ಥೆಯ ಹಿರಿಯ ಅಧಿಕಾರಿಗಳು ಕಳೆದ ತಿಂಗಳು ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅದರ ಮುಂದುವರೆದ ಭಾಗವಾಗಿ, ಇಂದು ವಿಜಯಪುರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಇಲ್ಲಿನ ವಿವಿಧ ಸೌಲಭ್ಯಗಳು ಹಾಗೂ ತರಬೇತಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ವಿಜಯಪುರದಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಸ್ಥಾಪಿಸಲು ಸಂಸ್ಥೆ ಮುಂದಾಗಿರುವುದು ಸಂತಸದ ವಿಚಾರ.
ಈ ಕೇಂದ್ರ ಕಾರ್ಯಾರಂಭ ಮಾಡಿದರೆ ಉತ್ತರ ಕರ್ನಾಟಕದ ಪ್ರತಿಭಾವಂತ ಯುವಜನರಿಗೆ ತಮ್ಮ ನೆಲದಲ್ಲಿಯೇ ಗುಣಮಟ್ಟದ ವೈಮಾನಿಕ ತರಬೇತಿ ಪಡೆಯುವ ಅವಕಾಶ ದೊರೆಯಲಿದೆ. ಅಲ್ಲದೆ ವಿಮಾನ ಚಾಲಕರಾಗಬೇಕು ಎಂಬ ಉತ್ತರ ಕರ್ನಾಟಕ ಭಾಗದ ಅನೇಕ ಪ್ರತಿಭಾವಂತ ಮಕ್ಕಳ ಕನಸಿಗೆ ರೆಕ್ಕೆಗಳನ್ನು ನೀಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್
ವಿಜಯಪುರದ ಗಾಂಧಿ ಭವನದಲ್ಲಿ ಈಚೆಗೆ ಗ್ರಾಮೀಣ ಭಾಗದ 40 ಪತ್ರಕರ್ತರಿಗೆ ಬಸ್ ಪಾಸ್ ಗಳನ್ನು ವಿತರಿಸಲಾಗಿದೆ. ಗ್ರಾಮೀಣ ಭಾಗಗಳಿಂದ ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧೆಡೆ ಸಂಚರಿಸಿ, ಜನರ ಸಮಸ್ಯೆಗಳನ್ನು ಅರಿತು ವರದಿ ಮಾಡಲು ಈ ಸೌಲಭ್ಯ ನೆರವಾಗಲಿದೆ. ಮಹಾತ್ಮ ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸುವಲ್ಲಿ ಗ್ರಾಮೀಣ ಪತ್ರಕರ್ತರ ಪಾತ್ರ ಮಹತ್ವದ್ದು. ರೈತರು, ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಜನರ ಸಮಸ್ಯೆಗಳಿಗೆ ನಿಮ್ಮ ಲೇಖನಿ ಧ್ವನಿಯಾದಾಗ, ಅದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನ ಸೆಳೆದು, ಪರಿಹಾರದ ದಾರಿ ತೋರಿಸುತ್ತದೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದ್ದಾರೆ.
ಕಾಲ ಬದಲಾಗುತ್ತಿದೆ; AI ಸೇರಿದಂತೆ ಹೊಸ ತಂತ್ರಜ್ಞಾನಗಳೊಂದಿಗೆ ಪತ್ರಿಕೋದ್ಯಮವೂ ವೇಗವಾಗಿ ಬದಲಾಗುತ್ತಿದೆ. ಸಮಯದ ಜೊತೆ ನಾವು ಕೂಡ ಹೆಜ್ಜೆ ಹಾಕಬೇಕು. ತಂತ್ರಜ್ಞಾನ ಎಷ್ಟೇ ಬದಲಾದರೂ, ಗ್ರಾಮೀಣ ಜನರೊಂದಿಗೆ ಪತ್ರಿಕೆಗಳು ಬೆಳೆಸಿಕೊಂಡಿರುವ ನಂಬಿಕೆ ಮತ್ತು ನಂಟು ಅಮೂಲ್ಯ ಎಂದಿದ್ದಾರೆ.


Click it and Unblock the Notifications
