ಕರ್ನಾಟಕದಲ್ಲಿ ಮನೆ ಖರೀದಿ ಮಾಡುವ ಜನರಿಗೆ ಸಿಹಿಸುದ್ದಿ
ಬೆಂಗಳೂರು, ಏಪ್ರಿಲ್ 26: ಕರ್ನಾಟಕದಲ್ಲಿ ಮನೆ ಖರೀದಿ ಮಾಡುವ ಜನರಿಗೆ ಸಿಹಿಸುದ್ದಿ ಒಂದಿದೆ. ರಾಜ್ಯ ಸರ್ಕಾರ ರೇರಾಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಮೇ ಅಂತ್ಯದ ವೇಳೆಗೆ ಪ್ರಾಧಿಕಾರ ಕಾರ್ಯ ನಿರ್ವಹಣೆ ಮಾಡುವ ನಿರೀಕ್ಷೆ ಇದೆ.
ರಾಜ್ಯ ಸರ್ಕಾರ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಮೇಲ್ಮನವಿ ನ್ಯಾಯಾಧೀಕರಣಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲಿದೆ. ಮೂವರು ಸದಸ್ಯರು ಮತ್ತು ಒಬ್ಬರು ಅಧ್ಯಕ್ಷರನ್ನು ರೇರಾ ಮೇಲ್ಮನವಿ ಪ್ರಾಧಿಕಾರ ಹೊಂದಿದೆ.

ಸುಮಾರು ಒಂದು ವರ್ಷದಿಂದ ರೇರಾ ಮೇಲ್ಮನವಿ ಪ್ರಾಧಿಕಾರ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಕಳೆದ ವಾರ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ಮಹೇಂದ್ರ ಜೈನ್ ಅವರನ್ನು ತಾಂತ್ರಿಕ ಮತ್ತು ಆಡಳಿತಾತ್ಮಕ ಸದಸ್ಯರಾಗಿ ನೇಮಕ ಮಾಡಿದೆ. ಉಳಿದ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಮೇ ಅಂತ್ಯಕ್ಕೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಸಿಜೆ ಅಭಿಪ್ರಾಯ ಸಂಗ್ರಹ: ಸರ್ಕಾರ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಲಹೆ ಪಡೆದ ಬಳಿಕ ರೇರಾಕ್ಕೆ ಅಧ್ಯಕ್ಷರನ್ನು ನೇಮಕ ಮಾಡಲಿದೆ. 2023ರ ಜೂನ್‌ನಲ್ಲಿ ರೇರಾ ಮೇಲ್ಮನವಿ ಪ್ರಾಧಿಕಾರ ಕೊನೆಯ ಆದೇಶ ಹೊರಡಿಸಿತ್ತು. ಬಿಲ್ಡರ್‌ಗಳು ಮತ್ತು ಮನೆ ಖರೀದಿ ಮಾಡುವವರ ನಡುವಿನ ವ್ಯಾಜ್ಯಗಳನ್ನು ಪ್ರಾಧಿಕಾರ ಬಗೆಹರಿಸಲಿದ್ದು, ಇದುವರೆಗೂ ಸುಮಾರು 500 ಆದೇಶಗಳನ್ನು ಹೊರಡಿಸಿದೆ.
ಸದ್ಯ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ಮಹೇಂದ್ರ ಜೈನ್ ಅವರನ್ನು ರೇರಾಕ್ಕೆ ತಾಂತ್ರಿಕ ಮತ್ತು ಆಡಳಿತಾತ್ಮಕ ಸದಸ್ಯರಾಗಿ ನೇಮಕ ಮಾಡಿದೆ. ಆದರೆ ಸದಸ್ಯರ ನೇಮಕ ವಾಗದ ಹೊರತು ಅವರು ಏಕಾಂಗಿಯಾಗಿ ಆದೇಶಗಳನ್ನು ನೀಡಲು ಬರುವುದಿಲ್ಲ.
ನಿಯಮಗಳ ಪ್ರಕಾರ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಮೇಲ್ಮನವಿ ನ್ಯಾಯಾಧೀಕರಣಕ್ಕೆ ನೇಮಕವಾಗುವ ಸದಸ್ಯರ ಅಧಿಕಾರಾವಧಿ 5 ವರ್ಷಗಳ ಕಾಲ ಇರುತ್ತದೆ. ಇಲ್ಲವೇ 65 ವರ್ಷವನ್ನು ಮೀರಿದರೆ ಸದಸ್ಯರು ನಿವೃತ್ತರಾಗುತ್ತಾರೆ.
ಈ ನೇಮಕಾತಿ ವಿಚಾರ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆಯ ಸಮಯದಲ್ಲಿ ಸರ್ಕಾರ ಮೂರು ವಾರಗಳಲ್ಲಿ ರೇರಾಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲಾಗುವುದು ಎಂದು ಹೈಕೋರ್ಟ್‌ಗೆ ಹೇಳಿಕೆ ನೀಡಿತ್ತು. ನೇಮಕ ಪೂರ್ಣಗೊಂಡ ಬಳಿಕ ಗೃಹ ಖರೀದಿದಾರರು ಮತ್ತು ಬಿಲ್ಡರ್‌ಗಳು ರೇರಾ ಆದೇಶಗಳನ್ನು ರೇರಾ ಮೇಲ್ಮನವಿ ಪ್ರಾಧಿಕಾರದ ಮುಂದೆ ಸಲ್ಲಿಕೆ ಮಾಡಬಹುದಾಗಿದೆ.
ಬೆಂಗಳೂರಿನ ಮ್ಯಾಥ್ಯೂ ಥಾಮಸ್ ರೇರಾ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಮುಖ್ಯಸ್ಥರನ್ನು ನೇಮಿಸುವಂತೆ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು. ಈ ಅರ್ಜಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಅರ್ಜಿಯ ವಿಚಾರಣೆ ವೇಳೆ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಹಾಜರಾಗಿ ರೇರಾದ ಒಬ್ಬ ಸದಸ್ಯರು 2024ರ ಏಪ್ರಿಲ್ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ. ಆ ಹುದ್ದೆಯೂ ಸೇರಿದಂತೆ ಅಧ್ಯಕ್ಷರೂ ಸೇರಿದಂತೆ ಎಲ್ಲ ಸದಸ್ಯರನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದರು.
ಸರ್ಕಾರದ ಹೇಳಿಕೆ ದಾಖಲು ಮಾಡಿಕೊಂಡಿದ್ದ ಹೈಕೋರ್ಟ್ ರೇರಾದ ಅಧ್ಯಕ್ಷರು ಮತ್ತು ಸದಸ್ಯರ ನೇಮಕದಲ್ಲಿ ಯಾವುದೇ ರೀತಿಯ ವಿಳಂಬವಿಲ್ಲದೆ ನೇಮಕ ಮಾಡುವ ಪ್ರಕ್ರಿಯೆಯನ್ನು ಆರಂಭಿಸಬೇಕು. ಸದಸ್ಯರ ನಿವೃತ್ತಿಯ ನಂತರ ತಕ್ಷಣವೇ ಅಧಿಕಾರ ವಹಿಸಿಕೊಳ್ಳುವಂತಿರಬೇಕು. ಯಾವುದೇ ರೀತಿಯ ವಿಳಂಬ ಮಾಡಬಾರದು ಎಂದು ಸರ್ಕಾರಕ್ಕೆ ಸೂಚನೆ ನೀಡಿತ್ತು.












Click it and Unblock the Notifications