KRS Dam: ಕಾವೇರಿ ವಿವಾದ ಕಾವೇರಲ್ಲ, ಕಾವೇರಿ ಕಣಿವೆ ಡ್ಯಾಂಗಳಲ್ಲಿ 106 ಟಿಎಂಸಿ ನೀರು ಸಂಗ್ರಹ
ಬೆಂಗಳೂರು, ನವೆಂಬರ್ 19: ಈ ಬಾರಿ ನೈಋತ್ಯ ಮುಂಗಾರು ಮಳೆ ಉತ್ತಮವಾಗಿ ಸುರಿದ ಕಾರಣ ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಪ್ರಮುಖವಾಗಿ ಕಾವೇರಿ ಕಣಿವೆಯ ಡ್ಯಾಂಗಳು ಭರ್ತಿಯಾಗಿದ್ದು, ಕಾವೇರಿ ವಿವಾದ ಕಾವೇರುವುದಿಲ್ಲ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಡ್ಯಾಂ ಭರ್ತಿಯಾಗಿದ್ದು, 60 ದಿನಗಳಿಂದ ನೀರಿನ ಮಟ್ಟದಲ್ಲಿ ಇಳಿಕೆಯಾಗಿಲ್ಲ. ಕಾವೇರಿ ಕಾಣಿವೆ ಮಾತ್ರವಲ್ಲ ರಾಜ್ಯದ ವಿವಿಧ ಡ್ಯಾಂಗಳಲ್ಲಿಯೂ ನೀರಿನ ಸಂಗ್ರಹ ಉತ್ತಮವಾಗಿದ್ದು, ಬೇಸಿಗೆಯಲ್ಲಿ ನೀರಿನ ಅಭಾವ ಇರುವುದಿಲ್ಲ.
ಮಾಹಿತಿಗಳ ಪ್ರಕಾರ ರಾಜ್ಯದ 14 ಪ್ರಮುಖ ಜಲಾಶಯಗಳ ಪೈಕಿ 11 ಡ್ಯಾಂಗಳಲ್ಲಿ ಶೇ 90ರಷ್ಟು ನೀರಿನ ಸಂಗ್ರಹವಿದೆ. 2023ರಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯದಲ್ಲಿ ಬರಗಾಲ ಆವರಿಸಿತ್ತು. ಡ್ಯಾಂಗಳಲ್ಲಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡಲಾಗುತ್ತಿತ್ತು, ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು.

ಕಾವೇರಿ ಕಣಿವೆ ಭರ್ತಿ: ಕಾವೇರಿ ಕಣಿವೆಯಲ್ಲಿ ಕೆಆರ್‌ಎಸ್, ಹಾರಂಗಿ, ಕಬಿನಿ ಮತ್ತು ಹೇಮಾವತಿ ಡ್ಯಾಂಗಳಿವೆ. ಕಳೆದ ವರ್ಷ ಇದೇ ಸಮಯದಲ್ಲಿ ಕಾವೇರಿ ಕಣಿವೆಯ ನಾಲ್ಕು ಡ್ಯಾಂಗಳಲ್ಲಿ ಒಟ್ಟಾಗಿ 60.73 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು. ನಾಲ್ಕು ಡ್ಯಾಂಗಳು ಸೇರಿ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 114.57 ಟಿಎಂಸಿ ಅಡಿ. ಈ ಬಾರಿ ಸದ್ಯ 106.66 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ.
ಕಬಿನಿ ಡ್ಯಾಂನಲ್ಲಿ ಶೇ 93.59ರಷ್ಟು ನೀರಿದೆ. ಕೆಆರ್‌ಎಸ್‌ನಲ್ಲಿ ಕಳೆದ 60 ದಿನಗಳಿಂದ ನೀರಿನ ಮಟ್ಟ ಒಂದೇ ರೀತಿಯಲ್ಲಿದೆ. ಹೇಮಾವತಿ ಡ್ಯಾಂ ನೀರಿನ ಮಟ್ಟ ಶೇ 90ರಷ್ಟಿದೆ. ಎರಡು ವರ್ಷದ ಬಳಿಕ ಭರ್ತಿಯಾಗಿರುವ ಕಾವೇರಿ ಕೊಳ್ಳದ ಪ್ರಮುಖ ಡ್ಯಾಂ ಕೆಆರ್‌ಎಸ್‌ನಲ್ಲಿ ನೀರಿನ ಸಂಗ್ರಹ ಇರುವ ಕಾರಣ ಬೆಂಗಳೂರು, ಮಂಡ್ಯ, ಮೈಸೂರು ಭಾಗದ ಜನರು, ಮಂಡ್ಯದ ರೈತರು ಸಂತಸಗೊಂಡಿದ್ದಾರೆ.
ನವೆಂಬರ್, ಡಿಸೆಂಬರ್ ತನಕ ಡ್ಯಾಂಗಳಲ್ಲಿ ಪೂರ್ಣ ಮಟ್ಟದ ನೀರಿನ ಸಂಗ್ರಹ ಇರುವುದು ಸಂತಸದ ವಿಚಾರವಾಗಿದೆ. ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಸಂಗ್ರಹ ಇರುವುದರಿಂದ ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುವುದಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೇಳಿದ್ದಾರೆ.
ಲಿಂಗನಮಕ್ಕಿ, ಸೂಪಾ ಮತ್ತು ವರಾಹಿ ಮೂರು ರಾಜ್ಯದ ವಿದ್ಯುತ್ ಉತ್ಪಾದನೆಯ ಪ್ರಮುಖ ಡ್ಯಾಂಗಳು. ಮೂರು ಸೇರಿ 300 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 328.18 ಟಿಎಂಸಿ ಅಡಿಗಳು. ಅಲ್ಲದೇ ಕೃಷ್ಣಾ ಕಣಿವೆಯ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 422.45 ಟಿಎಂಸಿ ಅಡಿ, ಸದ್ಯ 413.28 ಟಿಎಂಸಿ ಅಡಿಗಳ ನೀರಿದೆ. ಕಳೆದ ವರ್ಷ ಇದೇ ಸಮಯದಲ್ಲಿ 316.90 ಟಿಎಂಸಿ ಅಡಿ ನೀರು ಸಂಗ್ರಹವಿತ್ತು.
ಎಲ್ಲಾ ಡ್ಯಾಂಗಳು ಭರ್ತಿಯಾಗಿರುವ ಕಾರಣ ಬೇಸಿಗೆಯಲ್ಲಿ ನೀರು ನಿರ್ವಹಣೆಗೆ ಉತ್ತಮವಾದ ಯೋಜನೆ ರೂಪಿಸಬೇಕು ಎಂದು ತಜ್ಞರು ಹೇಳಿದ್ದಾರೆ. ಒಂದು ವೇಳೆ 2025ನೇ ಸಾಲಿನ ಮುಂಗಾರು ಆಗಮನ ತಡವಾದರೂ ಸಹ ನೀರಿನ ಕೊರತೆ ಆಗದಂತೆ ಯೋಜನೆ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯವ್ಯಕ್ತವಾಗಿದೆ.
ಕಾವೇರಿ ನದಿಯಿಂದ ಪ್ರತಿ ತಿಂಗಳು ಸುಮಾರು 3 ಟಿಎಂಸಿ ಅಡಿ ನೀರನ್ನು ಕುಡಿಯುವ ನೀರಿಗೆ ಬಳಕೆ ಮಾಡಲಾಗುತ್ತದೆ. ಅಲ್ಲದೇ ಉತ್ತರ ಕರ್ನಾಟಕ ಭಾಗದ ಕೆಲವು ಡ್ಯಾಂಗಳಿಂದ ಕುಡಿಯುವ ನೀರು ಪೂರೈಕೆಗೆ ಮಾಡಲಾಗುತ್ತದೆ. ಆದ್ದರಿಂದ ಸರಿಯಾದ ಯೋಜನೆ ರೂಪಿಸಬೇಕು ಎಂದು ತಜ್ಞರು ಹೇಳಿದ್ದಾರೆ.












Click it and Unblock the Notifications