ಜಯ ಮೃತ್ಯುಂಜಯ ಶ್ರೀಗಳನ್ನ ಮುಗಿಸಲು ಗೋಲಿಬಾರ್ ಸಂಚು: ರೇಣುಕಾಚಾರ್ಯ ಸ್ಪೋಟಕ ಹೇಳಿಕೆ
ದಾವಣಗೆರೆ , ಡಿಸೆಂಬರ್ 15: ಬೆಳಗಾವಿಯಲ್ಲಿ 2ಎ ಮೀಸಲಾತಿ ಹೋರಾಟದ ನೇತೃತ್ವ ವಹಿಸಿದ್ದ ಕೂಡಲ ಸಂಗಮ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಮುಗಿಸಲು, ಹೋರಾಟಗಾರರ ಮೇಲೆ ಗೋಲಿಬಾರ್ ಮಾಡಲು ಸಂಚು ಮಾಡಿದ್ದರು ಎಂದು ಮಾಜಿ ಶಾಸಕ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆಗೆ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಅವರು ಮಾತನಾಡಿ, ಶ್ರೀ ಜಯ ಮೃತ್ಯುಂಜಯ ಸ್ವಾಮಿಗಳು ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಪ್ರತಿಭಟನೆ ನೇತೃತ್ವ ವಹಿಸಿರುವ ಅವರನ್ನೇ ಮುಗಿಸಿದರೆ, ರಾಜ್ಯದಲ್ಲಿ ಇಡೀ ಹೋರಾಟವೇ ನಿಲ್ಲುತ್ತದೆಂದು ಗೋಲಿಬಾರ್ ಮಾಡಲು ಕೆಲವರು ಪ್ಲಾನ್ ಮಾಡಿಕೊಂಡಿದ್ದರು ಎಂದು ಆರೋಪಿಸಿದ್ದಾರೆ.

ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನಿನ್ನೆ, ಮೊನ್ನೆ 2ಎ ಮೀಸಲಾತಿ ಹೋರಾಟಕ್ಕೆ ಕರೆ ಕೊಟ್ಟಿದ್ದಾರಾ? ಪಾದಯಾತ್ರೆಯಲ್ಲಿ ನಾವೂ ಪಾಲ್ಗೊಂಡಿದ್ದೆವು. ನಿಮ್ಮದೇ ಕಾಂಗ್ರೆಸ್ಸಿನ ನಾಯಕರು, ಹಾಲಿ-ಮಾಜಿ ಸಚಿವರು, ಶಾಸಕರು ಸಹ ಈ ಹೋರಾಟದಲ್ಲಿದ್ದವರೆ. ಶ್ರೀಗಳು, ಸಮಾಜದ ಮುಖಂಡರು, ಹೋರಾಟಗಾರರ ಮೇಲೆ ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಬೇಕು. ಹೋರಾಟಗಾರರ ಲಾಠಿ ಬೀಸದೇ, ಮುತ್ತು ಕೊಡಲು ಕೇಳಬೇಕಿತ್ತಾ ಎಂಬುದಾಗಿ ಲಘುವಾಗಿ ಮಾತನಾಡಿರುವ ಗೃಹ ಸಚಿವ ಡಾ.ಪರಮೇಶ್ವರ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ರೇಣುಕಾಚಾರ್ಯ ಅವರು ಆಗ್ರಹಿಸಿದರು.
ಪಂಚಮಸಾಲಿ, ಮಲೆಗೌಡ, ಗೌಡ ಲಿಂಗಾಯತ, ದೀಕ್ಷಾ ಗೌಡಗೂ ಮೀಸಲಾತಿ, ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ನಿರಂತರ ಹೋರಾಡುತ್ತಾ ಬಂದಿದ್ದಾರೆ. ಸ್ವಾಮೀಜಿ ಮೇಲಿನ ಹಲ್ಲೆ, ದೌರ್ಜನ್ಯ, ಬಂಧನವನ್ನು ಸಮಸ್ತ ಮಠಾಧೀಶರು, ಸ್ವಾಮೀಜಿಗಳು ಖಂಡಿಸಬೇಕು ಎಂದರು.
ಪಾಕಿಸ್ತಾನ ಜಿಂದಾಬಾದ್ ಅನ್ನೋರನ್ನ ಪೋಷಿಸುವ, ಕಲ್ಲು ತೂರಾಟ ಮಾಡುವವರ, ಠಾಣೆ-ವಾಹನಗಳಿಗೆ ಬೆಂಕಿ ಹಚ್ಚಿದ್ದವರ ಮೇಲಿನ ಕೇಸ್ ಖುಲಾಸೆಗೆ ಮುಂದಾಗಿರುವ ಸಿದ್ದರಾಮಯ್ಯ ಪಂಚಮಸಾಲಿಗಳ ಹೋರಾಟದಲ್ಲಿ ಅಂತಹದ್ದೇನು ದೊಡ್ಡ ಅಪರಾಧ ಕಂಡರು? ಖಾವಿ ಕಂಡರೆ ನಿಮಗೇಕೆ ಅಷ್ಟು ದ್ವೇಷ, ಭಯ? ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಅವರು ಪ್ರಶ್ನಿಸಿದರು.
ಜಮೀರ್ ಅಹಮ್ಮದ್‌ನಂತಹ ಮತಾಂಧನಿಗೆ ಪ್ರೀತಿಸುವ ನೀವು ಅದೇ ಹಿಂದುಗಳು, ಮಠ ಮಂದಿರಗಳು, ಅಮಾಯಕ ರೈತರ ಆಸ್ತಿ, ಜಮೀನನ್ನು ವಕ್ಫ್ ಕಬಳಿಸುತ್ತಿದ್ದರೂ ಮೌನವಾಗಿದ್ದೀರಿ. ಇದು ನಿಮ್ಮ ದ್ವಂಧ್ವ ನೀತಿ, ನಿಲುವಿಗೆ ಸಾಕ್ಷಿ. ಚರ್ಚೆಗೆ ಬರಲು ಹೇಳಿ ಪಂಚಮಸಾಲಿ ಶ್ರೀ, ಸಮಾಜದವರ ಮೇಲೆ ಪೊಲೀಸರಿಂದ ದೌರ್ಜನ್ಯ ಎಸಗಿದ್ದು ಯಾವ ನ್ಯಾಯ ಎಂದು ಎಂ.ಪಿ. ರೇಣುಕಾಚಾರ್ಯ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.












Click it and Unblock the Notifications