ಆರೋಪಿ ಶ್ವೇತಾಗೌಡಗೆ ಮೈಸೂರು ಪಾಕ್ ಹೆಸರಿನ ರಾಜಕಾರಣಿ ದುಬಾರಿ ಥಾರ್ ಗಿಫ್ಟ್, ಏನಿದು ಹೊಸ ಟ್ವಿಸ್ಟ್?
ಚಿನ್ನದ ವ್ಯಾಪಾರಿಗಳಿಗೆ ಕೋಟ್ಯಂತರ ರೂಪಾಯಿ ಹಣ ವಂಚನೆ ಪ್ರಕರಣದಲ್ಲಿ ಶ್ವೇತಾಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೇಸ್‌ನಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಪೊಲೀಸರು ನಿನ್ನೆ ವಿಚಾರಣೆಯೂ ನಡೆಸಿದ್ದು, ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ. ಇದೀಗ ಈ ಕೇಸ್‌ನಲ್ಲಿ ಮತ್ತೊಬ್ಬ ರಾಜಕಾರಣಿಯ ಹೆಸರು ಕೇಳಿಬಂದಿದೆ.
ಶ್ವೇತಾಗೌಡ ಅವರು ಫೇಸ್‌ಬುಕ್ ಮೂಲಕ ವರ್ತೂರು ಪ್ರಕಾಶ್ ಅವರನ್ನು ಪರಿಚಯ ಮಾಡಿಕೊಂಡಿದ್ದರು. ಬೆಂಗಳೂರಿನ ಚಿನ್ನದ ಅಂಗಡಿ ಮಾಲೀಕರನ್ನು ವರ್ತೂರು ಅವರೇ ಪರಿಚಯಿಸಿದ್ದರು. ಬಳಿಕ ಇಬ್ಬರೂ ಸೇರಿ ಈ ಕೋಟ್ಯಂತರ ಹಣ ವಂಚನೆ ಮಾಡಿರುವುದಾಗಿ ಶ್ವೇತಾಗೌಡ ಹೇಳಿದ್ದಾಗಿ ವರದಿಯಾಗಿತ್ತು. ಅದರಂತೆ ವರ್ತೂರು ಪ್ರಕಾಶ್ ನಿನ್ನೆ ವಿಚಾರಣೆಗೆ ಹಾಜರಾಗಿ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.

ಇದರ ಬೆನ್ನಲ್ಲೇ ಮತ್ತೊಬ್ಬ ರಾಜಕಾರಣಿಯ ಹೆಸರು ಕೂಡ ಈ ಕೇಸ್‌ನಲ್ಲಿ ತಳುಕು ಹಾಕಿಕೊಂಡಿದೆ. ಕೋಲಾರ ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕ ಕೂಡ ಶ್ವೇತಾ ಗೌಡ ಅವರಿಗೆ ಆಪ್ತರಾಗಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ ಆ ರಾಜಕಾರಣಿಯ ಹೆಸರನ್ನು ಶ್ವೇತಾಗೌಡ "ಮೈಸೂರು ಪಾಕ್" ಎಂದು ಸೇವ್ ಮಾಡಿಕೊಂಡಿರುವುದು ತನಿಖೆಗೆ ವೇಳೆ ಬಹಿರಂಗವಾಗಿದೆ.
ಈ ರಾಜಕಾರಣಿಯನ್ನು ಫೇಸ್‌ಬುಕ್ ಮೂಲಕ ಪರಿಚಯ ಮಾಡಿಕೊಂಡು ಕೋಲಾರದಲ್ಲಿ ಭೇಟಿಯೂ ಆಗಿದ್ದರು ಎನ್ನಲಾಗಿದೆ. ಆ ರಾಜಕಾರಣಿ ಶ್ವೇತಾಗೌಡಗೆ ಮೈಸೂರು ಪಾಕ್ ತಂದುಕೊಟ್ಟಿದ್ದರು. ಈ ಕಾರಣಕ್ಕೆ ಅವರ ಹೆಸರನ್ನು ಮೈಸೂರು ಪಾಕ್ ಎಂದೇ ಸೇವ್ ಮಾಡಿಕೊಂಡಿದ್ದರು ಎನ್ನಲಾಗಿದೆ.

ಬಿಸಿನೆಸ್ ಹೆಸರಿನಲ್ಲಿ ರಾಜಕಾರಣಿ ಜೊತೆ ಸಖತ್ ಕ್ಲೋಸ್ ಆಗಿದ್ದು, ಇವರಿಬ್ಬರ ನಡುವಿನ ಸ್ನೇಹದ ಗುರುತಾಗಿ ಆ ರಾಜಕಾರಣಿ ಶ್ವೇತಾಗೆ ದುಬಾರಿ ಥಾರ್ ಜೀಪ್ ಅನ್ನು ಗಿಫ್ಟ್ ಕೊಟ್ಟಿರುವುದಾಗಿ ತಿಳಿದುಬಂದಿದೆ. ಅದೇ ಜೀಪ್‌ನಲ್ಲೇ ಶ್ವೇತಾ ಮೈಸೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದರು ಎಂದು ಹೇಳಲಾಗಿದೆ. ಆ ರಾಜಕಾರಣಿ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಏನಿದು ಪ್ರಕರಣ?: ಶ್ವೇತಾಗೌಡ ಎಂಬಾಕೆ ಚಿನ್ನದ ವ್ಯಾಪಾರಿಗೆ ಕೋಟ್ಯಂತರ ರೂಪಾಯಿ ಹಣ ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ಬಂಧಿಸಿದ್ದಾರೆ. ಈ ವಂಚನೆ ಪ್ರಕರಣದಲ್ಲಿ ನನ್ನೊಂದಿಗೆ ವರ್ತೂರು ಪ್ರಕಾಶ್ ಅವರು ಕೂಡ ಶಾಮೀಲಾಗಿದ್ದಾರೆ ಎಂದು ವಿಚಾರಣೆ ವೇಳೆ ಮಾಹಿತಿ ನೀಡಿದ್ದು, ಇದರಿಂದ ವರ್ತೂರು ಸಂತೋಷ್ ಅವರಿಗೂ ಇದೀಗ ಸಂಕಷ್ಟ ಎದುರಾಗಿದೆ.
ಆರೋಪಿ ಶ್ವೇತಾ ನೀಡಿದ ಮಾಹಿತಿ ಮೇರೆಗೆ ಪೊಲೀಸರು ವಿಚಾರಣೆಗೆ ಬರುವಂತೆ ವರ್ತೂರು ಪ್ರಕಾಶ್ ಅವರಿಗೆ ನೋಟಿಸ್ ನೀಡಿದ್ರು. ಆದರೆ ನಿನ್ನೆ ವರ್ತೂರು ಪ್ರಕಾಶ್ ವಿಚಾರಣೆಗೆ ಹಾಜರಾಗಿದ್ರು. ವಿಚಾರಣೆಗೆ ಹಾಜರಾಗದೆ ಇದ್ದರೆ, ಯಾವ ಕ್ಷಣದಲ್ಲಾದರೂ ಬಂಧಿಸುವ ಸಾಧ್ಯತೆಯೂ ಇತ್ತು. ವರ್ತೂರು ಪ್ರಕಾಶ್ ಅವರಿಗೆ ಶ್ವೇತಾ ಫೇಸ್‌ಬುಕ್ ಮೂಲಕ ಪರಿಚಯವಾಗಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ ಶ್ವೇತಾ, ನಂಬರ್ ಪಡೆದುಕೊಂಡಿದ್ದರು.
ಬಳಿಕ ವಾಟ್ಸಪ್‌ನಲ್ಲೂ ಫುಲ್ ಚಾಟಿಂಗ್ ನಡೆದು ಪ್ರಕಾಶ್ ಅವರ ಹೆಸರನ್ನು ಶ್ವೇತಾ ತಮ್ಮ ಫೋನ್‌ನಲ್ಲಿ "ಗುಲಾಬ್ ಜಾಮೂನ್" ಎಂದು ಸೇವ್ ಮಾಡಿಕೊಂಡಿದ್ದರು ಎಂದು ಬಹಿರಂಗವಾಗಿತ್ತು. ನಿನ್ನೆ ವಿಚಾರಣೆ ಮುಗಿಸಿ ಮಾತನಾಡಿದ್ದ ವರ್ತೂರು ಪ್ರಕಾಶ್ ಆ ಆರೋಪಗಳೆಲ್ಲ ಸುಳ್ಳು, ಆಕೆ ಇತ್ತೀಚೆಗಷ್ಟೇ ಪರಿಚಯ ಎಂದಿದ್ದರು. ಇದೀಗ ಮತ್ತೊಬ್ಬ ರಾಜಕಾರಣಿ ಹೆಸರು ಕೇಸ್‌ನಲ್ಲಿ ಮುನ್ನೆಲೆಗೆ ಬಂದಿದೆ.












Click it and Unblock the Notifications