Go Ru Channabasappa: 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಗೊ.ರು. ಚನ್ನಬಸಪ್ಪ ಆಯ್ಕೆ
ಬೆಂಗಳೂರು, ನವೆಂಬರ್ 20: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಈ ವರ್ಷದ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಈಗಾಗಲೇ ಘೋಷಿಸಲಾಗಿದೆ. ಕನ್ನಡದ ಕಂಪು ಪಸರಿಸುವ ಈ ಸಮ್ಮೇಳನಕ್ಕೆ ಸಮ್ಮೇಳನದ ಅಧ್ಯಕ್ಷರಾಗಿ 94 ವರ್ಷದ ಗೊ.ರು.ಚನ್ನಬಸಪ್ಪನವರು ಆಯ್ಕೆಯಾಗಿದ್ದಾರೆ ಎಂದು ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿಯವರು ಮಾಹಿತಿ ನೀಡಿದ್ದಾರೆ.
ಇದೇ ವರ್ಷಾಂತ್ಯಾಕ್ಕೆ ಹಳೇ ಮೈಸೂರು ಭಾಗದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಡಿಸಂಬರ್ 20, ,21 ಮತ್ತು 22ರಂದು ಮೂರು ದಿನ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ. ಇದಕ್ಕೆ ಚಿಕ್ಕಮಗಳೂರು ಜಿಲ್ಲೆಯ ತೆರಿಕೆರೆಯಲ್ಲಿ ಹುಟ್ಟಿ ಬೆಳೆದ, ಜಾನಪದ ಸಾಹಿತಿ ಗೊ.ರು.ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಬುಧವಾರ ಬೆಂಗಳೂರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಆಯ್ಕೆಯ ನಂತರ ನಾಡೋಜ ಡಾ.ಮಹೇಶ ಜೋಷಿಯವರು ದೂರವಾಣಿಯ ಮೂಲಕ ಗೊ.ರು.ಚ ಅವರಿಗೆ ವಿಷಯವನ್ನು ತಿಳಿಸಿ ಅಭಿನಂದಿಸಿದರು. ಈ ವೇಳೆ ಅವರು ತಾವು ಸಂತೋಷದಿಂದ ಒಪ್ಪಿರುವುದಾಗಿ ಜೋಶಿಯವರಿಗೆ ತಿಳಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮೂಲಗಳು ತಿಳಿಸಿವೆ.
ಸಮ್ಮೇಳನಕ್ಕೆ ಅಗತ್ಯ ಸಿದ್ಧತೆಯಲ್ಲಿ ಸರ್ಕಾರ, ಕಸಾಪ
ಸರಿಯಾಗಿ ಇನ್ನೊಂದು ತಿಂಗಳಲ್ಲಿ ಸಕ್ಕರೆ ನಾಡು ಮಂಡ್ಯ ಪಟ್ಟಣದಲ್ಲಿ ಮೂರು ದಿನಗಳ ಅದ್ಧೂರಿ ಸಮ್ಮೇಳನ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಸಾಹಿತ್ಯ ಪರಿಷತ್ತು ಹಾಗೂ ರಾಜ್ಯ ಸರ್ಕಾರವು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮೂರು ದಿನಗಳ ಕಾಲ ಯಾವ ವ್ಯತ್ಯಾಸಗಳು ಆಗದಂತೆ ಅಗತ್ಯ ವ್ಯವಸ್ಥೆ ಕೈಗೊಳ್ಳಲು ಜಿಲ್ಲಾಡಳಿತ ಸಜ್ಜಾಗಿದೆ.
ಲಕ್ಷಾಂತರ ಕನ್ನಡಾಭಿಮಾನಿಗಳು ಈ ಸಮ್ಮೇಳನಕ್ಕೆ ಆಗಮಿಸುವ ನಿರೀಕ್ಷೆ ಇದೆ. ಸಮ್ಮೇಳನದಲ್ಲಿ ಸನ್ಮಾನ, ಪುಸ್ತಕ ಬಿಡುಗಡೆ, ಕನ್ನಡ ನೆಲ ಜಲ ಕುರಿತು ಚರ್ಚೆ, ಸಂವಾದ ಜೊತೆಗೆ ಮಹತ್ವ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ರಾಜಕೀಯ ಗಣ್ಯರು ಸೇರಿದಂತೆ ಅನೇಕ ಹಿರಿಯ ಸಾಹಿತ್ಯಗಳು, ಕನ್ನಡಪರ ಹೋರಾಟಗಾರರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಕಳೆದ ವರ್ಷ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮಧ್ಯ ಕರ್ನಾಟಕ ಜಿಲ್ಲೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯಲ್ಲಿ ವಿಜೃಂಭಣೆಯಿಂದ ನಡೆದಿತ್ತು. ಅಂದು ಹಿರಿಯ ಸಾಹಿತಿ ದೊಡ್ಡರಂಗೇಗೌಡರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಈ ಬಾಗಿಯ ಮಂಡ್ಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಗೊ.ರು.ಚನ್ನಬಸಪ್ಪ ಅವರು ವಹಿಸಲಿದ್ದಾರೆ.












Click it and Unblock the Notifications