Industry: ಲಿಂಗಾಯತರು ಕೈಗಾರಿಕಾ ರಂಗಕ್ಕೆ ಧುಮುಕಬೇಕು: ಸಚಿವ ಎಂ.ಬಿ.ಪಾಟೀಲ ಕರೆ
ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯವು ಶಿರಸಂಗಿ ಲಿಂಗರಾಜ ದೇಸಾಯಿ, ವಾರದ ಮಲ್ಲಪ್ಪ, ಬಿ.ವಿ.ಭೂಮರೆಡ್ಡಿ ಅವರಂತಹ ಸಾಹಸಿ ಉದ್ಯಮಿಗಳ ದೀರ್ಘ ಇತಿಹಾಸ ಹೊಂದಿದೆ. ಆದ್ದರಿಂದ ಕೇವಲ ಕೃಷಿಗೆ ಸೀಮಿತರಾಗದೆ, ಸಮುದಾಯದ ಯುವಜನರು ಉದ್ಯಮ ವಲಯಕ್ಕೆ ಧುಮುಕಿ ಬೆಳವಣಿಗೆ ಹೊಂದಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಕರೆ ನೀಡಿದರು.
ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಝಿನೆಸ್ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಗುರುವಾರ ಮಾತನಾಡಿದರು.

ಸಮುದಾಯದಲ್ಲಿ ಗುಬ್ಬಿ ತೋಟದಪ್ಪ, ಸರ್ ಪುಟ್ಟಣ್ಣ ಶೆಟ್ಟಿ ಅವರಂತಹ ಮಹಾಮಹಿಮರು ಉದ್ಯಮಶೀಲರಾಗಿ ಸಾಧನೆಗಳನ್ನು ಮಾಡಿ, ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟಿದ್ದಾರೆ. 1906ರಷ್ಟು ಹಿಂದೆಯೇ ಶಿರಸಂಗಿಯ ದೇಸಾಯಿ ಅವರಿಂದ ಇದಕ್ಕೆ ಭದ್ರ ಬುನಾದಿ ಬಿದ್ದಿದೆ. ಜತೆಗೆ ವೀರಶೈವ ಮಹಾಸಭಾ ಕೂಡ ಇದರಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಇದರಿಂದಾಗಿ ವೀರಶೈವ ಲಿಂಗಾಯತ ಸಮುದಾಯವು ವ್ಯಾಪಾರ ವಹಿವಾಟು ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಯಶಸ್ಸು ಕಾಣುವುದು ಸಾಧ್ಯವಾಗಿದೆ ಎಂದು ಅವರು ಮಹನೀಯರ ಹಾದಿಯನ್ನು ಸ್ಮರಿಸಿದರು.
ಕೈಗಾರಿಕೋದ್ಯಮ ಬಗ್ಗೆ ಉದಾಸೀನ ಬೇಡ
ನಾವು ಕೈಗಾರಿಕೆ, ವ್ಯಾಪಾರ, ಉದ್ಯಮ ಇತ್ಯಾದಿಗಳನ್ನು ಉದಾಸೀನ ಮಾಡಬಾರದು. ಇವು ಕೃಷಿಗೆ ಪೂರಕವಾಗಿ ನಮ್ಮ ಸಮುದಾಯದ ಆರ್ಥಿಕ ಬೆಳವಣಿಗೆಗೆ ಆಧುನಿಕ ಕಾಲದಲ್ಲಿ ನಿರ್ಣಾಯಕವಾಗಿವೆ. ಸರ್ಕಾರದ ನೀತಿಗಳು ಕೂಡ ಉಪಯುಕ್ತವಾಗಿವೆ. ರಾಜ್ಯದಲ್ಲಿ ಯಾವುದೇ ಭಾಗದಲ್ಲಾದರೂ ಕೈಗಾರಿಕಾ ಬೆಳವಣಿಗೆಗೆ ಸೂಕ್ತ ಕಾರ್ಯ ಪರಿಸರ ಇದೆ. ಸಮುದಾಯದ ಪ್ರತಿಭಾವಂತರು ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಈ ರೀತಿಯ ಸಮಾವೇಶಗಳನ್ನು ರಾಜ್ಯ ಸರ್ಕಾರವು ಪ್ರೋತ್ಸಾಹಿಸುತ್ತದೆ. ಇದರಿಂದ ಅಸ್ಮಿತೆ, ನೆಟ್‌ವರ್ಕಿಂಗ್ ಮತ್ತು ಹೂಡಿಕೆಗೆ ಇರುವ ಅವಕಾಶಗಳು ಗೊತ್ತಾಗುತ್ತವೆ. ರಾಜ್ಯದಲ್ಲಿ ನಾವೀನ್ಯತೆ, ಸಂಶೋಧನೆ, ತಯಾರಿಕೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಮತ್ತಿತರ ವಲಯಗಳಲ್ಲಿ ಉಜ್ವಲ ಅವಕಾಶಗಳಿವೆ ಎಂದು ಅವರು ಅಭಿಪ್ರಾಯಪಟ್ಟರು.
ಐಟಿ-ಬಿಟಿ ಇಲಾಖೆ ಜತೆ ಮಹತ್ವ ಸಭೆ
ಈ ಕಾರ್ಯಕ್ರಮಕ್ಕೂ ಮುನ್ನ ರಾಜ್ಯ ಕೈಗಾರಿಕಾ ಇಲಾಖೆ ಹಾಗೂ ಐಟಿ/ಬಿಟಿ ಇಲಾಖೆಗಳ ವತಿಯಿಂದ ಜಂಟಿಯಾಗಿ ಕೈಗೊಳ್ಳಬೇಕಿರುವ ಯೋಜನೆಗಳ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಎಂಬಿ ಪಾಟೀಲರು ಸಭೆ ನಡೆಸಿ ಸವಿಸ್ತಾರವಾಗಿ ಚರ್ಚಿಸಿದರು. ಈ ಚರ್ಚೆಯು ಕರ್ನಾಟಕದ ಕೈಗಾರಿಕಾ ಬೆಳವಣಿಗೆ, ಉದ್ಯೋಗ ಸೃಷ್ಟಿ, ಆರ್ಥಿಕ ಪ್ರಗತಿ ಹಾಗೂ ಐಟಿ-ಬಯೋಟೆಕ್ನಾಲಜಿ ಕ್ಷೇತ್ರಗಳಲ್ಲಿ ಪರಸ್ಪರ ಸಹಯೋಗದ ಅವಕಾಶಗಳನ್ನು ಇನ್ನಷ್ಟು ಬಲಪಡಿಸುವ ದಿಶೆಯಲ್ಲಿ ಮಹತ್ವದ್ದಾಗಿದೆ. ಯಾವೆಲ್ಲ ಯೋಜನೆಗಳು ಜಾರಿಗೆ ಬರಲಿವೆ. ಎರಡು ಇಲಾಖೆಗಳು ಯೋಜನೆ ಮತ್ತು ಯೋಚನೆಗಳ ಬಗ್ಗೆ ಅಧಿಕೃತ ಮಾಹಿತಿ ಮುಂದಿನ ದಿನಗಳಲ್ಲಿ ಸಿಗಲಿದೆ.












Click it and Unblock the Notifications