ಬೆಂಗಳೂರಿನಲ್ಲಿ 'ವಿಶ್ವ ಕುಂದಾಪ್ರ ಕನ್ನಡ ಸಮ್ಮೇಳನ-2027' ಘೋಷಣೆ: ಜಾಗತಿಕ ಭಾಷಾ ಜಾತ್ರೆಗೆ ಭರ್ಜರಿ ಸಿದ್ಧತೆ

ಬೆಂಗಳೂರು: ಕರಾವಳಿಯ ವಿಶಿಷ್ಟ ಸೊಗಡಿನ ಭಾಷೆಯಾದ ಕುಂದಾಪ್ರ ಕನ್ನಡ ಈಗ ಕೇವಲ ಒಂದು ಪ್ರಾದೇಶಿಕ ಭಾಷೆಯಾಗಿ ಉಳಿದಿಲ್ಲ, ಬದಲಾಗಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ. ಇದರ ಪ್ರತಿರೂಪವಾಗಿ ರಾಜಧಾನಿ ಬೆಂಗಳೂರಿನ ಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.) ಕಳೆದ ಎಂಟು ವರ್ಷಗಳಿಂದ ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವ ಕಾರ್ಯಕ್ರಮ ಈ ಬಾರಿ ಜಾಗತಿಕ ಸ್ವರೂಪ ಪಡೆದುಕೊಂಡಿದೆ. ಇದೇ ಸಂಭ್ರಮದಲ್ಲಿ 'ವಿಶ್ವ ಕುಂದಾಪ್ರ ಕನ್ನಡ ಸಮ್ಮೇಳನ-2027' ಎಂಬ ಬೃಹತ್ ಕಾರ್ಯಕ್ರಮದ ಅದ್ಧೂರಿ ಘೋಷಣೆಯನ್ನು ಮಾಡಲಾಗಿದೆ.

ವಿಜಯನಗರದ ಬಂಟರ ಸಂಘದ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ 'ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ'ಯಲ್ಲಿ ಕರಾವಳಿ ಭಾಗದ ಅನೇಕ ಅತಿಥಿ ಗಣ್ಯರು, ಕಲಾವಿದರು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಈ ಐತಿಹಾಸಿಕ ಬೃಹತ್ ಘೋಷಣೆಯನ್ನ ಮಾಡಲಾಯಿತು. ಇದು ಕೇವಲ ಒಂದು ದಿನಾಚರಣೆಯಾಗಿರದೆ, ವಿಶ್ವದಾದ್ಯಂತ ನೆಲೆಸಿರುವ ಕುಂದಾಪುರ ಮೂಲದ ಕನ್ನಡಿಗರನ್ನ ಒಂದೇ ವೇದಿಕೆಯಡಿ ಸೇರಿಸುವ ಜಾಗತಿಕ ಭಾಷಾ ಜಾತ್ರೆಯಾಗಲಿದೆ ಎಂದು ಸಂಘಟಕರು ಭರವಸೆ ವ್ಯಕ್ತಪಡಿಸಿದ್ದಾರೆ.

Global Festival

ಬೃಹತ್ ಜಾಗತಿಕ ಭಾಷಾ ಜಾತ್ರೆಯಾಗಿ 'ಕುಂದಾಪ್ರ ಕನ್ನಡ ಹಬ್ಬ'

ಕುಂದಾಪುರ ಭಾಷೆ ತನ್ನದೇ ಆದ ವಿಶಿಷ್ಟ ಶೈಲಿ, ಹಾಸ್ಯ ಪ್ರಜ್ಞೆ ಹಾಗೂ ವಾತ್ಸಲ್ಯಭರಿತ ಪದಗಳ ಬಳಕೆಯಿಂದ ಎಲ್ಲರ ಗಮನ ಸೆಳೆದಿದೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ, ಸಂಗೀತ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಕುಂದಾಪ್ರ ಕನ್ನಡ ಹಬ್ಬ ಕೇವಲ ಕರಾವಳಿಗೆ ಸೀಮಿತವಾಗದೆ ವಿಶ್ವಾದ್ಯಂತ ಪಸರಿಸಿದೆ. ಈ ಜನಪ್ರಿಯತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಪ್ರತಿಷ್ಠಾನವು 2027ರಲ್ಲಿ ಬೃಹತ್ ಮಟ್ಟದ 'ವಿಶ್ವ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ'ವನ್ನು ಆಯೋಜಿಸಲು ಸಕಲ ಸಿದ್ಧತೆಗಳನ್ನು ಈಗಿನಿಂದಲೇ ಆರಂಭಿಸಿದೆ.

ಇದು ಭಾಷಾಭಿಮಾನ, ಸಂಸ್ಕೃತಿ, ಕಲೆ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಹೆಜ್ಜೆಯಾಗಿದೆ. ಈ ಭಾಷೆಯ ಉಳಿವು ಹಾಗೂ ಬೆಳವಣಿಗೆಯ ನಿಟ್ಟಿನಲ್ಲಿ ಇದು ಹೊಸ ಮೈಲಿಗಲ್ಲಾಗಲಿದೆ.

ಅರಮನೆ ಮೈದಾನದಲ್ಲಿ ಮೂರು ಲಕ್ಷಕ್ಕೂ ಅಧಿಕ ಜನರ ನಿರೀಕ್ಷೆ: ಡಾ.ದೀಪಕ್ ಶೆಟ್ಟಿ

ಕಾರ್ಯಕ್ರಮದಲ್ಲಿ ಈ ಯೋಜನೆಯ ಕುರಿತು ಮಾತನಾಡಿದ ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ.ದೀಪಕ್ ಶೆಟ್ಟಿ ಬಾರ್ಕೂರು ಅವರು, "ವಿಶ್ವದ ಮೂಲೆ ಮೂಲೆಗಳಲ್ಲಿ ಪ್ರತ್ಯೇಕವಾಗಿ ನಡೆಯುತ್ತಿರುವ ಕುಂದಾಪ್ರ ಕನ್ನಡ ದಿನಾಚರಣೆಗಳನ್ನು ಬೃಹತ್ ಪ್ರಮಾಣದಲ್ಲಿ ಒಂದೇ ಕಡೆ ಆಯೋಜಿಸಿದರೆ ಹೇಗೆ ಎಂಬ ಕಲ್ಪನೆ ಹಾಗೂ ಕನಸಿನೊಂದಿಗೆ ನಾವು ಈ ದೊಡ್ಡ ಸಾಹಸಕ್ಕೆ ಕೈಹಾಕಿದ್ದೇವೆ," ಎಂದು ಅವರು ಹೆಮ್ಮೆಯಿಂದ ಘೋಷಿಸಿದರು.

ಈ ಐತಿಹಾಸಿಕ ಕಾರ್ಯಕ್ರಮವು ಬೆಂಗಳೂರಿನ ಅರಮನೆ ಮೈದಾನದ ವಿಶಾಲವಾದ ರಾಯಲ್ ತ್ರಿಪುರವಾಸಿನಿಯಲ್ಲಿ 2027ರ ಜನವರಿ 30 ಮತ್ತು 31ರಂದು ಎರಡು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಈ ಹಿಂದೆಂದೂ ಕಂಡರಿಯದಂತಹ ಅದ್ಭುತ ರೀತಿಯಲ್ಲಿ ನಡೆಯಲಿರುವ ಈ ಭಾಷಾ ಜಾತ್ರೆಯಲ್ಲಿ ದೇಶ-ವಿದೇಶಗಳಿಂದ ಸುಮಾರು ಮೂರು ಲಕ್ಷಕ್ಕೂ ಅಧಿಕ ಅಭಿಮಾನಿಗಳು, ಭಾಷಾ ಪ್ರೇಮಿಗಳು ಸೇರುವ ನಿರೀಕ್ಷೆ ಇದೆ ಎಂದು ವಿವರಿಸಿದರು. ಕರಾವಳಿಯ ಸಂಸ್ಕೃತಿಯನ್ನ ಬಿಂಬಿಸುವ ಮಳಿಗೆಗಳು, ಕಲಾ ಪ್ರದರ್ಶನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿರಲಿವೆ.

ಗಣ್ಯರ ಸಮ್ಮುಖದಲ್ಲಿ ಅದ್ಧೂರಿ ಘೋಷಣೆ: ಕೋಟ ಶ್ರೀನಿವಾಸ ಪೂಜಾರಿ, ರವಿ ಬಸ್ರೂರು ಭಾಗಿ

ಈ ಘೋಷಣಾ ಸಮಾರಂಭದಲ್ಲಿ ಕರಾವಳಿಯ ಪ್ರಮುಖ ರಾಜಕೀಯ ಹಾಗೂ ಸಿನಿಮಾ ರಂಗದ ಗಣ್ಯರು ಸಾಕ್ಷಿಯಾದರು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, 'ಕೆಜಿಎಫ್' ಖ್ಯಾತಿಯ ಜನಪ್ರಿಯ ಸಂಗೀತ ನಿರ್ದೇಶಕ ರವಿ ಬಸ್ರೂರು, ಯುವ ನಾಯಕ ನಟ ನಿರಂಜನ ಸುಧೀಂದ್ರ, ಖ್ಯಾತ ನಟ ಹಾಗೂ ನಿರ್ಮಾಪಕ ಪ್ರಮೋದ್ ಶೆಟ್ಟಿ, ಯಶಸ್ವಿ ಚಿತ್ರಸಾಹಿತಿ ಪ್ರಮೋದ್ ಮರವಂತೆ, ಎ.ಎಸ್.ಕೇಟರರ್ಸ್‌ನ ಸತೀಶ್ ಶೆಟ್ಟಿ ಹಾಗೂ ಅಮರನಾಥ ಶೆಟ್ಟಿ ಹೆಗ್ಗುಂಜೆ ಸೇರಿದಂತೆ ಮುಂತಾದ ದಿಗ್ಗಜರ ಸಮ್ಮುಖದಲ್ಲಿ ಅತ್ಯಂತ ವಿಭಿನ್ನ ಹಾಗೂ ಆಕರ್ಷಕ ರೀತಿಯಲ್ಲಿ ಸಮ್ಮೇಳನದ ಲೋಗೋ ಹಾಗೂ ಘೋಷಣೆಯನ್ನು ಮಾಡಲಾಯಿತು. ಗಣ್ಯರೆಲ್ಲರೂ ಈ ಭಾಷಾಭಿಮಾನದ ಪ್ರಯತ್ನಕ್ಕೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದರು.

ಈ ಸಂದರ್ಭದಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನದ ರೂವಾರಿಗಳಾದ ಗೌರವಾಧ್ಯಕ್ಷ ಉದಯಕುಮಾರ್ ಹೆಗ್ಡೆ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಖಜಾಂಚಿ ವಿಜಯ್ ಶೆಟ್ಟಿ ಹಾಲಾಡಿ ಹಾಗೂ ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು ಸೇರಿದಂತೆ ಪ್ರತಿಷ್ಠಾನದ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದು, ಮುಂಬರುವ ಜಾಗತಿಕ ಹಬ್ಬದ ಯಶಸ್ಸಿಗೆ ಶ್ರಮಿಸುವ ಒಮ್ಮತದ ನಿರ್ಧಾರ ಕೈಗೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+