ಜೆಡಿಎಸ್ ಶಕ್ತಿ ಏನೆಂದು ತೋರಿಸುತ್ತೇವೆ : ಎಚ್.ಡಿ.ದೇವೇಗೌಡ
ಬೆಂಗಳೂರು, ಜ.30 : ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಕ್ಕೆ ಜೆಡಿಎಸ್ ಶಕ್ತಿ ಏನೆಂದು ತೋರಿಸುತ್ತೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಘೋಷಿಸಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಯುವಚೇತನಾ ಸಮಾವೇಶ'ದಲ್ಲಿ ಜೆಡಿಎಸ್ ನಾಯಕರು ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಯುವಕರನ್ನು ಪಕ್ಷದತ್ತ ಸೆಳೆಯಲು ಜೆಡಿಎಸ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ಯುವ ಚೇತನ ಸಮಾವೇಶ ನಡೆಸಿತು. ಮೈಸೂರಿನಿಂದ ಬೈಕ್ ಜಾಥಾದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಎಚ್.ಡಿ.ಕುಮಾರಸ್ವಾಮಿ ಸಮಾವೇಶಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.
ಸಮಾವೇಶದಲ್ಲಿ ಮಾತನಾಡಿದ ಎಚ್.ಡಿ.ದೇವೇಗೌಡ, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ಗೆ ಮುಂದಿನ ಲೋಕಸಭೆಯಲ್ಲಿ ಜೆಡಿಎಸ್‌ನ ಸಾಮರ್ಥ್ಯ ಏನೆಂಬುದನ್ನು ತೋರಿಸಲಿದೆ. ಚುನಾವಣೆಯಲ್ಲಿ ಹೆಚ್ಚಿನ ಸೀಟು ಪಡೆಯುವ ಮೂಲಕ ಪುಟಿದೇಳಲಿದೆ, ರಾಷ್ಟ್ರೀಯ ಪಕ್ಷಕ್ಕಿಂತ ತೃತೀಯ ರಂಗ ಆಡಳಿತ ಚುಕ್ಕಾಣಿ ಹಿಡಿಯಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು. ಜೆಡಿಎಸ್ ಸಮಾವೇಶದ ಚಿತ್ರಗಳು

ಸಮಸ್ಯೆ ನಿವಾರಿಸುವುದು ಪ್ರಾದೇಶಿಕ ಪಕ್ಷ
ಜನರ ಸಮಸ್ಯೆಯನ್ನು ಆಲಿಸುವುದು ಮತ್ತು ಅದನ್ನು ಪರಿಹಾರ ಮಾಡುವುದು ಪ್ರಾದೇಶಿಕ ಪಕ್ಷ. ಆದ್ದರಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಬೆಂಬಲ ನೀಡಬೇಕು ಎಂದು ಜೆಡಿಎಸ್ ನಾಯಕರು ಯುವಕರಿಗೆ ಮನವಿ ಮಾಡಿದರು.

ರೇವಣ್ಣ ಅಭಿವೃದ್ಧಿಯ ಹರಿಹಾರ
ಸಮಾವೇಶದಲ್ಲಿ ಮಾತನಾಡಿದ ಎಚ್.ಡಿ.ದೇವೇಗೌಡ, ನಾನು ರೈತರ ಪರ ಹೋರಾಟ ನಡೆಸಿದ್ದೇನೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಸಚಿವರಾಗಿದ್ದಾಗ ಹಲವಾರು ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದಾರೆ ಎಂದು ದೇವೇಗೌಡರು ಹೇಳಿದರು.

ಯಾರು-ಯಾರು ಹಾಜರಿದ್ದರು
ಸಮಾವೇಶದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ, ಕಾರ್ಯಾಧ್ಯಕ್ಷ ಅಬ್ದುಲ್ ಅಜೀಂ, ಶಾಸಕ ಮಧು ಬಂಗಾರಪ್ಪ, ಜಮೀರ್ ಅಹಮದ್ ಸೇರಿದಂತೆ ಜೆಡಿಎಸ್ ಶಾಸಕರು, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

ನಿಲೇಕಣಿಗೆ ಕುಮಾರಸ್ವಾಮಿ ಸವಾಲು
ಮುಂದಿನ ಲೋಕಸಭೆ ಚುನಾಣೆಯಲ್ಲಿ ಬೆಂಗಳೂರು ದಕ್ಷಿಣ ಕೇತ್ರದಿಂದ ಕಣಕ್ಕಿಳಿಯಲಿರುವ ಐಟಿ ದಿಗ್ಗಜ ನಂದನ್ ನಿಲೇಕಣಿ ಅವರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಬಹಿರಂಗ ಸವಾಲು ಹಾಕಿದ್ದಾರೆ. ಐಟಿ ಕ್ಷೇತ್ರದಲ್ಲಿ ಯುವಜನತೆಗೆ ಎಷ್ಟು ಉದ್ಯೋಗ ಕಲ್ಪಿಸಿದ್ದಾರೆ ಎಂಬುದನ್ನು ಜನತೆಯ ಮುಂದಿಡಲಿ ಹೇಳಿದ್ದಾರೆ.

ಅಚ್ಚರಿ ಮೂಡಿಸಿದ ಜಮೀರ್
ವಿಧಾನಸಭೆ ಚುನಾವಣೆ ಬಳಿಕ ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಬುಧವಾರ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆದರೆ, ಅವರು ಸಮಾವೇಶದಲ್ಲಿ ಭಾಷಣ ಮಾಡಲಿಲ್ಲ.












Click it and Unblock the Notifications