ಲೋಕಸಭಾ ಚುನಾವಣೆ: ಶಿವಮೊಗ್ಗ ಅಲ್ಲ, ಒಕ್ಕಲಿಗರ ಭದ್ರಕೋಟೆಯಲ್ಲಿ ದೊಡ್ಮನೆ ಸೊಸೆ ಸ್ಪರ್ಧೆ?
ಬೆಂಗಳೂರು,ಡಿಸೆಂಬರ್ 19: 2024 ರ ಲೋಕಸಭಾ ಚುನಾವಣೆ ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ಪ್ರತಿಷ್ಠೆಯ ಕಣವಾಗಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ಭರ್ಜರಿ ತಯಾರಿ ನಡೆಸಿದ್ದು, ಹಲವು ತಂತ್ರಗಾರಿಕೆಯನ್ನ ಕಾಂಗ್ರೆಸ್ ನಾಯಕರು ನಡೆಸಿದ್ದಾರೆ.
ಹೌದು, ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಡಾ. ರಾಜ್ ಕುಮಾರ್ ಅವರ ಕುಟುಂಬಸ್ಥರಲ್ಲಿ ಒಬ್ಬರನ್ನ ಕಣಕ್ಕಿಳಿಸಲು ಕೈ ನಾಯಕರು ಪ್ಲಾನ್ ನಡೆಸಿದ್ದಾರೆ. ಹೀಗಾಗಿ ಕೆಲ ದಿನಗಳ ಹಿಂದೆ ರಾಜ್ಯಮಟ್ಟದ ಈಡಿಗ ಸಮುದಾಯದ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಹಿರಂಗವಾಗಿ ನಟ ಶಿವರಾಜ್ ಕುಮಾರ್ ಅವರಿಗೆ ಲೋಕಸಭೆಯ ಟಿಕೆಟ್ ಆಫರ್ ನೀಡಿದ್ದರು. ಆದರೆ, ನಟ ಶಿವರಾಜ್ ಕುಮಾರ್ ನಯವಾಗಿಯೇ ತಿರಸ್ಕರಿಸಿ ನಮಗೆ ತಂದೆಯಿಂದ ಬಂದಿರುವ ಬಳುವಳಿ ಬಣ್ಣ ಹಚ್ಚಿ ನಟನೆ ಮಾಡವ ನಟನೆಯನ್ನು ಮುಂದುವರೆಸುತ್ತೇನೆ ಎಂದು ಹೇಳಿದರು.

ನನಗೆ ರಾಜಕೀಯ ಬೇಡ. ಆದರೆ, ರಾಜ್ಯದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗಳು ನಮ್ಮನೆ ಸೊಸೆಯಾಗಿದ್ದಾರೆ. ಗೀತಾಳಿಗೆ ಇಂಟರೆಸ್ಟ್ ಇದ್ರೆ ಅವರು ಮಾಡಲಿ. ಅವರಿಗೆ ಬೆಂಬಲ ನೀಡುವುದು ನನ್ನ ಕೆಲಸ. ಗೀತಾ ಅವರು ಚುನಾವಣೆಗೆ ನಿಲ್ಲುತ್ತಾರೆಂದರೆ ನಾನು ಅವರ ಹಿಂದೆಯಿದ್ದು, ಬೆಂಬಲ ನೀಡುತ್ತೇನೆ ಎಂದು ನಟ ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ. ಹೀಗಾಗಿ ದೊಡ್ಮನೆ ಹಿರಿಯ ಸೊಸೆ ಹಾಗೂ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವಕುಮಾರ್ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸಲಿದ್ದಾರೆ.
ಮುಂದಿನ ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಬೆಂಗಳೂರು ವ್ಯಾಪ್ತಿಯಲ್ಲಿ ಎರಡು ಲೋಕಸಭಾ ಕ್ಷೇತ್ರವನ್ನ ಗೆಲ್ಲುವ ನಿಟ್ಟಿನಲ್ಲಿ ಡಿ ಕೆ ಶಿವಕುಮಾರ್ ಮಾಸ್ಟರ್ ಪ್ಲಾನ್ ನಡೆಸಿದ್ದು, ಒಕ್ಕಲಿಗರ ಭದ್ರಕೋಟೆಯಾದ ಬೆಂಗಳೂರು ಉತ್ತರ ಕ್ಷೇತ್ರವನ್ನ ಗೆಲ್ಲುವ ನಿಟ್ಟಿನಲ್ಲಿ ಹೊಸ ಪ್ಲಾನ್ ನಡೆಸಿದ್ದಾರೆ. ಇತ್ತ ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದರಾದ ಡಿ ವಿ ಸದಾನಂದಗೌಡ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದು, ಬಿಜೆಪಿಯೂ ಸಹ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಹೀಗಾಗಿ ಈ ಕ್ಷೇತ್ರವನ್ನ ಗೆಲ್ಲುವ ನಿಟ್ಟಿನಲ್ಲಿ ಕೈ ನಾಯಕರು ತಂತ್ರಗಾರಿಕೆಯನ್ನ ನಡೆಸಿದ್ದಾರೆ.

ಬಿಜೆಪಿ ನಾಯಕರ ಭದ್ರಕೋಟೆಯಾಗಿರುವ ಬೆಂಗಳೂರು ಉತ್ತರದಲ್ಲಿ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರನ್ನ ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಹಿಂದೆ 2019 ರ ಲೋಕಸಭಾ ಚುನಾವಣೆಯಲ್ಲಿ ಕೃಷ್ಣ ಬೈರೇಗೌಡ ಅವರು ಸ್ಪರ್ಧೆ ನಡೆಸಿದ್ರು, ಇದೀಗ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರಿಯನ್ನ ಕಣಕ್ಕಿಳಿಸಲು ಹಲವು ಲೆಕ್ಕಾಚಾರವನ್ನ ಕಾಂಗ್ರೆಸ್ ಹಾಕಿಕೊಂಡಿದೆ ಎನ್ನಲಾಗಿದೆ.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿರುವ ನಟ ಶಿವರಾಜ್ ಕುಮಾರ್ ಅವರಿಗೆ ಚಿತ್ರತಂಡದ ಸಾಥ್ ಸಹ ಹೆಚ್ಚಾಗಿದೆ. ಅಲ್ಲದೇ 2023 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರವಾಗಿ ಶಿವರಾಜ್ ಕುಮಾರ್ ಪ್ರಚಾರ ನಡೆಸಿದ್ದಾರೆ. ಹೀಗಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ನಡೆಸಿದರೇ ನಟ ಶಿವರಾಜ್ ಕುಮಾರ್ ಜೊತೆಗೆ ಚಿತ್ರ ತಂಡದ ಹಲವು ನಟ-ನಟಿಯರು ಪ್ರಚಾರ ಕಾರ್ಯದಲ್ಲಿ ತೊಡಗಬಹುದು ಎಂದು ಹೇಳಲಾಗಿದೆ.
ಇತ್ತ ಬೆಂಗಳೂರು ಅಭಿವೃದ್ದಿಯ ಹೊಣೆ ಹೊತ್ತಿರುವ ಡಿ ಕೆ ಶಿವಕುಮಾರ್ ಅವರು ಮುಂದಿನ ಬಿಬಿಎಂಪಿ ಚುನಾವಣೆಯ ದೃಷ್ಟಿಯಿಂದ ಬೆಂಗಳೂರು ವ್ಯಾಪ್ತಿಯಲ್ಲಿ ಎರಡು ಲೋಕಸಭಾ ಕ್ಷೇತ್ರವನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಸಂಸದರಾದ ಡಿ ಕೆ ಸುರೇಶ್ ಈ ಬಾರೀಯೂ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧೆ ನಡೆಸಿದರೇ, ಬೆಂಗಳೂರು ಉತ್ತರದಿಂದ ಗೀತಾ ಶಿವರಾಜ್ ಕುಮಾರ್ ಅವರನ್ನ ಕಣಕ್ಕಿಸುವ ಮೂಲಕ ಗೆಲ್ಲುವ ತಂತ್ರಗಾರಿಕೆಯನ್ನ ಡಿ ಕೆ ಬ್ರದರ್ಸ್ ನಡೆಸಿದ್ದಾರೆ ಎನ್ನಲಾಗಿದೆ.












Click it and Unblock the Notifications