ಮುಂದೆ ಚುನಾವಣೆಗಳಲ್ಲಿ ಸ್ಪರ್ಧಿಸಲ್ಲ: ಗೀತಾ ಶಿವರಾಜ್‌ಕುಮಾರ್ ಈ ನಿರ್ಧಾರಕ್ಕೆ ಕಾರಣವೇನು?
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನ ನಿರ್ಮಾಪಕಿಯಾಗಿ ಮಿಂಚುತ್ತಿರುವ ಗೀತಕ್ಕ, ರಾಜಕಾರಣದಲ್ಲೂ ಇದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಅವರು ಚುನಾವಣೆಗಳಿಗೆ ಸ್ಪರ್ಧಿಸಿ ಸೋತಿದ್ದರು. 2024ರ ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ನಿಂತು ಸೋತಿದ್ದ ಗೀತಕ್ಕ ದಿಢೀರನೆ ಇನ್ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎನ್ನುವ ಮೂಲಕ ಶಾಕ್ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಶ್ವೇತಾ ಬಂಡಿ ಪದಗ್ರಹಣ ಕಾರ್ಯಕ್ರಮದಲ್ಲಿ ಗೀತಕ್ಕ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು ನಾನು ಇನ್ಮುಂದೆ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಲ್ಲ. ಆದರೆ ನಿಮ್ಮೆಲ್ಲರ ಜೊತೆ ನಿಲ್ಲುತ್ತೇನೆ. ಮುಂದಿನ ಚುನಾವಣೆಗೆ ಬಂದು ಪ್ರಚಾರ ಮಾಡುತ್ತೇನೆ ಎಂದಿದ್ದಾರೆ.

ಗೀತಕ್ಕ ಸಹೋದರರಾದ ಕುಮಾರ್ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಈಗಾಗಲೇ ರಾಜಕಾರಣದಲ್ಲಿ ನೆಲೆಯೂರಿದ್ದಾರೆ. ಅದೇ ರೀತಿ 2024ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಕ್ಕ ಚುನಾವಣೆಗೆ ನಿಂತಿದ್ದರು. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು. ತಮ್ಮ ತವರು ಜಿಲ್ಲೆಯಾದ ಶಿವಮೊಗ್ಗದಲ್ಲೇ ಅವರು ಅದೃಷ್ಟ ಪರೀಕ್ಷಿಸಿ, ತಮ್ಮ ಚುನಾವಣಾ ನಿವೃತ್ತಿ ಬಗ್ಗೆ ಘೋಷಣೆ ಮಾಡಿದ್ದಾರೆ. ನಿರಂತರ ಸೋಲಿನ ಬೆನ್ನಲ್ಲೇ ಅವರು ರಾಜಕಾರಣದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ.
ನೂತನ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ವೇತಾ ಬಂಡಿ ಅವರಿಗೆ ಅಭಿನಂದನೆಗಳು. ಶ್ವೇತಾ ಬಂಡಿ ಚುನಾವಣೆಯ ಪ್ರಚಾರದಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಮಹಿಳೆಯರು ಅಬಲೆಯೆರಲ್ಲ, ಸಬಲೆಯರು. ಮಹಿಳೆಯರಿಗೆ ಶಕ್ತಿ ನೀಡಿದರೆ ಯಾವ ಕೆಲಸವನ್ನಾದರೂ ಮಾಡ್ತಾರೆ. ನಿಮಗೆ ಯಾವುದೇ ಕಷ್ಟಗಳಿದ್ದರೂ ಸಚಿವ ಮಧು ಬಂಗಾರಪ್ಪ ಅವರನ್ನ ಸಂಪರ್ಕಿಸಿ ಕೆಲಸ ಮಾಡಿಸಿಕೊಳ್ಳಿ. ಚುನಾವಣೆಗೆ ಸ್ಪರ್ಧಿಸದಿದ್ದರೂ ಪಕ್ಷ ಸಂಘಟನೆಯಲ್ಲಿ ಜೊತೆಗೆ ಇರುತ್ತೇನೆ. ನಿಮ್ಮೆಲ್ಲರ ಜೊತೆ ಕೆಲಸ ಮಾಡ್ತೀನಿ, ಯಾವಾಗ ಕರೆದರೂ ಬರ್ತೀನಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿಸಿದ್ದಾರೆ.
ಅವಕಾಶವಿದ್ದರೂ ರಾಜಕೀಯಕ್ಕೆ ಬರಲಿಲ್ಲ ಅಣ್ಣಾವ್ರು
ರಾಜ್‌ಕುಮಾರ್ ಕುಟುಂಬದಿಂದ ರಾಜಕೀಯಕ್ಕೆ ಈ ಹಿಂದೆ ಯಾರೂ ಬಂದಿರಲಿಲ್ಲ. ಖುದ್ದು ರಾಜ್‌ಕುಮಾರ್ ಅವರನ್ನೇ ಚುನಾವಣೆಗೆ ನಿಲ್ಲಿಸಬೇಕು ಎಂದು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಅಣ್ಣಾವ್ರಿಗೆ ರಾಜಕೀಯ ಇಷ್ಟವೇ ಇರಲಿಲ್ಲ. ಇದೇ ಕಾರಣಕ್ಕೆ ಅವರು ರಾಜಕೀಯದಿಂದ ದೂರ ಉಳಿದಿದ್ದರು. ಬಳಿಕ ರಾಜಣ್ಣನ ಸೊಸೆ ಗೀತಕ್ಕ ಕಾಂಗ್ರೆಸ್ ಪಕ್ಷದಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಗೀತಾ ಶಿವರಾಜ್‌ಕುಮಾರ್ ಚುನಾವಣೆಯಿಂದ ದೂರ ಸರಿದಿದ್ದಾರೆ.
1978ರ ಉಪ ಚುನಾವಣೆ ವೇಳೆ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಡಾ.ರಾಜ್ ಕುಮಾರ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಇಂದಿರಾಗಾಂಧಿ ಅವರ ವಿರುದ್ಧ ಜನಪ್ರಿಯ ವ್ಯಕ್ತಿಗಾಗಿ ಹುಡುಕಾಟ ನಡೆಸಿದಾಗ ರಾಜ್ ಕುಮಾರ್ ಅವರ ಹೆಸರೇ ಫೈನಲ್ ಆಗಿತ್ತು. ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ಇಂದಿರಾ ಅವರ ವಿರುದ್ಧ ಅಣ್ಣಾವ್ರನ್ನ ಕಣಕ್ಕಿಳಿಸುವ ಕಸರತ್ತು ನಡೆದಿತ್ತು. ಆದರೆ ರಾಜ್‌ಕುಮಾರ್ ಅವರು ರಾಜಕೀಯಕ್ಕೆ ಬರಲಿಲ್ಲ.












Click it and Unblock the Notifications