ಗೌರಿ ಹತ್ಯೆ: ಹಣೆಯಲ್ಲಿ ತಿಲಕ, ಮಾಹಿತಿ ನೀಡೋ ಬದಲು ಪ್ರಶ್ನಿಸುವವರೇ ಹೆಚ್ಚು
ಗೌರಿ ಲಂಕೇಶ್ ಶಂಕಿತ ಹಂತಕನ ಹಣೆಯಲ್ಲಿ ತಿಲಕವಿರುವ ರೇಖಾಚಿತ್ರವನ್ನು ಬಿಡುಗಡೆಗೊಳಿಸಿದ್ದ ವಿಶೇಷ ತನಿಖಾ ತಂಡಕ್ಕೆ (SIT) ಮಾಹಿತಿ ನೀಡುವ ಬದಲು ಪ್ರಶ್ನಿಸುವವರೇ ಜಾಸ್ತಿಯಾಗಿದ್ದಾರೆ.
ಬೆಂಗಳೂರು, ಅ 21: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಶಂಕಿತ ಹಂತಕನ ಹಣೆಯಲ್ಲಿ ತಿಲಕವಿರುವ ರೇಖಾಚಿತ್ರವನ್ನು ಬಿಡುಗಡೆಗೊಳಿಸಿದ್ದ ವಿಶೇಷ ತನಿಖಾ ತಂಡಕ್ಕೆ (SIT) ಮಾಹಿತಿ ನೀಡುವ ಬದಲು ಪ್ರಶ್ನಿಸುವವರೇ ಜಾಸ್ತಿಯಾಗಿದ್ದಾರೆ ಎನ್ನುವ ಮಾಹಿತಿಯಿದೆ.
ರೇಖಾಚಿತ್ರ ಮತ್ತು ಗೌರಿ ಹಂತಕನ ಮೊಟ್ಟಮೊದಲ ಚಿತ್ರ ಬಿಡುಗಡೆ ಮಾಡಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಬಹುದು ಎನ್ನುವ ವಿಶೇಷ ತನಿಖಾ ತಂಡಕ್ಕೆ ಹಿನ್ನಡೆಯಾಗಿದ್ದು, ನಿರಂತರ ದೂರವಾಣಿ ಕರೆಗಳು ಬರುತ್ತಿವೆ.
(ಗೌರಿ ಲಂಕೇಶ್ ಶಂಕಿತ ಹಂತಕನ ರೇಖಾಚಿತ್ರದಲ್ಲಿ ತಿಲಕ, SIT ಸ್ಪಷ್ಟನೆ)

ಬಹುತೇಕ ಕರೆಗಳು 'ಅದ್ಯಾವ ಆಧಾರದ ಮೇಲೆ ಹಣೆಯಲ್ಲಿ ತಿಲಕವಿರುವ ರೇಖಾಚಿತ್ರ ಬಿಡುಗಡೆ ಮಾಡಿದರೆ' ಎಂದು ಪ್ರಶ್ನಿಸುತ್ತಿದ್ದಾರೆಂದು ತಿಳಿದುಬಂದಿದೆ. ಸಾರ್ವಜನಿಕರು ಕೇಳುವ ಪ್ರಶ್ನೆಗೆ ತನಿಖಾಧಿಕಾರಿಗಳು ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಗೌರಿ ಲಂಕೇಶ್ ತಾಯಿ ಇಂದಿರಾ ನೀಡಿರುವ ಮಾಹಿತಿಯ ಆಧಾರದಲ್ಲಿ, ಹಣೆಗೆ ತಿಲಕವಿಟ್ಟ ರೇಖಾಚಿತ್ರವನ್ನು ಬಿಡುಗಡೆಗೊಳಿಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿಕೆ ನೀಡಿದ್ದರೂ, ಸಾರ್ವಜನಿಕರಿಂದ ಬರುವ ಕರೆಗಳು ಮಾಹಿತಿ ನೀಡುವ ಬದಲು, ಪ್ರಶ್ನಿಸುವುವರ ಸಂಖ್ಯೆಯೇ ಹೆಚ್ಚಾಗಿದೆ.
ಗೌರಿ ಲಂಕೇಶ್ ಹಂತಕರ ಪತ್ತೆಗೆ ವಿಶೇಷ ತನಿಖಾ ತಂಡಕ್ಕೆ ಆಯ್ಕೆಯಾಗಿದ್ದ ಹೆಚ್ಚಿನ ಪೊಲೀಸರು, ತನಿಖೆಯಲ್ಲಿ ಹೆಚ್ಚಿನ ಪ್ರಗತಿ ಕಾಣದಿರುವ ಹಿನ್ನಲೆಯಲ್ಲಿ ತಮ್ಮತಮ್ಮ ಮೂಲ ಕರ್ತ್ಯವ್ಯಕ್ಕೆ ಮರಳಿದ್ದಾರೆ. ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ವಿಶೇಷ ತನಿಖಾ ತಂಡ, ಮಾಹಿತಿ ಹಂಚಿಕೊಳ್ಳಲು ಸಾರ್ವಜನಿಕರಿಗೆ ದೂರವಾಣಿ ಸಂಖ್ಯೆ ನೀಡಿತ್ತು.
ಅನುಮಾನಾಸ್ಪದ ವ್ಯಕ್ತಿಯೊಬ್ಬ, ಹಣೆಗೆ ತಿಲಕವಿಟ್ಟುಕೊಂಡು ನಮ್ಮ ಮನೆಗೆ ಬಂದಿದ್ದ ಎಂದು ಗೌರಿ ತಾಯಿ ನಮಗೆ ಮಾಹಿತಿ ನೀಡಿದ್ದರು. ಅದನ್ನು ಆಧಾರವಾಗಿ ಇಟ್ಟುಕೊಂಡು ರೇಖಾಚಿತ್ರ ಬಿಡುಗಡೆಗೊಳಿಸಿದ್ದು ಎಂದು ವಿಶೇಷ ತನಿಖಾ ತಂಡದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು.












Click it and Unblock the Notifications