ಗೌರಿ ಲಂಕೇಶ್ ಹತ್ಯೆ : ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ
ಬೆಂಗಳೂರು, ಜುಲೈ 01 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಾದ ಮಂಡಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಲಾಗಿದೆ. 2017 ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಹತ್ಯೆ ನಡೆದಿತ್ತು. ಎಸ್‌ಐಟಿ ಪ್ರಕರಣದ ತನಿಖೆ ನಡೆಸುತ್ತಿದೆ.
ವಕೀಲರಾದ ಶ್ರೀಶೈಲ ವಡವಡಗಿ ಅವರನ್ನು ಗೃಹ ಇಲಾಖೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕ ಮಾಡಿದೆ. ಈ ಕುರಿತ ಆದೇಶದ ಪ್ರತಿಯನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಂ. ನರೇಂದ್ರ ಅವರು 70ನೇ ಸಿಸಿಎಚ್ ನ್ಯಾಯಾಲಯಕ್ಕೆ ಶನಿವಾರ ಸಲ್ಲಿಸಿದ್ದಾರೆ.

ಶ್ರೀಶೈಲ ವಡವಡಗಿ ಅವರು ನಿವೃತ್ತ ಪಬ್ಲಿಕ್ ಪ್ರಾಸಿಕ್ಯೂಟರ್. ಬಿಡದಿ ಧ್ಯಾನಪೀಠದ ಭಕ್ತೆಯ ಮೇಲಿನ ಅತ್ಯಾಚಾರ ಪ್ರಕರಣ ಸೇರಿದಂತೆ ಸಿಐಡಿಯ ಹಲವು ಪ್ರಕರಣಗಳಲ್ಲಿ ಅವರು ವಾದ ಮಂಡನೆ ಮಾಡಿದ್ದಾರೆ.
ಜುಲೈ 4ಕ್ಕೆ ವಿಚಾರಣೆ : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೆ.ಟಿ.ನವೀನ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಜುಲೈ 4ಕ್ಕೆ ಮುಂದೂಡಿದೆ.
ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಂ. ನರೇಂದ್ರ ಅವರು ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ನವೀನ್ ಕುಮಾರ್ ಸಾಕ್ಷಿದಾರರಿಗೆ ಬೆದರಿಕೆ ಹಾಕಲು ಯತ್ನಿಸಿದ್ದಾರೆ. ಸಾಕ್ಷಿ ನಾಶಕ್ಕೂ ಪ್ರಯತ್ನ ನಡೆಸಿದ್ದಾರೆ. ಆರೋಪಿಗೆ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದ್ದಾರೆ.
ವಾದ ಆಲಿಸಿದ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿದೆ. ಮದ್ದೂರು ಮೂಲದ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ನ್ಯಾಯಾಂಗ ಬಂಧನದಲ್ಲಿದ್ದಾನೆ.












Click it and Unblock the Notifications