ಎಸ್‌ಐಟಿ ವಿಚಾರಣೆ ವೇಳೆ ಮಂತ್ರ ಪಠಿಸುತ್ತಾರೆ ಗೌರಿ ಹಂತಕರು
ಬೆಂಗಳೂರು, ಆಗಸ್ಟ್ 27: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಕೆಲವು ಆರೋಪಿಗಳು ಎಸ್‌ಐಟಿ ವಿಚಾರಣೆಗೆ ಸಹಕರಿಸುತ್ತಿಲ್ಲ.
ಕೊಲೆ ಮಾಡಲು ಅಷ್ಟೆ ಅಲ್ಲ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಾಗ ಹೇಗೆ ವರ್ತಿಸಬೇಕು, ಹೇಗೆ ಅವರ ದಿಕ್ಕು ತಪ್ಪಿಸಬೇಕು ಎಂಬ ಬಗ್ಗೆಯೂ ತರಬೇತಿ ಪಡೆದಿರುವ ಅವರು, ವಿಚಾರಣೆ ವೇಳೆ ಅಸಹಜ ವರ್ತನೆ ತೋರಿ ವಿಚಾರಣೆಯ ದಿಕ್ಕು ತಪ್ಪುವಂತೆ ಮಾಡುತ್ತಿದ್ದಾರೆ.
ಇತ್ತೀಚೆಗೆ ಎಸ್‌ಐಟಿಯಿಂದ ಬಂಧಿತನಾದ ಭರತ್ ಕುರ್ನೆ ಎಂಬಾತ ಎಸ್‌ಐಟಿ ವಿಚಾರಣೆ ವೇಳೆ ಮಂತ್ರಗಳನ್ನು ಪಠಿಸಲು ಪ್ರಾರಂಭಿಸುತ್ತಾನಂತೆ. ಪ್ರಶ್ನೆಗಳನ್ನು ಕೇಳುತ್ತಿದ್ದರೆ ಧ್ಯಾನ ಮಾಡಲು ಪ್ರಾರಂಭಿಸುತ್ತಾನಂತೆ.

ಬೆಳಗಾವಿಯವನಾದ ಭರತ್ ಕುರ್ನೆ ಅನ್ನು ಆಗಸ್ಟ್ 8ರಂದು ಎಸ್‌ಐಟಿ ಪೊಲೀಸರು ಬಂಧಿಸಿದ್ದರು. ಪರಶುರಾಮ್ ವಾಘ್ಮೋರೆಯಂತೆ ಭರತ್‌ಗೂ ರಾಜೇಶ್ ಬಂಗೇರಾನಿಂದ ಬಂದೂಕು ಚಲಾವಣೆ ತರಬೇತಿ ಕೊಡಿಸಲಾಗಿತ್ತು.
ಗೌರಿ ಹತ್ಯೆ ಪ್ರಕರಣದಲ್ಲಿ ಭರತ್ ಕುರ್ನೆ ಪಾತ್ರವೂ ಮಹತ್ವದ್ದಾಗಿರುವ ಕಾರಣ ಹಾಗೂ ಹತ್ಯೆಯಲ್ಲಿ ಜೊತೆಗಿದ್ದ ಇನ್ನೂ ಕೆಲವರ ಬಗ್ಗೆ ಬಾಯಿ ಬಿಡಿಸಲು ಎಸ್‌ಐಟಿ ಪೊಲೀಸರು ಯತ್ನಿಸುತ್ತಿದ್ದಾರೆ ಆದರೆ ಭರತ್ ಕುರ್ನೆ ಇದಕ್ಕೆ ಸಹಕಾರ ನೀಡುತ್ತಿಲ್ಲ. ಗೌರಿ ಹತ್ಯೆ ಮಾಡಿದ್ದ ವಾಘ್ಮೋರೆ ಹಾಗೂ ಗಣೇಶ್ ವಿಸ್ಕಿನ್ ಇಬ್ಬರೂ ಪರಾರಿಯಾಗಲು ಭರತ್ ಸಹಾಯ ಮಾಡಿದ್ದ.












Click it and Unblock the Notifications