Garlic price hike: ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ, ಕೆ.ಜಿಗೆ ಎಷ್ಟಿದೆ?, ಏರಿಕೆಗೆ ಕಾರಣ, ಅಂಕಿ-ಅಂಶ ಇಲ್ಲಿದೆ
ಬೆಂಗಳೂರು, ಡಿಸೆಂಬರ್ 12: ರಾಜ್ಯದಲ್ಲಿ ಗ್ರಾಹಕರಿಗೆ ಒಂದರ ಹಿಂದೊಂದರಂತೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಆಗಿ ಕೈ ಸುಡುತ್ತಿವೆ. ಟೊಮೆಟೋ, ಈರುಳ್ಳಿ ಬಳಿಕ ಇದೀಗ ಬೆಳ್ಳುಳ್ಳಿ ಬೆಲೆ ಏರಿಕೆ ಸರದಿ. ಮಾರುಕಟ್ಟೆಯಲ್ಲಿ ನಾಟಿ ಮತ್ತು ಹೈಬ್ರೀಡ್ ಬೆಳ್ಳುಳ್ಳಿ ಬೆಲೆ ಭಾರಿ ಏರಿಕೆ ಕಂಡಿದೆ. ಇದು ಬೆಲೆ ಏರಿಕೆಯ ಬಿಸಿಗೆ ತತ್ತರಿಸಿರುವ ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಚಿಲ್ಲರೆ ಬೆಳ್ಳುಳ್ಳಿ ಬೆಲೆ ಏರಿಕೆಯಾಗಿದ್ದು, ಪ್ರತಿ ಕೆ.ಜಿ ನಾಟಿ ಬೆಳ್ಳುಳ್ಳಿಗೆ 400 ರೂಪಾಯಿಗೆ ಆಗಿದೆ. ಇತ್ತ ಹೈಬ್ರೀಡ್ ಬೆಳ್ಳುಳ್ಳಿ ಪ್ರತಿ ಕೆ.ಜಿಗೆ 300 ರೂ.ಗೆ ಮಾರಾಟವಾಗುತ್ತಿದೆ ಎಂದು 'ಪ್ರಜಾವಾಣಿ' ವರದಿ ಮಾಡಿದೆ.

ಕೆಲವು ದಿನಗಳ ಹಿಂದಷ್ಟೇ ಕಡಿಮೆ ಇದ್ದ ಬೆಲೆ ಇದೀಗ ದಿಢೀರ್ ಏರಿಕೆ ಆಗಿದ್ದು, ಜನರನ್ನು ಆರ್ಥಿಕ ಹೊರೆ ನೀಡುತ್ತಿದೆ.
ಎರಡು ಮೂರು ದಿನಗಳ ಹಿಂದೆ ಬೆಂಗಳೂರಿನ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಹೈಬ್ರೀಡ್ ಬೆಳ್ಳುಳ್ಳಿಯು 260 ರೂ.ಗೆ ಬಿಕರಿಯಾಗಿತ್ತು. ಇದೀಗ ಅಧಿಕ ಬೆಲೆಗೆ ಮಾರಾಟವಾಗುತ್ತಿದೆ. ಇನ್ನೂ ಬೆಳ್ಳುಳ್ಳಿ ಬೆಲೆಗಳಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ವ್ಯತ್ಯಾಸ ಇದೆ.
ಪೂರೈಕೆಯಲ್ಲಿ ಇಳಿಕೆ: ಬೆಲೆ ಏರಿಕೆ
ಬೆಂಗಳೂರಿನ ಮಾರುಕಟ್ಟೆಗೆ (ಯಶವಂತಪುರ) ಕೇವಲ ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಇನ್ನಿತರ ಜಿಲ್ಲೆಗಳಿಂದ ಮಾತ್ರವಲ್ಲದೇ ಮಧ್ಯ ಪ್ರದೇಶ, ಗುಜರಾತ್‌ನಿಂದಲೂ ನಿತ್ಯ ಸುಮಾರು 3000-4000 ಚೀಲ ಬೆಳ್ಳುಳ್ಳಿಗಳು ಬರುತ್ತವೆ.

ಆದರೆ ಈ ವರ್ಷ ನೆರೆಯ ರಾಜ್ಯಗಳಲ್ಲಿ ಮಳೆ ಕೊರತೆ ಆಗಿದೆ. ಹೀಗಾಗಿ ಪೂರೈಕೆ ಕಡಿಮೆ ಆಗಿದೆ. ಸ್ಥಳಿಯ ಲಭ್ಯ ಒಂದರಿಂದಲೇ ಬೇಡಿಕೆಯಷ್ಟು ಬೆಳ್ಳುಳ್ಳಿ ಪೂರೈಕೆ ಕಷ್ಟವಾಗಿದೆ. ಇದು ಒಂದು ರೀತಿ ಅಭಾವಕ್ಕೆ ಕಾರಣವಾಗಿದೆ. ಹೀಗಾಗಿ ಬೆಳ್ಳುಳ್ಳಿ ದರ ಏರಿಕೆ ಆಗಿದೆ. ಮುಂದಿನ ದಿನಗಳಲ್ಲಿ ಇದರ ಬೆಲೆ ಇನ್ನಷ್ಟು ದುಬಾರಿಯಾದರೂ ಅಚ್ಚರಿಯಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.
200 ರೂ. ಆಸುಪಾಸಿಗೆ ಮಾರಾಟ ಆಗಿತ್ತು
ಸಾಮಾನ್ವಯಾಗಿ ನಾಟಿ ಬೆಳ್ಳುಳ್ಳಿಗೆ ಬೇಡಿಕೆ ಹೆಚ್ಚಿರುತ್ತದೆ. ಆದರೆ ಇತ್ತೀಚೆಗೆ ಅವುಗಳ ಪೂರೈಕೆ ಕಡಿಮೆ ಇದ್ದು, ಸಿಗದಂತಾಗಿದೆ. ಕಳೆದ ಬಾರಿ ಇದೇ ವರ್ಷ 100 ರೂಪಾಯಿ ಇದ್ದ ಬೆಳ್ಳುಳ್ಳಿ ದರ ಇದೀಗ ಏರಿಕೆ ಆಗಿದೆ. ತಿಂಗಳ ಹಿಂದಷ್ಟೇ 200 ರೂಪಾಯಿ ಆಸುಪಾಸಿಗೆ ಮಾರಾಟವಾಗುತ್ತಿತ್ತು. ಅದಾಗಲೇ ಬೆಳ್ಳುಳ್ಳಿ ಬೆಲೆ ಗಗನದತ್ತ ಮುಖ ಮಾಡುವ ಮುನ್ಸೂಚನೆ ನೀಡಿತ್ತು.
ಡಿಸೆಂಬರ್‌ನಿಂದ ಮದುವೆ, ಇನ್ನಿತರ ಕಾರ್ಯಕ್ರಮಗಳು ಹೆಚ್ಚು. ಇದು ಸೀಸನ್ ಆಗಿದ್ದರಿಂದ ಬೆಳ್ಳುಳ್ಳಿಗೆ ಬೇಡಿಕೆ ಹೆಚ್ಚಿಸುತ್ತದೆ. ಈ ಸಂದರ್ಭದಲ್ಲಿ ಇದರ ಬೆಲೆ ವಾರದಿಂದ ವಾರಕ್ಕೆ ಶೇ.20 ರಷ್ಟು ಹೆಚ್ಚಾಗುತ್ತಿದೆ ಎಂದು ಹುಬ್ಬಳ್ಳಿ ಎಪಿಎಂಸಿ ವ್ಯಾಪಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮಾರುಕಟ್ಟೆಗೆ ಪೂರೈಕೆಗೆ ಕೆಲವು ತಿಂಗಳು ಬೇಕು
ಇನ್ನು ಚಿಕ್ಕಮಗಳೂರು, ಹಾವೇರಿ, ಬಾಗಲಕೋಟೆ, ಜವಾರಿ ಬೆಳ್ಳುಳ್ಳಿ ಹೆಚ್ಚಾಗಿ ಬೆಳೆಯುತ್ತಾರೆ. ಆದರೆ ಈ ಬಾರಿ ಬೆಳೆದಿರುವ ಬೆಳ್ಳುಳ್ಳಿ ಅದು ಮಾರುಕಟ್ಟೆಗೆ ಬರಲು ಇನ್ನು ಕೆಲವು ತಿಂಗಳು ಕಾಲ ಕಾಯಬೇಕಿದೆ. ಅಷ್ಟರಲ್ಲಾಗಲೇ ಬೆಲೆ ಇನ್ನಷ್ಟು ಗಗನಕ್ಕೆ ಏರಿಕೆ ಆಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಇತ್ತ ಬೆಳ್ಳುಳ್ಳಿಗಳನ್ನು ಮಧ್ಯವರ್ತಿಗಳು ಬೆಳ್ಳುಳ್ಳಿ ದಾಸ್ತುನು ಮಾಡಿಟ್ಟುಕೊಂಡು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪಗಳನ್ನು ವ್ಯಪಾರಿಗಳು ಮಾಡುತ್ತಿದ್ದಾರೆ.
ರೈತರಿಗೆ ಆರ್ಥಿಕ ನಷ್ಟ
ಚಾಮರಾಜನಗರ ಜಿಲ್ಲೆ ವ್ಯಾಪ್ತಿಯಲ್ಲಿ ರೈತರು ಬೆಳ್ಳುಳ್ಳಿ ಬೆಳೆಯುತ್ತಾರೆ. ಆದರೆ ಅವರು ಬೆಲೆ ಇದ್ದಾಗಲೇ ಅಂದರೆ ಎರಡು ತಿಂಗಳ ಹಿಂದೆ ಕೆ.ಜಿ.ಗೆ 250 ರೂ. ಇತ್ತು ಆಗ ಮಾರಾಟ ಮಾಡಿದ್ದಾರೆ. ಆವಕ ಹೆಚ್ಚಾಗುತ್ತಿದ್ದಂತೆ ಬೆಲೆ ಒಂದು ನೂರು ರೂಪಾಯಿಯಷ್ಟು ಕುಸಿಯಿತು. ಇದರಿಂದ ರೈತರು ಆರ್ಥಿಕ ನಷ್ಟ ಅನುಭವಿಸುವಂತಾಯಿತು. ಅದಾದ ಮೇಲೆ ಕೆಲವು ಬೆಳೆಗಾರರು ಮಾತ್ರ ಬಿತ್ತನೆಗೆಂದು ಬೆಳ್ಳುಳ್ಳಿ ಬೆಳೆದಿದ್ದಾರೆ. ಬೆಳೆ ಬೆಳೆದರೂ, ಬೆಳೆಯದಿದ್ದರೂ ರೈತರು ಮಾತ್ರ ಒಂದಲ್ಲಾ ಒಂದು ರೀತಿಯಲ್ಲಿ ನಷ್ಟ ಅನುಭವಿಸುತ್ತಲೆ ಇದ್ದಾರೆ.












Click it and Unblock the Notifications