Janardhana Reddy: ಮರಳಿ ಗೂಡು ಸೇರಿದ ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ, ಬಿಜೆಪಿಗೆ ಆಗುವ ಲಾಭಗಳೇನು?
ಬೆಂಗಳೂರು, ಮಾರ್ಚ್ 25: ಲೋಕಸಭಾ ಚುನಾವಣೆ ಹೊತ್ತಲ್ಲೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಯಕ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಇಂದು ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ನೋಡಲು ಪಕ್ಷದ ಹಲವಾರು ಸದಸ್ಯರೊಂದಿಗೆ ಬಿಜೆಪಿ ಸೇರುತ್ತಿರುವುದಾಗಿ ಗಣಿ ಧಣಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಕೆಆರ್‌ಪಿಪಿ ಪಕ್ಷ ಸಂಸ್ಥಾಪಕ ಜನಾರ್ದನ ರೆಡ್ಡಿ ಮಾರ್ಚ್. 25 ರ ಸೋಮವಾರ ಬಿ.ಎಸ್.ಯಡಿಯೂರಪ್ಪ, ಬಿವೈ ವಿಜಯೇಂದ್ರ ಮತ್ತು ಶ್ರೀರಾಮುಲು ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪಕ್ಷದ ಬಾವುಟ ನೀಡಿ ಜನಾರ್ದನ ರೆಡ್ಡಿ ಅವರನ್ನು ಬಿವೈ ವಿಜಯೇಂದ್ರ ಮತ್ತೆ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಕೇಸರಿ ಪಕ್ಷದಲ್ಲಿ ಕೆಆರ್‌ಪಿಪಿ ಪಕ್ಷವನ್ನೂ ವಿಲೀನಗೊಳಿಸಲಾಗಿದೆ.

ಜನಾರ್ದನ ರೆಡ್ಡಿ ಬೇಡಿಕೆಯೇನು?
ಶಾಸಕ ಜನಾರ್ದನ ರೆಡ್ಡಿ ಬಿಜೆಪಿ ಸೇರುವ ಮುನ್ನ 200ಕ್ಕೂ ಅಧಿಕ ಕೆಆರ್‌ಪಿಪಿ ಪದಾಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಿದ್ದರು. ಪಕ್ಷದ ಎಲ್ಲರ ಒಪ್ಪಿಗೆ ಬಳಿಕವೇ ಸೇರ್ಪಡೆ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದರು. ರಾಜ್ಯ ಬಿಜೆಪಿ ನಾಯಕರ ಜೊತೆ ಜೊತೆಗೆ ಗೃಹ ಸಚಿವ ಅಮಿತ್ ಶಾ ಜೊತೆ ಒಂದು ಸುತ್ತಿನ ಮಾತುಕತೆಯನ್ನು ಕೂಡ ಜನಾರ್ಧನ ರೆಡ್ಡಿ ನಡೆಸಿದ್ದರು. ಈ ವೇಳೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಅದರಲ್ಲಿ ಪ್ರಮುಖವಾದ್ದು ಲೋಕಸಭಾ ಚುನಾವಣೆಗೆ ಟಿಕೆಟ್.
ಬಿಜೆಪಿಯಲ್ಲಿ ವಿಲೀನವಾಗಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಯಕ ಜನಾರ್ದನ ರೆಡ್ಡಿ, ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನ ಬದಲಾಯಿಸುವಂತೆ, ಅದೇ ಕ್ಷೇತ್ರದಿಂದ ಪತ್ನಿ ಅರುಣಾ ಲಕ್ಷ್ಮೀಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿಯಿದೆ. ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಯಲ್ಲಿ ಹಿಡಿತ ಹೊಂದಿರುವ ಅವರು ಎಲ್ಲ ಬೆಂಬಲಿಗರನ್ನು ತಮ್ಮ ಜೊತೆಗೆ ಬಿಜೆಪಿಗೆ ಸೇರ್ಪಡೆ ಮಾಡಿಸಿದ್ದಾರೆ.

ಜನಾರ್ದನ ರೆಡ್ಡಿ ಸೇರ್ಪಡೆಯಿಂದ ಬಿಜೆಪಿಗೆ ಆಗುವ ಲಾಭವೇನು?
ಜನಾರ್ಧನ ರೆಡ್ಡಿ ಪಕ್ಷ ಸೇರ್ಪಡೆಯಿಂದಾಗಿ ಬಳ್ಳಾರಿ, ಕೊಪ್ಪಳ, ರಾಯಚೂರು, ಗದಗ, ಹಾವೇರಿ ಜಿಲ್ಲೆಗಳಲ್ಲಿ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ಈ ಕ್ಷೇತ್ರಗಳಲ್ಲಿ ಅಧಿಪತ್ಯ ಸಾಧಿಸಲು ಬಿಜೆಪಿ ಹೆಣಗಾಡುತ್ತಿದೆ. ಈಗ ಗಣಿ ಧಣಿ ಬಿಜೆಪಿ ಸೇರಿರುವುದರಿಂದ ಇಲ್ಲಿ ಪಕ್ಷಕ್ಕೆ ಉತ್ತಮ ನೆಲೆ ಸಿಕ್ಕಂತಾಗಿದೆ.
ಶಾಸಕ ಜನಾರ್ದನ ರೆಡ್ಡಿ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಪಕ್ಷ ವಿಸ್ತರಣೆಗೆ ಬಿಜೆಪಿ ರಣ ತಂತ್ರ ಹೆಣೆಯುತ್ತಿದೆ. ಗಣಿ ಧಣಿ ರೆಡ್ಡಿ ಬಳ್ಳಾರಿ, ಕೊಪ್ಪಳ, ರಾಯಚೂರು, ಚಿತ್ರದುರ್ಗ ಕ್ಷೇತ್ರದ 20 ರಿಂದ 30 ವಿಧಾನಸಭೆ ಕ್ಷೇತ್ರಗಳಲ್ಲಿ ತಮ್ಮ ಪ್ರಭಾವ ಬೀರಲಿದ್ದಾರೆ. ಈ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ವ್ಯಾಪ್ತಿ ವಿಸ್ತರಿಸಬಹುದು.
ಜನಾರ್ದನ ರೆಡ್ಡಿ ಅವರನ್ನು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಿರ್ಲಕ್ಷ್ಯ ಮಾಡಿದ್ದರಿಂದ ಬಿಜೆಪಿ ದೊಡ್ಡ ನಷ್ಟವನ್ನೇ ಅನುಭವಿಸಿದೆ. ಹೀಗಾಗಿ ಈ ಬಾರಿ ಅಂತಹ ತಪ್ಪು ಮಾಡಲು ಬಿಜೆಪಿ ಮುಂದಾಗಿಲ್ಲ. ಜನಾರ್ದನ ರೆಡ್ಡಿ ವರ್ಚಸ್ಸನ್ನು ಬಳಸಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಲು ಬಿಜೆಪಿ ಮುಂದಾಗಿದೆ.
ಲೋಕಸಭೆ ಚುನಾವಣೆ 2024 ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ನಡೆಯಲಿದೆ. ರಾಜ್ಯದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ಎಲ್ಲಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.












Click it and Unblock the Notifications