ರೈತರ ಕಲ್ಯಾಣಕ್ಕಾಗಿ ಕರ್ನಾಟಕ ಸರ್ಕಾರ ಬದ್ಧವಾಗಿದೆ
ಗಾಂಧೀಜಿಯವರ ಮತ್ತೊಂದು ರಚನಾತ್ಮಕ ಕಾರ್ಯಕ್ರಮವಾದ 'ರೈತರ ಕಲ್ಯಾಣ' ಕರ್ನಾಟಕದಲ್ಲಿ ಆದ್ಯತಾ ವಲಯವಾಗಿದೆ. ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ಗೊಬ್ಬರ ವಿತರಣೆ, ರೈತರ ಬೆಳೆಗೆ ಯೋಗ್ಯಬೆಲೆ, ಸಾವಯವ ಕೃಷಿಗೆ ಉತ್ತೇಜನ, ಕೃಷಿ ಯಾಂತ್ರೀಕರಣಕ್ಕೆ ನೆರವು ನೀಡಲಾಗುತ್ತಿದೆ. ನಮ್ಮ ಸರ್ಕಾರ ಮಳೆ ಆಶ್ರಿತ ರೈತರಿಗಾಗಿಯೇ ಕೃಷಿ ಭಾಗ್ಯ ಎಂಬ ವಿಶೇಷ ಯೋಜನೆಯನ್ನು ರೂಪಿಸಿ, 500 ಕೋಟಿ ರೂ. ಗಳನ್ನು ಮೀಸಲಿಟ್ಟಿದ್ದೇವೆ.
ಕೃಷಿಭಾಗ್ಯ ರೈತ ಪರವಾದ ದೂರದೃಷ್ಠಿ ಯೋಜನೆ ಇದಾಗಿದ್ದು, ಈ ಯೋಜನೆಯು ಇಡೀ ರಾಷ್ಟ್ರದ ಗಮನ ಸೆಳೆದಿದೆ.
ಕೋಮು ಸೌಹಾರ್ದತೆ ಗಾಂಧೀಜಿಯವರ ಹೃದಯಕ್ಕೆ ಅತ್ಯಂತ ಸಮೀಪವಾಗಿತ್ತು. ತಮ್ಮ ಜೀವನದುದ್ದಕ್ಕೂ ಹಿಂದೂ-ಮುಸ್ಲಿಂ ಏಕತೆಗಾಗಿ ಅವರು ಹೋರಾಡಿದವರು. ಈ ಕಾರಣಕ್ಕಾಗಿಯೇ ಅವರು ದುರುಳನೊಬ್ಬನ ಗುಂಡೇಟಿನಿಂದ ಪ್ರಾಣ ಕಳೆದು ಕೊಳ್ಳಬೇಕಾಯಿತು. ಕೋಮು ದ್ವೇಷದ ಹೆಡೆ ಮತ್ತೆ ಬಿಚ್ಚಲಾರಂಭಿಸಿರುವ ಇಂದಿನ ದಿನಗಳಲ್ಲಿ ಗಾಂಧೀಜಿ ಚಿಂತನೆ ನಮ್ಮ ಒಳಗಣ್ಣು ತೆರೆಸಬೇಕು.
ಆರ್ಥಿಕ ಸಮಾನತೆ ತರುವ ದಿಕ್ಕಿನಲ್ಲಿ ಕರ್ನಾಟಕವು ದೇಶದಲ್ಲಿಯೇ ಪ್ರಥಮ ಎನ್ನಬಹುದಾದ ಹೆಜ್ಜೆಯನ್ನಿಟ್ಟಿದೆ. ರಾಜ್ಯದಲ್ಲಿರುವ ಪ್ರತಿಯೊಂದು ಕುಟುಂಬದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಾವು ಈಗಾಗಲೇ ನಡೆಸಿದ್ದೇವೆ. ಈ ಸಮೀಕ್ಷೆಯಿಂದ ದೊರೆಯುವ ಮಾಹಿತಿಯನ್ನು ಆಧರಿಸಿ ಹಿಂದುಳಿದ ಜನ ಸಮುದಾಯಗಳ ಆರ್ಥಿಕ ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ನಾವು ರೂಪಿಸಲಿದ್ದೆವೆ. ರಾಜ್ಯದಲ್ಲಿ ಆರ್ಥಿಕ ಸಮಾನತೆ ತರುವ ದಿಕ್ಕಿನಲ್ಲಿ ಇದು ನಮ್ಮ ದಿಟ್ಟ ನಡೆಯಾಗಿದೆ.

ಮಹಿಳೆಯರಿಗೆ ಸಮಾನ ಅವಕಾಶ ನೀಡಿ ಅವರನ್ನು ಜೊತೆಯಲ್ಲಿ ಕರೆದೊಯ್ಯಬೇಕು ಎಂದು ಗಾಂಧೀಜಿ ಬಯಸಿದ್ದರು. ನಮ್ಮ ಸರ್ಕಾರ ಮಹಿಳಾ ಪರವಾಗಿದ್ದು ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇಕಡಾ 35 ರಷ್ಟು ಮೀಸಲಾತಿ ನೀಡಿದೆ. ಇದೇ ರೀತಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇಕಡಾ 50 ರಷ್ಟು ರಾಜಕೀಯ ಮೀಸಲಾತಿ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡಲು ಹೆಣ್ಣು ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತಿದೆ.
ಹಸಿವು ಮುಕ್ತ ಕರ್ನಾಟಕಕ್ಕಾಗಿ ಅನ್ನಭಾಗ್ಯ ಯೋಜನೆ, ಮಕ್ಕಳ ಪೌಷ್ಟಿಕತೆಗೆ ಕ್ಷೀರಭಾಗ್ಯ ಯೋಜನೆ, ಸಾಲದ ಬಾಧೆಯಿಂದ ಫಲಾನುಭವಿಗಳನ್ನು ಬಿಡುಗಡೆ ಮಾಡಲು ಋಣ ಮುಕ್ತ ಯೋಜನೆ, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಉತ್ತೇಜಿಸಲು ವಿದ್ಯಾಸಿರಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ.
ಗಾಂಧೀಜಿ ಅವರ ಚಿಂತನೆಗಳ ಹಾದಿಯಲ್ಲಿ ನಡೆಯುತ್ತಿರುವ, ದುಡಿಯುತ್ತಿರುವ ಹಿರಿಯ ಚೇತನಗಳನ್ನು ಗುರುತಿಸಿ 5 ಲಕ್ಷ ರೂ. ನಗದು ಒಳಗೊಂಡ ಕರ್ನಾಟಕ ಗಾಂಧೀ ಸೇವಾ ಪ್ರಶಸ್ತಿ ನೀಡಲಾಗುತ್ತಿದೆ. ಶಾಲಾ ಮಕ್ಕಳಲ್ಲಿ ಮತ್ತು ಯುವ ಜನರಲ್ಲಿ ಗಾಂಧೀಜಿ ಅವರ ಜೀವನ ಮೌಲ್ಯಗಳನ್ನು ಬಿತ್ತಿ ಉತ್ತಮ ಸಮಾಜ ಸೃಷ್ಟಿಸಲು ನಮ್ಮ ಸರ್ಕಾರ ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ.
ಮಹಾತ್ಮ ಗಾಂಧೀಜಿಯವರು ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಮೂರು ಕಿವಿ ಮಾತುಗಳನ್ನು ಹೇಳಿದ್ದರು. ಹಳ್ಳಿಗಳನ್ನು ಮರೆಯಬೇಡಿ, ಖಾದಿಯನ್ನು ಕೈ ಬಿಡಬೇಡಿ, ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳಿ ಎಂಬುದು ಗಾಂಧೀಜಿ ಅವರ ಹಿತ ನುಡಿಗಳಾಗಿದ್ದವು.
ಪ್ರಧಾನಿ ನೆಹರೂ ಅವರು ಈ ಮೂರೂ ಮಾತುಗಳನ್ನು ತಮ್ಮ ಆಡಳಿತದಲ್ಲಿ ಅಳವಡಿಸಿ ಕೊಂಡಿದ್ದರು. ಗ್ರಾಮೀಣಾಭಿವೃದ್ಧಿ ನೆಹರೂ ಅವರ ನೆಚ್ಚಿನ ಆದ್ಯತಾ ವಲಯವಾಗಿತ್ತು. ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ಗಾಂಧೀಜಿ ಅವರು ಹೆಚ್ಚಿನ ಪ್ರೋತ್ಸಾಹ ನೀಡಿ ಕೈ ಹಿಡಿದಿದ್ದರು. ಕೋಮು ಸೌಹಾರ್ದತೆಯನ್ನು ಕಾಪಾಡಲು ನೆಹರೂ ಅವರು ಸದಾ ಕಾಳಜಿ ವಹಿಸುತ್ತಿದ್ದರು.
ನಮ್ಮ ಸರ್ಕಾರ ಕೂಡ ಅದೇ ಹಾದಿಯಲ್ಲಿ ಮುನ್ನಡೆಯುತ್ತಿದೆ. ಗಾಂಧೀಜಿಯವರ ಹಿತನುಡಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅವರ ಕನಸುಗಳನ್ನು ನನಸು ಮಾಡಲು ಸದಾ ಶ್ರಮಿಸುತ್ತದೆ. ಮತ್ತೊಮ್ಮೆ ಕರ್ನಾಟಕದ ಸಮಸ್ತ ಜನತೆಗೆ ಗಾಂಧೀ ಜಯಂತಿಯ ಶುಭ ಕಾಮನೆಗಳು.












Click it and Unblock the Notifications