ಫೇಸ್ ಬುಕ್ ಮುಖಾಮುಖಿ : ಗಾಂಚಾಲಿ ಬಿಡಿ, ಕರ್ನಾಟಕ ರಸ್ತೆ ತೆರಿಗೆ ಕಟ್ಟಿ
ಬೆಂಗಳೂರು, ಜು. 07 : ಭಾರತ ಎಂದರೆ ಹಲವಾರು ಭಾಷೆಗಳ ಸಮ್ಮಿಲನ, ರಾಜ್ಯಗಳ ಗಡಿ ದಾಟುತ್ತಿದ್ದಂತೆ ವಿಭಿನ್ನ ಸಂಸ್ಕೃತಿಗಳ ಅನಾವರಣ. ನಾವು ಯಾವುದೇ ಭಾಷಿಗರಾದರೂ, ಯಾವುದೇ ರಾಜ್ಯದಲ್ಲಿ ನೆಲೆಸಿದರೂ ಒಬ್ಬರನ್ನೊಬ್ಬರನ್ನು ಗೌರವಿಸುತ್ತ ಬಂದಿದ್ದೇವೆ. ಆಯಾ ರಾಜ್ಯದ ಭಾಷೆ, ನೀತಿ ನಿಯಮ, ಕಾನೂನು ಕಟ್ಟಲೆಗಳನ್ನು ಗೌರವಿಸಬೇಕು ಕೂಡ.
ಇಲ್ಲಿನ ಗಾಳಿ, ನೀರು ಬೇಕು, ಉಬ್ಬು ತಗ್ಗುಗಳಿಲ್ಲದೆ ರಸ್ತೆಗಳು ಚೆನ್ನಾಗಿರಬೇಕು ಎಂದು ಬಯಸುವವರು ಕರ್ನಾಟಕ ರಾಜ್ಯ ವಿಧಿಸುವ ವಾಹನ ತೆರಿಗೆಯನ್ನು ಕಟ್ಟುವುದು ಬೇಡ ಎಂಬುದು ಯಾವ ನ್ಯಾಯ? ರಾಜ್ಯದ ಗಡಿಗೆ ಗೌರವ ಕೊಡಿ, ದಾಟಿ ಬಂದರೆ ತೆರಿಗೆ ನೀಡಿ, ಇಲ್ಲದಿದ್ದರೆ ಜಾಗ ಬಿಟ್ಟು ಹೊರಡಿ ಎಂಬ ಸಂದೇಶವುಳ್ಳ ಫೇಸ್ ಬುಕ್ ಪುಟವೊಂದು ಹುಟ್ಟಿಕೊಂಡಿದೆ.
'ಒಂದೇ ದೇಶ, ಒಂದೇ ರಸ್ತೆ ತೆರಿಗೆ' ಎಂಬ ಹೋರಾಟವನ್ನು ಬೆಂಗಳೂರಿನ ನಿವಾಸಿಯಾದ ವಾಸೀಮ್ ಮೆಮನ್ (ಹೆಸರು ನೋಡಿದರೆ ಮಲಯಾಳಿ ಅಂತ ಕಾಣುತ್ತದೆ) ಆರಂಭಿಸಿದ್ದಾರೆ. ಚೇಂಜ್.ಆರ್ಗ್ ನಲ್ಲಿ ಇಡೀ ದೇಶದಲ್ಲಿ ಒಂದೇ ರೀತಿಯ ರಸ್ತೆ ತೆರಿಗೆ ವಿಧಿಸಬೇಕು ಎಂಬ ಚಳವಳಿಯನ್ನು ಶುರುಮಾಡಿದ್ದಾರೆ. ಇದಕ್ಕೆ ಸಾಕಷ್ಟು ಬೆಂಬಲವೂ ವ್ಯಕ್ತವಾಗಿದೆ.
ಕರ್ನಾಟಕ ಮೋಟರ್ ವೆಹಿಕಲ್ ಟ್ಯಾಕ್ಸೇಷನ್ (ಅಮೆಂಡ್ಮೆಂಟ್) ಆಕ್ಟ್ 2014ರ ಪ್ರಕಾರ ರಾಜ್ಯದ ಆರ್ಟಿಓ ಅಧಿಕಾರಿಗಳು ಅತೀ ಹೆಚ್ಚಿನ ತೆರಿಗೆಯನ್ನು ಬಲವಂತವಾಗಿ ವಸೂಲಿ ಮಾಡುತ್ತಿದ್ದಾರೆ, ಇದು ಅನ್ಯಾಯ ಎಂಬುದು ಮೆಮನ್ ವಾದ. ಆದರೆ, ಒಂದು ತಿಂಗಳಿಗಿಂತ ಇಲ್ಲಿ ಹೆಚ್ಚು ಇದ್ದವರು ತೆರಿಗೆ ಕಟ್ಟಲೇಬೇಕು ಎಂಬುದು ಆರ್ಟಿಓಗಳ ವಾದ. ಯಾವುದು ಸರಿ, ಯಾವುದು ತಪ್ಪು?
ಕೆಲಸ ಅರಸಿ ಕರ್ನಾಟಕಕ್ಕೆ ಬಂದವರು ದಶಕಗಳವರೆಗೂ ಇಲ್ಲಿಯೇ ಇದ್ದರೂ ಕೂಡ ಕನ್ನಡ ಮಾತಾಡಲ್ಲ, ಕಾನೂನಿನ ನಿಯಮಕ್ಕೆ ತಕ್ಕಂತೆ ತೆರಿಗೆ ಕೂಡ ಕಟ್ಟದಿದ್ದರೆ ಹೇಗೆ? ಅನ್ಯ ರಾಜ್ಯಗಳ ವಾಹನಗಳನ್ನು ಕಂಡರೆ ಆರ್ಟಿಓಗಳಿಗೆ ತಿಳಿಸಿ. 'ಗಾಂಚಾಲಿ ಬಿಡಿ, ಕರ್ನಾಟಕ ರಸ್ತೆ ತೆರಿಗೆ ಕಟ್ಟಿ' ಎಂಬ ಅಭಿಯಾನವನ್ನು ಫೇಸ್ ಬುಕ್ಕಿನಲ್ಲಿ ಆರಂಭಿಸಲಾಗಿದೆ. ನಾಡುನುಡಿಗೆ ಬೆಲೆ ಕೊಡಿ, ಇಲ್ಲದಿದ್ದರೆ ಇಲ್ಲಿಂದ ಹೊರಡಿ ಎಂಬುದು ಅವರ ವಾದ.
ಈ ಅಭಿಯಾನಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕದವರೂ ಅನ್ಯ ರಾಜ್ಯಗಳಿಗೆ ಹೋಗುತ್ತಿರುತ್ತಾರೆ, ಅವರಿಗೂ ಇದೇ ರೀತಿ ತೆರಿಗೆ ಹೇರಿದರೆ ಹೇಗೆ? ಈ ಫೇಸ್ ಬುಕ್ ಗುಂಪು ದೇಶದ್ರೋಹಿಯಂತೆ ವರ್ತಿಸುತ್ತಿದೆ. ಪ್ರಾದೇಶಿಕತೆಯ ಆಧಾರದ ಮೇಲೆ ಇದು ದೇಶವನ್ನು ಒಡೆಯಲು ಯತ್ನಿಸುತ್ತಿದೆ. ಇದಕ್ಕೆ ನನ್ನ ವಿರೋಧವಿದೆ. ಬೇರೆ ಯಾವ ದೇಶದಲ್ಲಿಯೂ ಪ್ರತ್ಯೇಕ ತೆರಿಗೆ ಇರುವುದಿಲ್ಲ ಎಂದು ಹಲವಾರು ಜನರು ಕೆಂಡ ಕಾರಿದ್ದಾರೆ.
ಆದರೆ ವಿಷಯವಿರುವುದು, ವರ್ಷಗಟ್ಟಲೆ ಇಲ್ಲಿಯೇ ವಾಸಿಸುತ್ತಿದ್ದರೂ ಸರಕಾರಕ್ಕೆ ಕಡ್ಡಾಯವಾಗಿ ಕಟ್ಟಲೇಬೇಕಾದ ತೆರಿಗೆಯನ್ನು ಯಾಕೆ ಕಟ್ಟುತ್ತಿಲ್ಲ? ಏನೇನೋ ಸಬೂಬು ಹೇಳಿಕೊಂಡು ತೆರಿಗೆ ತಪ್ಪಿಸುತ್ತಿರುವವರು ಲಕ್ಷಗಟ್ಟಲೆ ಜನರು ಕರ್ನಾಟಕದಲ್ಲಿದ್ದಾರೆ. ಇಲ್ವಾ ಹೇಳಿ? ಇಂಥವರ ವಿರುದ್ಧ ಕ್ರಮ ತೆಗೆದುಕೊಂಡರೆ ತಪ್ಪಾ? [ಹಳೇ ವಾಹನ ಮಾರ್ತೀರಾ? ಈ ಅಂಶ ಗಮನದಲ್ಲಿರಲಿ]
ಏಕರೂಪ ತೆರಿಗೆ ಏಕೆ ಕೇಳುತ್ತಿದ್ದಾರೆ?
* ಮೂಲ ವಾಹನ ದರ ಆಧಾರಿತ ತೆರಿಗೆ ವಿಪರೀತ ತುಟ್ಟಿ.
* ಬೇರೆ ರಾಜ್ಯಕ್ಕೆ ವರ್ಗವಾದರೆ ಕಟ್ಟಿದ ಹಣ ವಾಪಸ್ ಪಡೆಯುವುದು ತೀರ ಕಷ್ಟದ ಸಂಗತಿ.
* ಹಣ ಮರುಪಾವತಿಗೆ ಯಾವುದೇ ಕೇಂದ್ರಿತ ವ್ಯವಸ್ಥೆಯಿಲ್ಲ.
* ತೆರಿಗೆ ಪಡೆಯುವ ಆರ್ಟಿಓ ಅಧಿಕಾರಿಗಳಿಂದ ಕಿರುಕುಳ.
* ಅನ್ಯ ರಾಜ್ಯಕ್ಕೆ ವರ್ಗವಾದ ಪ್ರತಿಬಾರಿಯೂ ಜೀವಮಾನ ತೆರಿಗೆ ಕಟ್ಟಬೇಕಾಗಿದೆ.













Click it and Unblock the Notifications