ಎಸ್.ಎಂ ಕೃಷ್ಣ ಸುದ್ದಿಗೋಷ್ಠಿ: ಉಳಿದವರು ಕಂಡಂತೆ..

Subscribe to Oneindia Kannada

ಬೆಂಗಳೂರು, ಜನವರಿ 29: ಹಿರಿಯ ಮುತ್ಸದ್ಧಿ ಎಸ್.ಎಂ ಕೃಷ್ಣಾ ರಾಜೀನಾಮೆ ಕರ್ನಾಟಕ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಕಾಂಗ್ರೆಸ್ ಒಳಗಿರುವ ಹಿರಿಯರು, ಹೊರ ಹೋದವರೆಲ್ಲಾ ಕೃಷ್ಣಾ ಪರವಾಗಿ ಬ್ಯಾಟಿಂಗಿಗೆ ಇಳಿದಿದ್ದಾರೆ.

ಮೈಸೂರಿನಲ್ಲಿ ಶ್ರೀನಿವಾಸ್ ಪ್ರಸಾದ್ ಕೃಷ್ಣಾ ಬೆಂಬಲಕ್ಕೆ ಬಂದಿದ್ದರೆ, ಇತ್ತ ಪ್ರಕಾಶ್ ಹುಕ್ಕೇರಿ ಕೃಷ್ಣಾ ಹಾದಿಯಲ್ಲಿ ನಾನೂ ಪಕ್ಷ ಬಿಡುತ್ತೇನೆ ಎನ್ನುವ ಬೆದರಿಕೆ ಹಾಕಿದ್ದಾರೆ. ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿಯನ್ನು ಸ್ವಾಗತಿಸಲು ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಕಾತರದಿಂದ ಕಾಯುತ್ತಿವೆ. ಬರುವುದಿದ್ದರೆ ನಮ್ಮ ಪಕ್ಷದ ಬಾಗಿಲು ತೆರಿದಿದೆ ಎಂದು ಎರಡೂ ಪಕ್ಷಗಳು ಈಗಾಗಲೇ ಸಂದೇಶ ರವಾನಿಸಿವೆ.

ಕೃಷ್ಣ ಹಾದಿಯಲ್ಲಿ ನಾನೂ ಪಕ್ಷ ಬಿಡುತ್ತೇನೆ

ಕೃಷ್ಣ ಹಾದಿಯಲ್ಲಿ ನಾನೂ ಪಕ್ಷ ಬಿಡುತ್ತೇನೆ

"ಎಸ್.ಎಂ.ಕೃಷ್ಣ ಅವರು ಹಿರಿಯ ನಾಯಕರು. ಅವರು ಕಾಂಗ್ರೆಸ್ ತೊರೆಯದಂತೆ ನಾವು ಮನವೊಲಿಸುತ್ತೇನೆ. ಒಂದು ವೇಳೆ ಅವರು ಒಪ್ಪದಿದ್ದರೆ ಅವರ ಹಾದಿಯಲ್ಲೇ ನಾನು ಮುಂದುವರೆಯುತ್ತೇನೆ. ನಾನು ಎಸ್.ಎಂ.ಕೃಷ್ಣ ಅವರ ಕಟ್ಟಾ ಅಭಿಮಾನಿ. ನನ್ನನ್ನು ರಾಜಕೀಯದಲ್ಲಿ ಅವರು ಬೆಳೆಸಿದ್ದಾರೆ," ಎಂದು ಹಿರಿಯ ಕಾಂಗ್ರೆಸ್ ನಾಯಕ ಪ್ರಕಾಶ್ ಹುಕ್ಕೇರಿ ಹೇಳಿದ್ದಾರೆ.

"2018ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಪಕ್ಷವನ್ನು ಮುನ್ನಡೆಸಬೇಕಾಗಿತ್ತು. ಅವರು ಯಾವ ಕಾರಣಕ್ಕಾಗಿ ಪಕ್ಷ ತೊರೆಯುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಅವರ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದೇನೆ. ನಾನು ಅವರ ಮನವೊಲಿಕೆಗೆ ಪ್ರಯತ್ನಿಸುವೆ," ಎಂದು ಹುಕ್ಕೇರಿ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಕೃಷ್ಣರಂಥವರು ಬೇಕು

ಬಿಜೆಪಿ ಕೃಷ್ಣರಂಥವರು ಬೇಕು

ಎಸ್.ಎಂ ಕೃಷ್ಣಾ ಬಿಜೆಪಿಗೆ ಸೇರುತ್ತಾರೆ ಎಂಬ ಗಾಳಿ ಸುದ್ದಿಗಳು ಓಡಾಡುತ್ತಿವೆ. ಇದೇ ಸಂದರ್ಭದಲ್ಲಿ ಮಡಿಕೇರಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಸದಾನಂದ ಗೌಡ," ಕೃಷ್ಣರಂಥ ನೇರ ನುಡಿಯ, ಸರಳ ವ್ಯಕ್ತಿತ್ವದವರು ಬಿಜೆಪಿ ಪಕ್ಷಕ್ಕೆ ಬೇಕಾಗಿದ್ದಾರೆ. ಕೃಷ್ಣ ಅವರ ವ್ಯಕ್ತಿತ್ವ ಬಿಜೆಪಿಗೆ ಹೊಂದಾಣಿಕೆ ಆಗಲಿದೆ," ಎಂದಿದ್ದಾರೆ. ಮಾತ್ರವಲ್ಲ ಬಿಜೆಪಿ ಪಕ್ಷಕ್ಕೆ ಅವರಿಗೆ ಸ್ವಾಗತವಿದೆ ಎಂದು ಸದಾನಂದ ಗೌಡರು ಹೇಳಿದ್ದಾರೆ. ಈ ಮೂಲಕ ಕೇಸರಿ ಪಕ್ಷಕ್ಕೆ ಪರೋಕ್ಷ ಆಹ್ವಾನ ನೀಡಿದ್ದಾರೆ.

ಜೆಡಿಎಸ್ ಬಾಗಿಲ್ ಓಪನ್

ಜೆಡಿಎಸ್ ಬಾಗಿಲ್ ಓಪನ್

ಮನ ಪರಿವರ್ತನೆ ಯಾಗದಿದ್ದರೆ ಜೆಡಿಎಸ್ ಬಾಗಿಲು ತೆರೆದಿದೆ ಎಂದು ಸ್ವತಃ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, "ಎಸ್ ಎಂ ಕೃಷ್ಣ ಅವರು ತುಂಬ ಅನುಭವ ಇರುವ ರಾಜಕಾರಣಿ. ಅವರೀಗ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಅವರ ಹೈಕಮಾಂಡ್ ಬಂದು ಮನವೊಲಿಸಿದರೆ ನಾವು ನೀವು ಏನೂ ಮಾಡಲಾಗುವುದಿಲ್ಲ. ಆದರೆ ಮನ ಪರಿವರ್ತನೆಯಾಗದಿದ್ದರೆ ಜೆ.ಡಿ.ಎಸ್ಗೆ ಬನ್ನಿ. ಜೆ.ಡಿ.ಎಸ್ ಬಾಗಿಲು ಯಾವತ್ತೂ ತೆರೆದಿದೆ," ಎಂದು ದೇವೇಗೌಡರು ಹೇಳಿದ್ದಾರೆ.

ರಾಜಕೀಯದಲ್ಲಿ ಮುಂದುವರಿಯಬೇಕು-ಎಚ್ಡಿಕೆ

ರಾಜಕೀಯದಲ್ಲಿ ಮುಂದುವರಿಯಬೇಕು-ಎಚ್ಡಿಕೆ

ಎಸ್.ಎಂ. ಕೃಷ್ಣರವರು ರಾಜಕೀಯ ನಿವೃತ್ತಿ ಹೊಂದದೇ ಇನ್ನೂ ಮುಂದುವರೆಯಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕನಕಪುರದಲ್ಲಿ ಮಾತನಾಡಿದ ಅವರು, "ಎಸ್.ಎಂ.ಕೃಷ್ಣರವರು ಹಿರಿಯ ಮುತ್ಸದ್ಧಿ, ಸಭ್ಯ ಮತ್ತು ಸುಸಂಸ್ಕೃತ ರಾಜಕಾರಣಿ. ಅವರು ರಾಜಕೀಯದಲ್ಲಿ ಮುಂದುವರೆಯಬೇಕು," ಎಂದು ತಿಳಿಸಿದ್ದಾರೆ.

ಶ್ರೀನಿವಾಸ್ ಪ್ರಸಾದ್ ಏನಂದರು?

ಶ್ರೀನಿವಾಸ್ ಪ್ರಸಾದ್ ಏನಂದರು?

"ಪಕ್ಷ ತನ್ನನ್ನು ಮೂಲೆಗುಂಪು ಮಾಡಿದೆ ಎಂಬ ಭಾವನೆಯಿಂದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದಿರಬಹುದು," ಎಂದು ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, "ಸಿದ್ದರಾಮಯ್ಯ ಜೆಡಿಎಸ್ ನಲ್ಲಿದ್ದಾಗ ಹಲವು ಬಾರಿ ಎಸ್ ಎಂ ಕೃಷ್ಣ ಅವರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದರು. ನಂತರ ಕಾಂಗ್ರೆಸ್ ಗೆ ಸೇರ್ಪಡೆಗೊಂಡು ಸಿಎಂ ಆದ ಬಳಿಕ ಸಿದ್ದರಾಮಯ್ಯ 50 ವರ್ಷಗಳ ರಾಜಕೀಯ ಅನುಭವವಿರುವ ಮುತ್ಸದ್ಧಿ ಕೃಷ್ಣ ಅವರನ್ನು ಭೇಟಿ ಮಾಡಲಿಲ್ಲ. ಅವರ ಬಳಿ ಯಾವುದೇ ಸಲಹೆ ಪಡೆಯಲಿಲ್ಲ," ಎಂದು ಪ್ರಸಾದ್ ದೂರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
JDS and BJP welcomed SM Krishna to their parties.
Please Wait while comments are loading...