PSI Exam 2024 update: ಪಿಎಸ್‌ಐ ಪರೀಕ್ಷೆ ಮತ್ತೆ ಮುಂದೂಡಿಕೆ ಆಗುತ್ತಾ?: ಜಿ.ಪರಮೇಶ್ವರ ರಿಯಾಕ್ಷನ್
ಬೆಂಗಳೂರು, ಆಗಸ್ಟ್ 30: ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆ ಕಳೆದ ಜೂನ್ 16ರಂದು ಆಗಿದೆ. ಇದೀಗ ಯುಪಿಎಸ್‌ಸಿ ಮೇನ್ಸ್ ಸೆಪ್ಟಂಬರ್ 20ರಂದು ನಿಗದಿಯಾಗಿದೆ. ಇದೇ ವೇಳೆ ಕರ್ನಾಟಕದ ಬಹುನಿರೀಕ್ಷೆಯ ಪಿಎಸ್ಐ ನೇಮಕಾತಿ ಪರೀಕ್ಷೆ ನಡೆಯಲಿದೆ. ಈ ಸಂಬಂಧ ಪರೀಕ್ಷೆ ನಡೆಸುವ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಬೆಂಗಳೂರಿನ ತಮ್ಮ ನಿವಾಸದ ಬಳಿ ಶುಕ್ರವಾರ ಮಾತನಾಡಿದ ಅವರು, ಯುಪಿಎಸ್‌ಸಿಗಿಂತ ಮೊದಲೇ ನಾವು ಪಿಎಸ್‌ಐ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದ್ದೇವೆ. ಮುಂದೂಡುವ ಬಗ್ಗೆ ಸಾಧ್ಯತೆ ಇದ್ದರೆ, ಹೆಚ್ಚಿನ ಮನವಿಗಳು ಬಂದಿದ್ದರೆ ಪರಿಗಣಿಸಬಹುದು. ಈ ಬಗ್ಗೆ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಈಗಾಗಲೇ ಪಿಎಸ್ಐ ನೇಮಕಾತಿ ಬಹಳ ವಿಳಂಬವಾಗಿದೆ. ಈ ಹಿಂದೆ ಗೃಹ ಸಚಿವನಾಗಿದ್ದಾಗ ಯಾವುದೇ ಅಡೆತಡೆಗಳಿಲ್ಲದೇ ಸಾವಿರಾರು ಹುದ್ದೆಗಳ ನೇಮಕಾತಿ ಸುಲಭವಾಗಿ ನಡೆದಿದೆ. ಪಿಎಸ್ಐ ಹಗರಣದ ಬಳಿಕ ವಿಳಂಬವಾಗುತ್ತಿದೆ. ಫಲಿತಾಂಶ ಪ್ರಕಟಿಸಲು ಸಹ ಕೋರ್ಟ್‌ಗೆ ಹೋಗುತ್ತಿದ್ದಾರೆ. ಆದರೂ ಫಲಿತಾಂಶ ಪ್ರಕಟಿಸಲು ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ರಾಜ್ಯಪಾಲರು ತರಾತುರಿಯಲ್ಲಿ ನಿರ್ಧಾರ
ಇನ್ನೂ ಕರ್ನಾಟಕ ರಾಜ್ಯದ ರಾಜ್ಯಪಾಲರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಮತ್ತು ಜನಾರ್ಧನ ರೆಡ್ಡಿ ವಿರುದ್ಧದ ಅಕ್ರಮಗಳಿಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ವರ್ಷಾನುಗಟ್ಟಲೇ ಕಾದರೂ ಅವಕಾಶ ಕೊಟ್ಟಿಲ್ಲ ಎಂಬುದನ್ನು ಅಭಿಷೇಕ್ ಮನು ಸಿಂಘ್ವಿ ಅವರು ನ್ಯಾಯಾಲಯದ ಮುಂದೆ ಪ್ರಸ್ತಾಪಿಸಿದ್ದಾರೆ.
ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತರಾತುರಿಯಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬ ಅಂಶವನ್ನು ಗಮನಕ್ಕೆ ತಂದಿದ್ದಾರೆ. ಈ ವಿಚಾರವನ್ನು ರಾಷ್ಟ್ರಪತಿ ಭೇಟಿಗೆ ಹೋದಾಗ ಪ್ರಸ್ತಾಪಿಸುತ್ತೇವೆ ಎಂದು ತಿಳಿಸಿದರು.












Click it and Unblock the Notifications