ಅಪಘಾತ ನಿಯಂತ್ರಣಕ್ಕೆ ಇಲಾಖೆಯ ಹಣ ಬಳಕೆಗೆ ಗ್ರೀನ್ ಸಿಗ್ನಲ್: ಜಿ.ಪರಮೇಶ್ವರ
ತುಮಕೂರು, ಸೆಪ್ಟಂಬರ್ 09: ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕಾಟಗಾನಹಟ್ಟಿ ಮತ್ತು ಕೆರೆಗಳಪಾಳ್ಯ ಸಮೀಪ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ 06 ಜನ ಮೃತಪಟ್ಟ ಸ್ಥಳಕ್ಕೆ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಪಘಾತ ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.
ಇದೇ ವೇಳೆ ಅವರು ಮಧುಗಿರಿ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರಿಂದ ಮಾಹಿತಿ ಪಡೆದರು. ಧೈರ್ಯ ತೆಗೆದುಕೊಳ್ಳುವಂತೆ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ, ಘಟನೆಗೆ ವಿಷಾದ ವ್ಯಕ್ತಪಡಿಸಿದರು.

ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಪಘಾತ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು. ಈ ಅಪಘಾತ ನಿಯಂತ್ರಿಸಲು ಗೃಹ ಇಲಾಖೆಯ ಅನುದಾನವನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಪಘಾತ ವಲಯ, ರಸ್ತೆ ತಿರುವುಗಳನ್ನು ಗುರುತಿಸಿ ಕ್ರಮಕೈಗೊಳ್ಳಲಾಗುತ್ತಿದೆ.
ನಾಲ್ಕೇ ತಿಂಗಳಲ್ಲಿ 100ಕ್ಕೂ ಹೆಚ್ಚು ಮಂದಿ ಸಾವು
ಮೈಸೂರು ಹೆದ್ದಾರಿಯಲ್ಲಿ ಕಳೆದ ವರ್ಷ, ನಾಲ್ಕು ತಿಂಗಳ ಅವಧಿಯಲ್ಲಿ ನೂರಕ್ಕು ಹೆಚ್ಚು ಜನ ಮೃತಪಟ್ಟಿದ್ದರು. ಈಗ ಕ್ರಮ ತೆಗೆದುಕೊಂಡ ಬಳಿಕ ಅಪಘಾತ ಇಳಿಕೆಯಾಗಿದೆ. ಅಪಘಾತದಿಂದ ಸಾವನ್ನಪ್ಪುವ ಪ್ರಮಾಣ ಕಡಿಮೆಯಾಗಿದೆ. ರಸ್ತೆ ಸುರಕ್ಷತಾ ಕ್ರಮಕೈಗೊಳ್ಳಲು ನೂರು ಕೋಟಿ ರೂ. ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಇನ್ನೂ ಆರು ಮಂದಿ ಸಾವಿನ ಘಟನೆ ಕುರಿತು ಮಾತನಾಡಿದ ಅವರು, ಕಾರುಗಳು ಅಪಘಾತ ಸಂಭವಿಸಿದ ರಸ್ತೆ ನೇರವಾಗಿದೆ. ಈ ಘಟನೆ ನಡೆದಿರುವುದು ಅಚ್ಚರಿ ಮೂಡಿಸಿದೆ. ಮೃತರ ಕುಟುಂಬಸ್ಥರಿಗೆ ನಷ್ಟ ಭರಿಸುವ ಶಕ್ತಿ ನೀಡಲಿ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

ಘಟನಾ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ ಲಾಭು ರಾಮ್ ಅವರು ಆಗಮಿಸಿದ್ದಾರೆ. ಘಟನೆಗೆ ನಿಖರವಾದ ಕಾರಣವೇನು? ಇಂತಹ ಘಟನೆಗಳು ಮರುಕಳಿಸದಂತೆ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ತನಿಖೆ ನಡೆಸುವಂತೆ ತಿಳಿಸಲಾಗಿದೆ.
ಹೆದ್ದಾರಿಗಳಲ್ಲಿ ಕ್ರಮಕ್ಕೆ ಚಿಂತನೆ
ರಸ್ತೆಗಳು ಉತ್ತಮವಾಗಿರುವುದರಿಂದ ಸಾಮಾನ್ಯವಾಗಿ ಇಲ್ಲಿ ಸಂಚರಿಸುವ ವಾಹನಗಳು ವೇಗವಾಗಿ ಚಲಿಸುತ್ತಿವೆ. ಮೈಸೂರು ರಸ್ತೆಯಲ್ಲಿ ಎಐ ಆಧರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೆಚ್ಚಿನ ವೇಗದಲ್ಲಿ ಹೋಗುವ ವಾಹನಗಳನ್ನು ಗುರುತಿಸಿ ದಂಡ ವಿಧಿಸಲಾಗುತ್ತಿದೆ. ಅದೇ ರೀತಿ, ರಾಜ್ಯ ಹೆದ್ದಾರಿಗಳಲ್ಲಿ ಕೈಗೊಳ್ಳಬೇಕಾದ ಕ್ರಮದ ಕುರಿತು ಚಿಂತನೆ ನಡೆಯುತ್ತಿದೆ. ಸಾರಿಗೆ ಇಲಾಖೆಯೊಂದಿಗೆ ಕೈಜೋಡಿಸಿ ವಾಹನ ಚಾಲಕರಿಗೆ ತಿಳುವಳಿಕೆ ಮೂಡಿಸುವ ಕಾರ್ಯವನ್ನು ಮಾಡಲಾಗುವುದು ಎಂದು ಹೇಳಿದರು.
ಸ್ಥಳಕ್ಕೆ ಭೇಟಿ ವೇಳೆ ಡಿಜಿಪಿ ಅಲೋಕ್ ಕುಮಾರ್, ಕೇಂದ್ರ ವಲಯ ಐಜಿಪಿ ಲಾಭು ರಾಮ್, ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications