ವ್ಯಕ್ತಿ, ಕುಟುಂಬ ಆಧಾರಿತ ರಾಜಕೀಯ ಪಕ್ಷಗಳಿಗೆ ಭವಿಷ್ಯವಿಲ್ಲ: ಯಾಕೆ ಗೊತ್ತಾ?
ಬೆಂಗಳೂರು, ಫೆಬ್ರವರಿ 26: ಬಹುತೇಕ ಪ್ರಾದೇಶಿಕ ಪಕ್ಷಗಳ ನಾಯಕತ್ವವು ವ್ಯಕ್ತಿ ಮತ್ತು ಕುಟುಂಬ ಆಧಾರಿತವಾಗುತ್ತಿದ್ದು, ಅದರಾಚೆಗೆ ಬಂದು ಪಕ್ಷವನ್ನು ಸಂಘಟಿಸದ ಕಾರಣದಿಂದ ಮತ್ತು ಪಕ್ಷದ ಆಯಕಟ್ಟಿನಲ್ಲಿ ಸಮರ್ಥ ನಾಯಕರಿಗೆ ಅವಕಾಶ ನೀಡದೆ ಕುಟುಂಬದವರಿಗೆ ಮಣೆ ಹಾಕುತ್ತಿರುವುದರಿಂದ ಪ್ರಾದೇಶಿಕ ಪಕ್ಷಗಳು ನಿಧಾನವಾಗಿ ತಮ್ಮ ವರ್ಚಸ್ಸು ಕಳೆದುಕೊಳ್ಳುತ್ತಿವೆ.
ಅಷ್ಟೇ ಅಲ್ಲದೆ ನಾವೇನು ಮಾಡಿದರೂ ಮೇಲ್ಮಟ್ಟದಲ್ಲಿರುವ ನಾಯಕರು ತಮ್ಮ ಅನುಕೂಲಕ್ಕೇನು ಬೇಕೋ ಅದನ್ನಷ್ಟೇ ಮಾಡುತ್ತಿದ್ದಾರೆ ಎಂಬ ನಿರಾಸೆ ತಳಮಟ್ಟದಲ್ಲಿ ಕೆಲಸ ಮಾಡುವ ನಾಯಕರು ಮತ್ತು ಕಾರ್ಯಕರ್ತರಲ್ಲಿ ಮೂಡುತ್ತಿದೆ. ಇದರಿಂದ ಅವರು ಪಕ್ಷದ ಬಗ್ಗೆ ನಿರಾಸಕ್ತಿ ತಾಳುತ್ತಿದ್ದು ಪಕ್ಷ ಸಂಘಟನೆ ಹಳ್ಳಹಿಡಿಯುತ್ತಿದೆ.

ಇವತ್ತು ನಮ್ಮ ದೇಶದಲ್ಲಿ ನೂರಾರು ಪ್ರಾದೇಶಿಕ ಪಕ್ಷಗಳಿದ್ದರೂ ಕೆಲವೇ ಕೆಲವು ಪಕ್ಷಗಳು ಮಾತ್ರ ಸ್ವತಂತ್ರ್ಯವಾಗಿ ಆಡಳಿತ ನಡೆಸುವ ಮಟ್ಟದಲ್ಲಿವೆ. ಉಳಿದಂತೆ ಹಲವು ರಾಜ್ಯಗಳನ್ನು ಆಳಿದ್ದ ಪ್ರಾದೇಶಿಕ ಪಕ್ಷಗಳು ಮೂಲೆ ಸೇರಿವೆ. ಇದಕ್ಕೆ ಕಾರಣಗಳು ಹಲವು ಇರಬಹುದು ಆದರೆ ಅದರಾಚೆಗೂ ಬಹುತೇಕ ಪ್ರಾದೇಶಿಕ ಪಕ್ಷಗಳು ಕೆಲವೇ ಕೆಲವು ಕುಟುಂಬಗಳ ಹಿಡಿತದಲ್ಲಿವೆ. ಹೀಗಾಗಿ ಅಂತಹ ಪಕ್ಷಗಳಲ್ಲಿ ಎಷ್ಟೇ ಮೇಧಾವಿ ನಾಯಕರಿದ್ದರೂ ಅವರು ಯಾರು ಕೂಡ ಪಕ್ಷವನ್ನು ಹುಟ್ಟು ಹಾಕಿದ ವ್ಯಕ್ತಿಯ ಕುಟುಂಬದ ಸದಸ್ಯರನ್ನು ಮೀರಿ ಪಕ್ಷದಲ್ಲಿ ಬೆಳೆಯುವುದಕ್ಕೆ ಸಾಧ್ಯವಾಗುತ್ತಿಲ್ಲ.
ಕೆಲವೊಂದು ಪ್ರಾದೇಶಿಕ ಪಕ್ಷಗಳಂತು ಒಂದು ಕುಟುಂಬದ ಸ್ವತ್ತಾಗಿದೆ. ಹೀಗಾಗಿ ಇತರೆ ನಾಯಕರು ಪಕ್ಷಕ್ಕಾಗಿ ಪ್ರಾಣ ಕೊಟ್ಟು ಕೆಲಸ ಮಾಡಿದರೂ ಅಂತಿಮವಾಗಿ ಅದರ ಲಾಭಗಳೆಲ್ಲವೂ ಪಕ್ಷವನ್ನು ಹುಟ್ಟುಹಾಕಿದ ವ್ಯಕ್ತಿ ಮತ್ತು ಆತನ ಕುಟುಂಬದ ಪಾಲಾಗುತ್ತದೆ. ಅಷ್ಟೇ ಅಲ್ಲದೆ ಪಕ್ಷ ಅಧಿಕಾರಕ್ಕೆ ಬಂದರೂ ಲಾಭವೇನಿದೆಯೋ ಅದೆಲ್ಲವನ್ನು ಬಳಸಿಕೊಳ್ಳುವವರು ಕೂಡ ಪಕ್ಷವನ್ನು ಹುಟ್ಟು ಹಾಕಿದವರೇ. ಹೀಗಾಗಿ ಪ್ರಾದೇಶಿಕ ಪಕ್ಷಗಳಲ್ಲಿ ಪಕ್ಷ ಕಟ್ಟುವವರಿಗಿಂತ ಪಕ್ಷವನ್ನು ಹುಟ್ಟುಹಾಕಿದವರ ಹಿಡಿತ ದೊಡ್ಡ ಮಟ್ಟದಲ್ಲಿದೆ ಎನ್ನುವುದನ್ನು ತಳ್ಳಿ ಹಾಕಲಾಗದು.
ಪ್ರಾದೇಶಿಕ ಪಕ್ಷಗಳಲ್ಲಿ ಭಟ್ಟಂಗಿಗಳಿಗೆ ಮಣೆ
ಒಂದು ಹಂತದವರೆಗೆ ಇದೆಲ್ಲವೂ ನಡೆಯುತ್ತದೆ. ಆದರೆ ಮುಂದುವರೆದಂತೆ ನಾಯಕರ ನಡುವೆ ಭಿನ್ನಮತ ಭುಗಿಲೇಳುವ ಕಾರಣದಿಂದ ತಳಮಟ್ಟದಲ್ಲಿ ಕೆಲಸ ಮಾಡುವ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಜತೆಗೆ ಪಕ್ಷದಲ್ಲಿ ಹಿಡಿತ ಇರುವವರು, ಎಲ್ಲರನ್ನು ಒಟ್ಟಾಗಿ ಕೊಂಡೊಯ್ಯುವವರು, ಸ್ವಾರ್ಥ ರಹಿತರು, ಪ್ರತಿಷ್ಠೆಯನ್ನು ಬದಿಗಿಟ್ಟು ಕೆಲಸ ಮಾಡುವವರು ಸೇರಿದಂತೆ ನಾಯಕತ್ವ ಗುಣದ ನಾಯಕರನ್ನು ಗುರುತಿಸಿ ಅವರನ್ನು ಪಕ್ಷದ ಮುಖ್ಯವಾಹಿನಿಗೆ ತರುವ ಬದಲು ಭಟ್ಟಂಗಿಗಳನ್ನಿಟ್ಟುಕೊಂಡು ಮುನ್ನಡೆಯುವುದರಿಂದ ಅಧಿಕಾರಕ್ಕೇರಿದ ಪಕ್ಷಗಳು ಕೂಡ ನೆಲಕಚ್ಚುವಂತಾಗಿದೆ.

ದೇಶದಲ್ಲಿ ಕೆಲವೊಂದು ರಾಜ್ಯಗಳು ಇವತ್ತಿಗೂ ಪ್ರಾದೇಶಿಕ ಪಕ್ಷದ ಹಿಡಿತದಲ್ಲಿವೆ. ಅಷ್ಟೇ ಅಲ್ಲದೆ ಅಲ್ಲಿಗೆ ರಾಷ್ಟ್ರೀಯ ಪಕ್ಷಗಳು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಲಾಗುತ್ತಿದೆ. ದೇಶವನ್ನೇ ಆಳುವ ಬಿಜೆಪಿಗೆ ಕೆಲವೊಂದು ರಾಜ್ಯಗಳಲ್ಲಿ ಖಾತೆಯನ್ನೇ ತೆರೆಯಲಾಗದಷ್ಟು ದುರ್ಬಲ ಸ್ಥಿತಿಯಲ್ಲಿದೆ. ಉಳಿದಂತೆ ಕೆಲವೊಂದು ರಾಜ್ಯಗಳಲ್ಲಿ ಬಿಜೆಪಿಯನ್ನು ದೂರವಿಟ್ಟು ಕಾಂಗ್ರೆಸ್ ಪಕ್ಷವನ್ನು ಅಪ್ಪಿಕೊಂಡಿರುವ ಪ್ರಾದೇಶಿಕ ಪಕ್ಷಗಳು ಇಲ್ಲದಿಲ್ಲ. ಇವತ್ತಿನ ಪರಿಸ್ಥಿತಿಯಲ್ಲಿ ಕೆಲವೊಂದು ಪ್ರಾದೇಶಿಕ ಪಕ್ಷಗಳಿಗೆ ಚುನಾವಣೆಯನ್ನು ಎದುರಿಸುವ ಶಕ್ತಿಯಿಲ್ಲದಂತಾಗಿದೆ. ಸಂಪನ್ಮೂಲದ ಕೊರತೆ ಕಾಡುತ್ತಿವೆ. ಹೀಗಾಗಿ ಅವು ರಾಷ್ಟ್ರೀಯ ಪಕ್ಷಗಳ ನೆರಳಿನಲ್ಲಿ ಉಸಿರಾಡಿಕೊಂಡು ಪಕ್ಷ ಉಳಿದರೆ ಸಾಕೆಂಬ ಸ್ಥಿತಿಗೂ ಬಂದು ನಿಂತಿವೆ.
ಬಹುತೇಕ ಪ್ರಾದೇಶಿಕ ಪಕ್ಷಗಳು ಮಂಕಾಗಿವೆ
ಒಂದು ಕಾಲದಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿದ್ದ ಪ್ರಾದೇಶಿಕ ಪಕ್ಷಗಳು ಬಹುತೇಕ ಅಧಿಕಾರವನ್ನು ಮತ್ತು ಪ್ರಾಬಲ್ಯವನ್ನು ಕಳೆದುಕೊಂಡು ಮಂಕಾಗಿವೆ. ಇನ್ನು ಕೆಲವು ಪ್ರಾದೇಶಿಕ ಪಕ್ಷಗಳು ಒಡೆದು ಹೋಳಾಗಿ ಬಣಗಳಾಗಿ ಗುದ್ದಾಡುತ್ತಿವೆ. ಇದಕ್ಕಿಂತ ಹೆಚ್ಚಾಗಿ ಪ್ರಾದೇಶಿಕ ಪಕ್ಷಗಳಲ್ಲಿ ಮನ್ನಣೆ ಸಿಗದ ನಾಯಕರು ರಾಷ್ಟ್ರೀಯ ಪಕ್ಷಗಳತ್ತ ಮುಖ ಮಾಡಿ ಕೆಲವೊಂದು ಅಧಿಕಾರದ ಸ್ಥಾನವನ್ನು ಅಲಂಕರಿಸಿದ್ದಾರೆ. ಇದರಿಂದಾಗಿ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿದ್ದರೂ ಅವು ಅಧಿಕಾರ ಪಡೆಯುವ ಮಟ್ಟಕ್ಕೆ ಬೆಳೆಯಲಾರದ ಸ್ಥಿತಿಯಲ್ಲಿವೆ. ಮತ್ತೆ ಕೆಲವು ಅಧಿಕಾರದಲ್ಲಿದ್ದರೆ, ಇನ್ನೊಂದಷ್ಟು ಪಕ್ಷಗಳು ಅಧಿಕಾರ ನಡೆಸಿ ವಿಫಲತೆ ಅನುಭವಿಸಿ ವಿಪಕ್ಷ ಸ್ಥಾನಕ್ಕೆ ಫಿಕ್ಸ್ ಆಗಿವೆ.
ಕೆಲವು ಪ್ರಾದೇಶಿಕ ಪಕ್ಷಗಳು ಕೆಲವು ರಾಜ್ಯಗಳಲ್ಲಿ ಕಿಂಗ್ ಮೇಕರ್ ಆಗಿ ಉಳಿದಿವೆ. ಮತ್ತು ಪ್ರಾಬಲ್ಯವನ್ನು ಉಳಿಸಿಕೊಂಡಿವೆ. ಇನ್ನು ಕಮ್ಯುನಿಷ್ಟ್ ಪಕ್ಷಗಳು ಹೋಳಾಗಿವೆ. ಕೇರಳ ಹೊರತುಪಡಿಸಿ ಉಳಿದಂತೆ ಬೇರೆಲ್ಲೂ ಗಟ್ಟಿಯಾಗಿ ಉಳಿದಿಲ್ಲ. ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಷ್ಟ್ ಪಕ್ಷದ ವಿರುದ್ಧ ನಿರಂತರವಾಗಿ ಹೋರಾಡುತ್ತಾ ಬಂದ ಟಿಎಂಸಿಯ ಮಮತಾ ಬ್ಯಾನರ್ಜಿ ಇವತ್ತು ಗಟ್ಟಿಯಾಗಿ ಕುಳಿತಿದ್ದಾರೆ. ಆದರೆ ಇತ್ತೀಚೆಗೆ ಅಲ್ಲಿ ಬಿಜೆಪಿ ಪ್ರಬಲ ಪೈಪೋಟಿ ನೀಡುತ್ತಿದೆ. ಜತೆಗೆ ಸರ್ಕಾರ ವಿರೋಧಿ ಅಲೆಗಳು ಅಲ್ಲಿಯೂ ಆರಂಭವಾಗಿದೆ.
ಎಲ್ಲ ಪಕ್ಷಗಳು ವ್ಯಕ್ತಿ, ಕುಟುಂಬದಿಂದ ಹೊರತಾಗಿಲ್ಲ
ದೆಹಲಿಯಲ್ಲಿ ಸುಮಾರು ಹನ್ನೆರಡು ವರ್ಷಗಳ ಕಾಲ ಆಡಳಿತ ನಡೆಸಿದ್ದ ಕೇಜ್ರಿವಾಲ್ ಹುಟ್ಟು ಹಾಕಿದ್ದ ಎಎಪಿ ಅಧಿಕಾರ ಕಳೆದುಕೊಂಡು ವಿಪಕ್ಷ ಸ್ಥಾನದಲ್ಲಿ ಕುಳಿತಿದೆ. ಇನ್ನುಳಿದಂತೆ ಬೆರಳೆಣಿಕೆಯ ಪ್ರಾದೇಶಿಕ ಪಕ್ಷಗಳು ಆಡಳಿತ ನಡೆಸುತ್ತಿವೆ. ಇವುಗಳೆಲ್ಲವೂ ಒಂದು ಕುಟುಂಬದ ಹಿಡಿತದಲ್ಲಿವೆ ಎನ್ನುವುದು ಅಷ್ಟೇ ಸತ್ಯ. ಆದರೆ ಆ ಕುಟುಂಬಗಳು ಪಕ್ಷದ ಹಿಡಿತವನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಪಕ್ಷಗಳನ್ನು ಸಂಘಟಿಸಲು ಅವಕಾಶ ಮಾಡಿಕೊಡದ ಕಾರಣದಿಂದಾಗಿ ಅವು ಉದ್ಧಾರವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದು ಕೇವಲ ಪ್ರಾದೇಶಿಕ ಮಾತ್ರವಲ್ಲ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕೂಡ ಹೊರತಾಗಿಲ್ಲ. ದೇಶವನ್ನಾಳಿದ ಪಕ್ಷ ಇದೀಗ ಹೀನಾಯ ಸ್ಥಿತಿಗೆ ತಲುಪಿದೆ ಎಂದರೆ ಅಲ್ಲೂ ಪಕ್ಷ ಒಂದು ಕುಟುಂಬದ ಹಿಡಿತದಲ್ಲಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ
ಬಿಜೆಪಿ ಕೂಡ ವ್ಯಕ್ತಿ ಆಧಾರದಲ್ಲಿ ನಿಂತಿದೆ ಎನ್ನುವುದು ಈಗಿನ ಬೆಳವಣಿಗೆಯನ್ನು ಗಮನಿಸಿದರೆ ಗೊತ್ತಾಗುತ್ತದೆ. ನರೇಂದ್ರ ಮೋದಿಯನ್ನು ತೋರಿಸಿ ಗ್ರಾಮಪಂಚಾಯಿತಿಯಿಂದ ಲೋಕಸಭಾ ಚುನಾವಣೆ ವರೆಗೆ ಮತ ಕೇಳುವ ಮಟ್ಟಕ್ಕೆ ಬಿಜೆಪಿ ನಾಯಕರು ಬಂದಿದ್ದಾರೆ. ಕಾರಣ ಸ್ಥಳೀಯ ನಾಯಕರು ಪ್ರತಿಷ್ಠೆಗೆ ಬಿದ್ದಿದ್ದಾರೆ. ಅಧಿಕಾರದ ಕಿತ್ತಾಟ ಮುಂದುವರೆದಿದೆ. ಹೀಗಾಗಿ ಕೆಲವು ರಾಜ್ಯಗಳಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಬಿಜೆಪಿ ಸ್ಥಿತಿ ಹೀನಾಯವಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ವ್ಯಕ್ತಿ ಮತ್ತು ಕುಟುಂಬ ಆಧಾರಿತ ಪಕ್ಷಗಳು ಹೆಚ್ಚು ದಿನ ಬಾಳುವುದು ಕಷ್ಟವೇ.












Click it and Unblock the Notifications