Highway Toll Fee Hike: ಇಂದಿನಿಂದ ರಾಜ್ಯದ 4 'ಹೈವೇ'ಗಳಲ್ಲಿ ಟೋಲ್ ಶುಲ್ಕ ಶೇ.3-25ರಷ್ಟು ಹೆಚ್ಚಳ..!
ಬೆಂಗಳೂರು, ಜೂನ್ 03: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಟೋಲ್ ಶುಲ್ಕ ಹೆಚ್ಚಳ ಜಾರಿಗೆ ಬ್ರೇಕ್ ಬಿದ್ದಿತ್ತು. ಸದ್ಯ ಜೂನ್ 3 ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಏರಿಕೆ ಆಗಿದೆ. ರಾಜ್ಯದ ಈ ಕೆಳಗಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ಸವಾರರಿಗೆ ಆರ್ಥಿಕ ಹೊರೆ ಉಂಟಾಗುತ್ತಿದೆ. ಯಾವ್ಯಾವ ಹೆದ್ದಾರಿಗಳಲ್ಲಿ ಎಷ್ಟು ಶುಲ್ಕ ಏರಿಕೆ ಆಗಿದೆ? ಎಂಬ ಮಾಹಿತಿ ಇಲ್ಲಿದೆ.
ಇಂದಿನಿಂದ (ಜೂನ್ 3) ಬೆಂಗಳೂರು-ಮೈಸೂರು, ಬೆಂಗಳೂರು-ಹೈದರಾಬಾದ್ ಹಾಗೂ ತುಮಕೂರಿನಿಂದ ಹೊನ್ನಾವರಕ್ಕೆ ಸಾಗುವ ಹೆದ್ದಾರಿಗಳು ಮತ್ತು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಆಗಿರುವ ಹೊಸಕೋಟೆ-ದೇವನಹಳ್ಳಿ ಹೆದ್ದಾರಿ ಬಳಸುವ ವಾಹನ ಸವಾರರು ಹಾಲಿ ಶುಲ್ಕಕ್ಕಿಂತ ಶೇಕಡಾ 3ರಿಂದ ಶೇ25ರಷ್ಟು ಹೆಚ್ಚಿನ ಶುಲ್ಕ ಪಾವತಿಸಲಿದ್ದಾರೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತಿಳಿಸಿದೆ ಎಂದು 'ಡಿಎಚ್'ವರದಿ ಮಾಡಿದೆ.

ಹೈವೇ ಟೋಲ್ ಶುಲ್ಕ ಏರಿಕೆಯು 'ಸಗಟು ಬೆಲೆ ಸೂಚ್ಯಂಕ' (WPI) ಆಧಾರದಲ್ಲಿ ಹೆಚ್ಚಿಸಿ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಮಾಡಲಾಗಿತ್ತು. ಈ ನಡುವೆ ಲೋಕಸಭಾ ಚುನಾವಣೆ, ನೀತಿ ಸಂಹಿತ ಕಾರಣದಿಂದ ಜಾರಿಗೆ ತಡೆ ನೀಡಲಾಯಿತು. ಇದೀಗ ಹೊಸ ಶುಲ್ಕ ನಿಯಮ ಮುಂದಿನ ವರ್ಷ 2025ರ ಮಾರ್ಚ್ 31ರವರೆಗೆ ಜಾರಿಯಲ್ಲಿರುತ್ತದೆ.
ಬೆಂಗಳೂರಲ್ಲಿನ NHAI ಪ್ರಾದೇಶಿಕ ಅಧಿಕಾರಿಗಳಾದ ವಿಲಾಸ್ ಪಿ ಬ್ರಹ್ಮಂಕರ್ ಅವರು, ಟೋಲ್ ಪರಿಷ್ಕರಣೆ ಕಳೆದ ಏಪ್ರಿಲ್ 1ರಿಂದ ಜಾರಿಗೆ ಬರಬೇಕಿತ್ತು, ಆದರೆ ಅದನ್ನು ತಡೆಹಿಡಿಯಲಾಗಿತ್ತು. ಸದ್ಯ ಜೂನ್ 3ರಿಂದ ಜಾರಿ ಬರುತ್ತಿದೆ. ಉದ್ಯಾನ ನಗರ ಬೆಂಗಳೂರು ಮತ್ತು ಅರಮನೆ ನಗರಿ ಮೈಸೂರು ಮದ್ಯದ ಎಕ್ಸ್‌ಪ್ರೆಸ್ ವೇ ಟೋಲ್ ಶುಲ್ಕವನ್ನು ಶೇಕಡಾ 3% ಹೆಚ್ಚಿಸಲಾಗಿದೆ.

ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಟೋಲ್ ಶುಲ್ಕ
ಇನ್ನೂ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಹೆದ್ದಾರಿ ಬಳಸುವ ವಾಹನಗಳ ಸವಾರರು ಇಂದಿನಿಂದ ಟೋಲ್ ಶುಲ್ಕ ಶೇಕಡಾ 14ರಷ್ಟು ಹೆಚ್ಚಿನ ಹಣ ಪಾವತಿ ಮಾಡಬೇಕಿದೆ. ಸದ್ಯ ಬೆಂಗಳೂರು ಹೊರ ವಲಯದ ಹೊಸಕೋಟೆ ಮತ್ತು ದೊಡ್ಡಬಳ್ಳಾಪುರ ಮಧ್ಯ ಇರುವ (39.6ಕಿಮೀ) ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) 2023ರ ನವೆಂಬರ್ 17ರಿಂದ ಟೋಲ್ ಶುಲ್ಕ ಆರಂಭಿಸಿತು.
NHAI ಯೋಜನಾ ನಿರ್ದೇಶಕ ಕೆ.ಬಿ.ಜಯಕುಮಾರ್, ದಾಬಾಸ್‌ಪೇಟೆ-ದೊಡ್ಡಬಳ್ಳಾಪುರ ವಿಭಾಗದ 42 ಕಿಮೀ ಹೆದ್ದಾರಿಯಲ್ಲಿನ ಟೋಲ್ ಸಂಗ್ರಹಣೆ ಜೂನ್ 15 ರ ನಂತರ ಆರಂಭವಾಗಲಿದೆ. ಈ ಟೋಲ್ ಶುಲ್ಕ ಬಗ್ಗೆ ಕಂಪನಿ ಆಯ್ಕೆ ಮಾಡಿದ್ದು,ಶೀಘ್ರವೇ ಟೋಲ್ ಶುಲ್ಕ ನಿಗದಿ ಮಾಡಿ ಪ್ರಕಟಿಸಲಾಗುವುದು. ಮುಂದಿನ ದಿನಗಳಲ್ಲಿ ಹುಲಿಕುಂಟೆ ಟೋಲ್ ಪ್ಲಾಜಾದಲ್ಲಿ ಶುಲ್ಕ ಸಂಗ್ರಹಿಸಲಾಗುವುದು ಎಂದರು.
ಹೊಸಕೋಟೆ -ದೊಡ್ಡಬಳ್ಳಾಪುರ ಹೆದ್ದಾರಿ ಟೋಲ್ ಶುಲ್ಕ
ದೊಡ್ಡಬಳ್ಳಾಪುರ ಬೈಪಾಸ್ ಮತ್ತು ಹೊಸಕೋಟೆ ಮಧ್ಯದ ಹೆದ್ದಾರಿಯಲ್ಲಿ ನಾಲ್ಕು ಚಕ್ರದ ಕಾರು, ಜೀಪಗಳಂತ ವಾಹನಗಳಿಗೆ ಏಕಮುಖ ಚಾಲನೆಗೆ ರೂ.80 ರೂಪಾಯಿ. ದ್ವಿಮುಖ ಚಾಲನೆಗೆ ರೂ.120 ನಿಗದಿ ಆಗಿದೆ. ನೀವು ಮಾಸಿಕ ಪ್ರಯಾಣಕ್ಕೆ ರೂ 2,720 ಪಾವತಿಸಬಹುದು.
ಈ ರಸ್ತೆಯಲ್ಲಿ ಲಘು ವಾಹನ, ಲಘು ಸರಕು ವಾಹನಗಳು ಮತ್ತು ಮಿನಿ ಬಸ್‌ಗಳು ಕ್ರಮವಾಗಿ 115 ರೂ, 175 ರೂ ಮತ್ತು ರೂ 3,835 ರಂತೆ ಏಕ ಪ್ರಯಾಣಕ್ಕೆ ರೂ. 135, ದ್ವಿಮುಖ ಪ್ರಯಾಣಕ್ಕೆ ರೂ. 200 ಹಾಗೂ 4,395 (50 ಪ್ರಯಾಣಗಳು) ಪಾವತಿಸಬಹುದು.
ದೇವನಹಳ್ಳಿ ಬಳಿಯ ನಲ್ಲೂರಿನಲ್ಲಿ ಟೋಲ್ ಸಂಗ್ರಹಿಸಲಾಗುತ್ತದೆ. ಟೋಲ್ ಪ್ಲಾಜಾದಿಂದ 20 ಕಿಮೀ ವ್ಯಾಪ್ತಿಯಲ್ಲಿರುವ ವಾಣಿಜ್ಯೇತರ ವಾಹನಗಳಿಗೆ ಮಾಸಿಕ ಪಾಸ್ 340 ರೂ.ನಿಂದ 330 ರೂ. ನಿಗದಿ ಮಾಡಲಾಗಿದೆ ಎಂದು ಎನ್‌ಎಚ್‌ಎಐ ತಿಳಿಸಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ಶುಲ್ಕ
ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಬಳಸುವ ವಿವಿಧ ನಾಲ್ಕು ಚಕ್ರ, ಅದಕ್ಕಿಂತ ಹೆಚ್ಚಿನ ಚಕ್ರದ ವಾಹನಗಳು ರೂ.320 ಗಿಂತ ರೂ. 330ಗೆ ಪಾವತಿಸಬೇಕಿದೆ. ಬೆಂಗಳೂರು-ನಿಡಘಟ್ಟ ವಿಭಾಗಕ್ಕೆ 170 ರೂ ಮತ್ತು ನಿಡಘಟ್ಟ ಮತ್ತು ಮೈಸೂರು ನಡುವೆ 160 ರೂ. ಪಾವತಿಸಬೇಕಿದೆ.
ಸದ್ಯ ಬೆಂಗಳೂರು ಮೈಸೂರು ಟೋಲ್ ಶುಲ್ಕವನ್ನು ಕಣಿಮಿಣಿಕೆ (ಬೆಂಗಳೂರು ನಗರ), ಶೇಷಗಿರಿಹಳ್ಳಿ (ರಾಮನಗರ) ಮತ್ತು ಗಣಂಗೂರು (ಮಂಡ್ಯ)ದಲ್ಲಿ ಟೋಲ್ ಸಂಗ್ರಹಿಸಲಾಗುತ್ತಿದೆ.
ಬೆಂಗಳೂರು-ಹೈದರಾಬಾದ್ ಹೈವೇ ಟೋಲ್ ಶುಲ್ಕ
ರಾಜ್ಯ ಗಡಿ ಜಿಲ್ಲೆಯಾಗಿರುವ ದೇವಹಳ್ಳಿ ಮೂಲಕ ಹೈದರಾಬಾದ್ ಗೆ ತೆರಳುವ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಚಲಿಸುವ ಜೀಪು, ಕಾರುಗಳು, ಇತರೆ ಹಾಗೂ ಲಘು ಮೋಟಾರು ವಾಹನಳಿಗೆ ಏಕಮುಖ ಪ್ರಯಾಣಕ್ಕೆ ರೂ.115, ದ್ವಿಮುಖ ಪ್ರಯಾಣಕ್ಕೆ 175ರೂ. ಪಾವತಿಸಬೇಕಾಗುತ್ತದೆ. ಬಾಗೇಪಲ್ಲಿ ಬಳಿ ಟೋಲ್ ಇದೆ.
ಶಿವಮೊಗ್ಗದ ಮೂಲಕ ತುಮಕೂರು ಮತ್ತು ಹೊನ್ನಾವರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ (206)ರಲ್ಲಿ ಸಂಚರಿಸುವ ನಾಲ್ಕು ಚಕ್ರದ ಸಣ್ಣ ವಾಹನಗಳಿಗೆ ಏಕಮುಖ ಸಂಚಾರಕ್ಕೆ 60ರೂ. ದ್ವಿಮುಖ ಸಂಚಾರಕ್ಕೆ 90 ರೂ. ಪಾವತಿಸಬೇಕಾಗುತ್ತದೆ. ಸದ್ಯ ಈ ಹೆದ್ದಾರಿಯಲ್ಲಿ ಹಾಲಿ ಶುಲ್ಕ ಕ್ರಮವಾಗಿ 45 ಮತ್ತು 65 ರೂ. ವರೆಗೆ ಇತ್ತು. ಹೊಸ ನಿಯಮದಿಂದ ಟೋಲ್ ಶುಲ್ಕದಲ್ಲಿ ಹೆಚ್ಚಳವಾಗಿದ್ದನ್ನು ಇಲ್ಲಿ ಗಮನಿಸಬಹುದು.












Click it and Unblock the Notifications