Fraud Case: ಚಿನ್ನದ ಕಳ್ಳಿ ಐಶುಗೆ ಕೈ ಜೊತೆಗೆ ತೆನೆ ಹೊತ್ತವರೂ ಕೂಡ ಪರಿಚಯ
ಬೆಂಗಳೂರು ಜನವರಿ 2: ಚಿನ್ನದ ಕಳ್ಳಿ ಐಶ್ವರ್ಯ ಗೌಡ ಅವರ ವಂಚನೆಯ ಪ್ರಕರಣದಲ್ಲಿ ಬಗೆದಷ್ಟು ವಿಚಾರಗಳು ಹೊರ ಬರುತ್ತಿವೆ. ಕೋಟಿ ಕೋಟಿ ಹಣ ವಂಚನೆ ಪ್ರಕರಣದ ಆರೋಪಿ ಐಶ್ವರ್ಯ ಗೌಡ ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್ ತಮ್ಮ ಸಹೋದರ ಎಂದು ಹೇಳಿಕೊಂಡಿದ್ದರು. ಇದೇ ವಿಚಾರದಲ್ಲಿ ಜೈಲುಪಾಲಾಗಿದ್ದ ಐಶ್ವರ್ಯ ಗೌಡ ಪ್ರಸ್ತುತ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾಳೆ. ಇದೀಗ ಈಕೆಗೆ ಜೆಡಿಎಸ್ ನಾಯಕರ ಪರಿಚಯ ಕೂಡ ಇರುವುದು ಬೆಳಕಿಗೆ ಬಂದಿದೆ.
ಹೌದು.. ಐಶ್ವರ್ಯ ಗೌಡ ವಿರುದ್ಧ ನೀಡಿದ ದೂರಿನಲ್ಲಿ ಐಶ್ವರ್ಯ ತನಗೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಪರಿಚಯ ಇದೆ ಎಂದು ಹೇಳಿಕೊಂಡು ವಂಚಿಸಿದ ಆರೋಪವಿದೆ. ಜೆಡಿಎಸ್ ನಾಯಕರು ನನಗೆ ಆತ್ಮೀಯರು ಎಂದು ಐಶ್ವರ್ಯ ಹೇಳಿಕೊಂಡಿದ್ದಳೂ ಎಂದು ತಿಳಿದು ಬಂದಿದೆ.

ತಮಗೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರು ಪತ್ನಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ತುಂಬಾ ಆತ್ಮೀಯರು. ಅವರಿಂದ ಏನಾದರೂ ಸಹಾಯ ಬೇಕಿದ್ದರೆ ನನ್ನನ್ನು ಕೇಳಿ ಎಂದು ಹೇಳಿಕೊಂಡು ಹಂತ ಹಂತವಾಗಿ ಕೋಟಿ ಕೋಟಿ ಹಣ ಬಾಚಿದ್ದಳು ಐಶ್ವರ್ಯ ಗೌಡ. ಅಲ್ಲದೆ ಪೂರ್ಣಿಮಾ ಬಳಿಯೂ ಚಿನ್ನಾಭರಣ ಪಡೆದು ಮೋಸ ಮಾಡಿದ್ದಳು ಎಂದು ದೂರುದಾರರು ದೂರಿನಲ್ಲಿ ಆರೋಪಿಸಿದ್ದಾರೆ.
ಹೀಗಾಗಿ ಐಶ್ವರ್ಯ ಗೌಡ ಕಾಂಗ್ರೆಸ್ ನಾಯಕರ ಹೆಸರನ್ನು ಮಾತ್ರವಲ್ಲ ಜೆಡಿಎಸ್ ನಾಯಕರ ಹೆಸರನ್ನೂ ಬಳಸಿಕೊಂಡು ಜನರಿಗೆ ಮೋಸ ಮಾಡಿದ್ದಾಳೆ ಎನ್ನುವುದು ಬೆಳಕಿಗೆ ಬಂದಿದೆ. ಹೀಗಾಗಿ ಜೆಡಿಎಸ್ ಮಾಜಿ ಶಾಸಕ ಅನ್ನದಾನಿ ಐಶ್ವರ್ಯ ಗೌಡ ಅವರಿಗೆ ಮಂಪರ್ ಪರೀಕ್ಷೆ ಮಾಡಿಸಬೇಕು, ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಐಶ್ವರ್ಯ ಗೌಡ ಅವರು ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಳವಳ್ಳಿ ಶಾಸಕರಾಗಿರುವ ನರೇಂದ್ರಸ್ವಾಮಿಗೆ ಹಣ ನೀಡಿದ್ದಾರೆ. ಈಕೆಯ ಹಿಂದೆ ಕಾಂಗ್ರೆಸ್ ಬೆನ್ನೆಲುಬಾಗಿ ನಿಂತಿರುವುದರಿಂದ ಈಕೆಯಿಂದ ಮೋಸಗಳು ನಡೆದಿವೆ. ಮೋಸ ಹೋದವರು ದೂರು ದಾಖಲಿಸಲು ಹೋದರೂ ಕೂಡ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ.
ಕಾಂಗ್ರೆಸ್ ಐಶ್ವರ್ಯ ಜೊತೆಗೆ ಇರುವುದರಿಂದಾಗಿ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಅಲ್ಲದೆ ಒಬ್ಬ ಒಂಟಿ ಮಹಿಳೆ ಕೋಟಿ ಕೋಟಿ ಹಣವನ್ನು ವಂಚನೆ ಮಾಡುವುದು ಅಂದರೆ ಅದರ ಹಿಂದೆ ಬಲವಾದ ಕೈಗಳು ಇದ್ದಾಗ ಮಾತ್ರ ಸಾಧ್ಯ ಎಂದು ಅನ್ನದಾನಿ ಆರೋಪ ಮಾಡಿದ್ದಾರೆ.
ವಂಚನೆ ಆರೋಪಿ ಐಶ್ವರ್ಯ ಗಾಡ ತಾನು ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್ ಅವರ ಸಹೋದರಿ ಎಂದು ಹೇಳಿಕೊಂಡು ಕೂಡ ಹಣ ಹಾಗೂ ಚಿನ್ನವನ್ನು ಪಡೆದು ಮೋಸ ಮಾಡಿದ್ದಾಳೆ. ಆದರೆ ಈಕೆ ಯಾರು ಎನ್ನುವ ಬಗ್ಗೆ ನನಗೆ ಗೊತ್ತಿಲ್ಲ. ಈಕೆ ವಿರುದ್ಧ ಸೂಕ್ತ ಕ್ರಮಕ್ಕೆ ಡಿಕೆ ಸುರೇಶ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಐಶ್ವರ್ಯ ವಿರುದ್ಧ ಮತ್ತೊಂದು ದೂರು
14.6 ಕೆ.ಜಿ ಚಿನ್ನ ಸಾಲ ಪಡೆದು ವಂಚಿಸಿದ ಪ್ರಕರಣದಲ್ಲಿ ಸಿಕ್ಕಿಕೊಂಡ ಐಶ್ವರ್ಯ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. ಮತ್ತೊಂದು ಚಿನ್ನದ ಅಂಗಡಿ ಮಾಲೀಕರಿಗೆ ಕೋಟಿ ರೂಪಾಯಿ ವಂಚಿಸಿದ ಆರೋಪ ಕೇಳಿ ಬಂದಿದೆ. ರಾಜರಾಜೇಶ್ವರಿನಗರ ನಿವಾಸಿ ಶಿಲ್ಪಾಗೌಡ ಎಂಬುವವರು ನೀಡಿದ ದೂರಿನ ಮೇರೆಗೆ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಐಶ್ವರ್ಯ ಹಾಗೂ ಆಕೆಯ ಪತಿ ಹರೀಶ್, ಬೌನ್ಸರ್ ಗಜ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೆ ಈಕೆಯ ವಿರುದ್ಧ ವಂಚನೆ ಪ್ರಕರಣದಲ್ಲಿ ಮಂಡ್ಯದಲ್ಲೂ ದೂರು ನೀಡಲಾಗಿದೆ. ಪ್ರಸ್ತುತ ಆಕೆಯ ಬಳಿ ಇದ್ದ ಕಾರುಗಳನ್ನು ಸೀಜ್ ಮಾಡಲಾಗಿದೆ.












Click it and Unblock the Notifications