ಕರಾಳ ಭಾನುವಾರ: ಪ್ರತ್ಯೇಕ ಘಟನೆಗಳಲ್ಲಿ ನೀರಿನಲ್ಲಿ ಮುಳುಗಿ 7 ಮಂದಿ ಸಾವು
ರಾಜ್ಯದಲ್ಲಿ ಭಾನುವಾರ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ ನೀರಿನಲ್ಲಿ ಮುಳುಗಿ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ. ನದಿಯಲ್ಲಿ ಮೀನು ಹಿಡಿಯಲು ಹೋದ 7 ಜನರ ಪೈಕಿ ನಾಲ್ವರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ನಡೆದಿದೆ. ದಾವಣಗೆರೆ ಹೊನ್ನಾಳ್ಳಿ ತಾಲ್ಲೂಕಿನಲ್ಲಿ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಸಂದರ್ಭದಲ್ಲಿ ಮೂವರು ಮುಳುಗಿ ಸಾವನ್ನಪ್ಪಿದ್ದಾರೆ.
ಬ್ರಹ್ಮಾವರ ತಾಲೂಕಿನ ಕುಕ್ಕುಡೆ ಕಿಣಿಯರ ಕುದ್ರು ಬಳಿ ಸ್ವರ್ಣಾ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಏಳು ಮಂದಿ ಪೈಕಿ ನಾಲ್ವರು ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ಇಬಾಬ್, ಫಜಾನ್, ಸೂಫಾನ್, ಫರಾನ್ ಎಂದು ಗುರುತಿಲಾಗಿದೆ. ಮೃತರೆಲ್ಲರೂ ಶೃಂಗೇರಿ ಮೂಲದವರು ಎಂದು ಗುರುತಿಸಲಾಗಿದೆ. ಶನಿವಾರ ರಂಜಾನ್ ಹಬ್ಬ ಇದ್ದ ಕಾರಣ ಬ್ರಹ್ಮಾವರದ ಸಂಬಂಧಿಕರ ಮನೆಗೆ ಬಂದಿದ್ದರು.

ನದಿಯಲ್ಲಿ ಮೀನು ಹಿಡಿಯಲು ದೋಣಿಯಲ್ಲಿ ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ದೋಣಿ ಕೊಚ್ಚಿ ಹೋಗಿ ದುರಂತ ನಡೆದಿದೆ ಎಂದು ಹೇಳಲಾಗಿದೆ. ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯರಿಂದ ಶೋಧ ಕಾರ್ಯ ನಡೆಯುತ್ತಿದೆ.
ದಾವಣೆಗೆರೆ ಜಿಲ್ಲೆಯಲ್ಲಿ ಮತ್ತೊಂದು ದುರಂತ
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ತುಂಗಾನದಿಯಲ್ಲಿ ಮುಳುಗಿ ಮೂವರು ಸಹೋದರರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಮೃತರನ್ನು ಹಿರೇಗೋಣಿಗೆರೆ ಗ್ರಾಮದ ಕಿರಣ್ (14), ವರುಣ್ (15), ಪವನ್ (16) ಎಂದು ಗುರುತಿಸಲಾಗಿದೆ. ಸ್ನಾನ ಮಾಡಲೆಂದು ನದಿಗೆ ತೆರಳಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಮಾಹಿತಿ ತಿಳಿದ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರ್ಯಚರಣೆ ನಡೆಸಿದರು.












Click it and Unblock the Notifications