ಎಣ್ಣೆ ಏಟಿನಲ್ಲಿ ಮಗು ಸೇರಿ ಐವರನ್ನು ಕೊಚ್ಚಿದ ದುಷ್ಕರ್ಮಿ
ಚಾಮರಾಜನಗರ, ಮೇ.12: ಹೆಂಡದ ಮತ್ತಿನಲ್ಲಿ ಆರಂಭವಾದ ಜಗಳ ಐವರ ಬರ್ಬರ ಹತ್ಯೆಯೊಂದಿಗೆ ಅಂತ್ಯಗೊಂಡಿರುವ ಘಟನೆ ಕೊಳ್ಳೇಗಾಲಕ್ಕೆ ಹೊಂದಿಕೊಂಡಿರುವ ಹರಳೆ ಗ್ರಾಮದಲ್ಲಿ ವರದಿಯಾಗಿದೆ
ಹರಳೆ ಗ್ರಾಮದ ತೋಟದ ಮನೆಯೊಂದರಲ್ಲಿ ಸೋಮವಾರ ರಾತ್ರಿ 11.30 ರಿಂದ ಮಂಗಳವಾರ ಬೆಳಗ್ಗೆ 5.30ಯೊಳಗೆ ಈ ದುರ್ಘಟನೆ ನಡೆದಿದೆ. ಹತ್ಯೆ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ.
ರಾಜೇಂದ್ರನ್ (43) , ರಾಜಮ್ಮ(33), ಕಾಶಿ(40), ಶಿವಮ್ಮ (40) ಹಾಗೂ ರೋಜಾ(12) ಬರ್ಬರವಾಗಿ ಹತ್ಯೆಗೀಡಾದವರು. ಎಲ್ಲರೂ ತಮಿಳುನಾಡಿನ ಧರ್ಮಪುರಿ ಮೂಲದವರಾಗಿದ್ದು, ಕಬ್ಬು ಕಟಾವಿಗಾಗಿ ಕೂಲಿ ಹುಡುಕಿಕೊಂಡು ಗಡಿಭಾಗಕ್ಕೆ ಬಂದು 10 ದಿನಗಳು ಕಳೆದಿರಲಿಲ್ಲ.

ಘಟನೆಯ ವಿವರ: ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದ ಹೊರವಲಯದಲ್ಲಿರುವ ಮಹದೇವಮ್ಮ ಎಂಬುವರು ತಮ್ಮ 7 ಎಕರೆ ಜಮೀನಿನಲ್ಲಿ ಕಬ್ಬು, ಜೋಳ ಬೆಳೆದಿದ್ದು, ಕೃಷಿ ಕೆಲಸಕ್ಕಾಗಿ ತಮಿಳುನಾಡಿನಿಂದ 20 ಮಂದಿ ಕೂಲಿವರನ್ನು ಹದಿನೈದು ದಿನಗಳ ಹಿಂದೆ ಕರೆಯಿಸಿ ಅವರಿಗೆ ಜಮೀನಿನಲ್ಲೇ ಶೆಡ್ ಹಾಕಿ ವಾಸ್ತವ್ಯ ಹೂಡಲು ಅವಕಾಶ ಮಾಡಿಕೊಟ್ಟಿದ್ದರು.

ಇಪ್ಪತ್ತು ಮಂದಿಯಿದ್ದ ಕೂಲಿ ಕಾರ್ಮಿಕರು ಪ್ರತ್ಯೇಕ ಶೆಡ್‍ನಲ್ಲಿ ವಾಸ ಮಾಡುತ್ತಿದ್ದರು ಎನ್ನಲಾಗಿದೆ. ಸೋಮವಾರ ರಾತ್ರಿ ಎಂದಿನಂತೆ ಹಗಲು ಜಮೀನಿನಲ್ಲಿ ಕೂಲಿ ಕೆಲಸ ಮಾಡಿ ರಾತ್ರಿ ಅಡುಗೆ ಮಾಡಿಕೊಂಡು ಊಟ ಮಾಡಿದ್ದರು ಎನ್ನಲಾಗಿದೆ.
ಈ ನಡುವೆ ಪಾನಮತ್ತರಾಗಿದ್ದ ಇವರ ನಡುವೆ ಚಿಕ್ಕದಾಗಿ ಜಗಳ ಆರಂಭವಾಗಿದ್ದು, ಬಳಿಕ ವಿಕೋಪಕ್ಕೆ ತಿರುಗಿದೆ.
ಈ ಜಗಳದಲ್ಲಿ ರಾಜೇಂದ್ರನ್, ರಾಜಮ್ಮ, ಕಾಶಿ, ಶಿವಮ್ಮ ಹಾಗೂ ಹನೆರಡು ವರ್ಷದ ರೋಜಾಳನ್ನು ಮಾರಾಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಇದಾದ ಬಳಿಕ ಆರೋಪಿಗಳು ನಡುರಾತ್ರಿಯಲ್ಲಿಯೇ ಸ್ಥಳದಿಂದ ಪರಾರಿಯಾಗಿದ್ದಾರೆ. ಎರಡು ಶೆಡ್‍ನಲ್ಲೂ ಹೆಣ ಉರುಳಿದ್ದು, ಎರಡು ಕಡೆಯವರು ಪ್ರತೀಕಾರ ನಡೆಸಿರುವುದು ಮೇಲ್ಮೋಟಕ್ಕೆ ಕಂಡು ಬಂದಿದೆ. ಘಟನೆ ಬಳಿಕ ಎರಡು ಕಡೆಯವರು ಪರಾರಿಯಾಗಿದ್ದಾರೆ.
ಮಂಗಳವಾರ ಬೆಳಿಗ್ಗೆ ಜಮೀನಿಗೆ ಬಂದ ಇನ್ನಿತರ ಕೆಲಸಗಾರರು ಜಮೀನಿನ ಆವರಣದಲ್ಲಿರುವ ಶೆಡ್ ಗಳಲ್ಲಿ ಹೆಣಗಳನ್ನು ಕಂಡು ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಹಾಗೂ ದಕ್ಷಿಣ ವಲಯ ಐಜಿಪಿ ಬಿ.ಕೆ. ಸಿಂಗ್ ಎಸ್ಪಿ ರಂಗಸ್ವಾಮಿನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ.
ಕೊಳ್ಳೇಗಾಲದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಎಸ್ಪಿ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚನೆ ಮಾಡಿ, ಕಾರ್ಯಾಚರಣೆ ಆರಂಭಿಸಲಾಗಿದೆ.












Click it and Unblock the Notifications