ಹೆಚ್.ಡಿ. ದೇವೇಗೌಡರ 91ನೇ ಜನ್ಮದಿನ; ಗೌಡರ ನಿವಾಸಕ್ಕೆ ಬಂದ ಬಿಜೆಪಿ ನಾಯಕರು!
ಬೆಂಗಳೂರು,ಮೇ 18: ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು 91ನೇ ವಸಂತಕ್ಕೆ ಪದಾರ್ಪಣೆ ಮಾಡಿದ್ದು, ರಾಜಕೀಯ ಘಟಾನುಘಟಿ ನಾಯಕರು ಹುಟ್ಟು ಹಬ್ಬಕ್ಕೆ ಶುಭಕೋರಿದ್ದಾರೆ.
ಗುರುವಾರ ಪದ್ಮನಾಭನಗರದ ನಿವಾಸಕ್ಕೆ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರ್ ಅಶೋಕ್, ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಭೇಟಿ ನೀಡಿ ದೇವೇಗೌಡರಿಗೆ ಶುಭಕೋರಿದ್ದಾರೆ. ಇನ್ನೂ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ರಾಷ್ಟ್ರ ಮತ್ತು ರಾಜ್ಯದ ಅನೇಕ ಗಣ್ಯರು ಶುಭ ಕೋರಿದ್ದಾರೆ.

ದೇವೇಗೌಡರ ಮಾರ್ಗದರ್ಶನ ಎಲ್ಲರಿಗೂ ಇದೆ: ಹಂಗಾಮಿ ಸಿಎಂ ಬೊಮ್ಮಾಯಿ
ದೇವೇಗೌಡರು ಹಿರಿಯ ನಾಯಕರಾಗಿದ್ದು ನಾಡಿನ ನೆಲ, ಜಲದ ವಿಚಾರ ಬಂದಾಗ ದೇವೇಗೌಡರು ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಾರೆ ಎಂದು ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ದೇವೇಗೌಡರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಪದ್ಮನಾಭನಗರದಲ್ಲಿನ ಅವರ ನಿವಾಸಕ್ಕೆ ತೆರಳಿ ಹುಟ್ಟು ಹಬ್ಬದ ಶುಭಾಶಯ ಕೋರಿ ನಂತರ ಮಾಧ್ಯಮಗಳಿಗೆ ಮಾತನಾಡಿದ ಅವರು, ಪ್ರತಿ ವರ್ಷವೂ ದೇವೇಗೌಡರ ಹುಟ್ಟುಹಬ್ಬಕ್ಕೆ ಬಂದು ಶುಭಾಶಯ ಕೋರುತ್ತಿದ್ದೇವೆ. ಅದೇ ರೀತಿ ಇಂದೂ ಕೂಡಾ ಬಂದು ಶುಭಾಶಯ ಕೋರಿದ್ದೇವೆ ಎಂದರು.
ಪ್ರತಿಪಕ್ಷವಾಗಿ ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಜೆಡಿಎಸ್ ಬೆಂಬಲ ಕೋರಿದ್ದೀರಾ ಎಂಬ ಪ್ರಶ್ನೆಗೆ ಇವತ್ತು ಹುಟ್ಟುಹಬ್ಬಕ್ಕೆ ಶುಭ ಕೋರಲು ಅಷ್ಟೇ ಬಂದಿದ್ದೇವೆ. ಬೇರೆ ಏನೂ ಚರ್ಚೆ ನಡೆಸಿಲ್ಲ. ಇನ್ನೂ ಕೂಡಾ ಸರ್ಕಾರವೇ ರಚನೆ ಆಗಿಲ್ಲ ಎಂದು ಹೇಳಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಇನ್ನೂ ನಮ್ಮ ದೇಶಕ್ಕೆ ದೇವೇಗೌಡರ ಕೊಡುಗೆ ಗಮನಾರ್ಹವಾಗಿದೆ. ಅವರು ಅರೋಗ್ಯವಂತರಾಗಿ ದೀರ್ಘಕಾಲ ಜೀವಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ಜತೆಗೆ, ರಾಜ್ಯಪಾಲ ಥಾವರಚಂದ್ ಗೆಹಲೋತ್, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೇರಿದಂತೆ ರಾಷ್ಟ್ರ ಮಟ್ಟದ ಅನೇಕ ನಾಯಕರು ಶುಭ ಕೋರಿದ್ದಾರೆ.
ಇನ್ನೂ ಪದ್ಮನಾಭ ನಿವಾಸದಲ್ಲಿ ಮಕ್ಕಳು, ಮೊಮ್ಮಕ್ಕಳು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿಗಳಿಗೆ ಶುಭ ಕೋರಿ ಆಶೀರ್ವಾದ ಪಡೆದರು. ಅಲ್ಲದೆ, ವಿವಿಧ ಪಕ್ಷಗಳ ಹಿರಿಯ ಮುಖಂಡರು, ಜೆಡಿಎಸ್ ಪಕ್ಷದ ನೂತನ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಪದ್ಮನಾಭ ನಗರದ ನಿವಾಸಕ್ಕೆ ತೆರಳಿ ಶುಭಾಶಯಗಳನ್ನು ತಿಳಿಸಿದರು.

ಪದ್ಮನಾಭ ನಗರದ ಮಾಜಿ ಪ್ರಧಾನಿಗಳ ನಿವಾಸದ ಬಳಿ ಅಭಿಮಾನಿಗಳು, ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಬೃಹತ್ ಕೇಕ್ ಗಳನ್ನು ಕತ್ತರಿಸಿ ಸಂಭ್ರಮಿಸಿದರು. ಬೃಹತ್ ಕಟೌಟ್ ಗಳನ್ನು ನಿಲ್ಲಿಸಿದ್ದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಆಸ್ಪತ್ರೆಗಳಲ್ಲಿ ಹಣ್ಣು ಹಂಪಲು ಹಂಚಿದರು, ದೇವಸ್ಥಾನಗಳಲ್ಲಿ ಪೂಜೆ, ಅನ್ನದಾನ ನೆರವೇರಿಸಿದರು.
ಬೆಂಗಳೂರು ನಗರ ಘಟಕದ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಎಂ.ರಮೇಶ್ ಗೌಡ ಅವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಮಾಜಿ ಪ್ರಧಾನಿಗಳ ನಿವಾಸದ ಬಳಿ ಬೃಹತ್ ಕೇಕ್ ಕತ್ತರಿಸಿ ಸಂಭ್ರಮಿಸಿದರು. ದೇವದುರ್ಗ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆ ಆಗಿರುವ ಕರೆಮ್ಮ ಜಿ.ನಾಯಕ ಸೇರಿದಂತೆ ನಗರದ ಸಾವಿರಾರು ಕಾರ್ಯಕರ್ತರು ಸೇರಿದ್ದರು.
ಧನ್ಯವಾದ ಹೇಳಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ
ಇನ್ನೂ ಜನ್ಮದಿನಕ್ಕೆ ಶುಭ ಹಾರೈಸಿದ ಎಲ್ಲರಿಗೂ ಎಲ್ಲಾ ನಾಯಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಮಾಜಿ ಪ್ರಧಾನಿ ದೇವೇಗೌಡರು ಧನ್ಯವಾದಗಳನ್ನು ತಿಳಿಸಿದ್ದಾರೆ.
ರಾಷ್ಟ್ರಪತಿಗಳು, ಗೌರವಾನ್ವಿತ ಪ್ರಧಾನಮಂತ್ರಿಗಳು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯದ ಅನೇಕ ನಾಯಕರು ಶುಭ ಕೋರಿದ್ದಾರೆ. ಅಸಂಖ್ಯಾತ ಕಾರ್ಯಕರ್ತರು, ಕೋಟ್ಯಂತರ ಸಾರ್ವಜನಿಕ ಬಂಧುಗಳು ಪ್ರೀತಿ ತೋರಿಸಿದ್ದಾರೆ. ಎಲ್ಲರಿಗೂ ನನ್ನ ಅನಂತ ಧನ್ಯವಾದಗಳು ಎಂದು ಮಾಜಿ ಪ್ರಧಾನಿಗಳು ಹೇಳಿದ್ದಾರೆ.












Click it and Unblock the Notifications