ರಾಜಹಂಸಗಡದಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ: ರಮೇಶ್ ಜಾರಕಿಹೊಳಿ V/S ಲಕ್ಷ್ಮಿ ಹೆಬ್ಬಾಳ್ಕರ್
ಶಿಷ್ಟಾಚಾರ ಪಾಲಿಸುವುದಾದರೆ ರಾಜಹಂಸಗಡದಲ್ಲಿ ನಾಳೆಯೇ ಶಿವಾಜಿ ಮಹಾರಾಜರ ಮೂರ್ತಿ ಉದ್ಘಾಟನೆ ಮಾಡಲಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಬಹಿರಂಗವಾಗಿ ಸವಾಲ್ ಹಾಕಿದ್ದಾರೆ.
ಬೆಳಗಾವಿ,ಫೆಬ್ರವರಿ18: ಚುನಾವಣೆ ಹತ್ತಿರವಾಗುತ್ತಿದ್ದಂತೆ ಒಂದಲ್ಲ ಒಂದು ವಿಚಾರದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಸಾಕಷ್ಟು ವಾಕ್ಸಮಗಳು ನಡೆಯಿತ್ತಿದ್ದು, ಇದೀಗ ಯಳ್ಳೂರು ರಾಜಹಂಸಗಡ ಕೋಟೆಯಲ್ಲಿ ಪ್ರತಿಷ್ಠಾಪಿಸಲು ಹೊರಟಿರುವ ಬೃಹತ್ ಶಿವಾಜಿ ಮೂರ್ತಿ ವಿಚಾರ ಈಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.
ಹೌದು, ಶನಿವಾರ ಮೂರ್ತಿ ಸ್ಥಳಕ್ಕೆ ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಭೇಟಿ ನೀಡಿದ ಶಾಸಕ ರಮೇಶ್ ಜಾರಕಿಹೊಳಿ ಅವರು, ಶಿಷ್ಟಾಚಾರ ಪಾಲಿಸುವುದಾದರೆ ರಾಜಹಂಸಗಡದಲ್ಲಿ ನಾಳೆಯೇ ಶಿವಾಜಿ ಮಹಾರಾಜರ ಮೂರ್ತಿ ಉದ್ಘಾಟನೆ ಮಾಡಲಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಬಹಿರಂಗವಾಗಿ ಸವಾಲ್ ಹಾಕಿದ್ದಾರೆ.
ಈ ಕುರಿತು ಪತ್ರಿಕೆಯಲ್ಲಿ ಬಂದ ನಂತರ ನಮಗೆ ಕಾರ್ಯಕ್ರಮದ ಕುರಿತು ಗೊತ್ತಾಗಿದೆ. 2010ರಿಂದ ಕೋಟೆ ಅಭಿವೃದ್ಧಿಯಾಗುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ನಮಗೆ ಯಾವುದೇ ಅಭ್ಯಂತರ ಇಲ್ಲ. ಆದರೆ ಇದನ್ನು ಪಕ್ಷದ ಕಾರ್ಯಕ್ರಮ ಮಾಡುವುದಕ್ಕೆ ನಮ್ಮ ವಿರೋಧವಿದೆ. ಇದು ಸರಕಾರಿ ಕಾರ್ಯಕ್ರಮ ಆಗಬೇಕು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮತ್ತು ಜಿಲ್ಲಾಧಿಕಾರಿ ಜತೆಗೆ ಚರ್ಚಿಸುತ್ತೇನೆ ಎಂದು ಹೇಳಿದರು.

ಇನ್ನೂ ಬಹಿರಂಗ ಚರ್ಚೆಗೆ ಬರುವಂತೆ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಬಾಗಿಲು ಕಾಯುವ ಅವನ ಜತೆ ಚರ್ಚೆ ಮಾಡಲ್ಲ. ಬೇಕಾದರೆ ಡಿ.ಕೆ.ಶಿವಕುಮಾರ್ ಜತೆ ನಾನು ಬಹಿರಂಗ ಚರ್ಚೆಗೆ ಸಿದ್ಧ. ಚನ್ನರಾಜ ಹಟ್ಟಿಹೊಳಿ ಅವರ ಬಗ್ಗೆ ಮಾತಾಡುವಷ್ಟು ಸಣ್ಣವನು ನಾನಲ್ಲ ಎಂದು ವ್ಯಂಗ್ಯವಾಡಿದರು.
ಮೋಸದ ಎರಡನೇ ಹೆಸರು ಲಕ್ಷ್ಮೀ ಹೆಬ್ಬಾಳ್ಕರ್: ಸಂಜಯ ಪಾಟೀಲ
ಈ ವೇಳೆ ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರನ್ನು ದೇವರಂತೆ ನಾವು ಪೂಜಿಸುತ್ತೇವೆ. ಇದಕ್ಕೆ ತಡೆಯೊಡ್ಡುವುದು ನಮ್ಮ ಉದ್ದೇಶ ಇಲ್ಲ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರನ್ನು ಕರೆಸುತ್ತಿದ್ದಾರೆ. ಪ್ರೋಟೋಕಾಲ್ ಪ್ರಕಾರ ಕಾರ್ಯಕ್ರಮ ಮಾಡುತ್ತಿಲ್ಲ ಎಂದು ಹೇಳಿದರು.

ಈ ಹಿಂದೆ ನಾನು ಶಾಸಕನಾಗಿದ್ದಾಗ ಅಂದಿನ ಸಚಿವ ಜನಾರ್ದನ ರೆಡ್ಡಿ ಅವರನ್ನು ಕರೆದುಕೊಂಡು ಬಂದಿದ್ದೆ. ಆಗ ಅವರು 4 ಕೋಟಿ ರೂ.ಬಿಡುಗಡೆ ಮಾಡಿದ್ದರು. ಇಲ್ಲಿ ನಡೆದುಕೊಂಡು ಬರಲು ಆಗುತ್ತಿರಲಿಲ್ಲ. ಈಗ ಗಾಡಿಗಳು ಬರುವಂತೆ ಆಗಿದೆ. ಇಲ್ಲಿ ಒಂದು ನೀರಿನ ಘಟಕ ನಿರ್ಮಿಸಿದ್ದೇವೆ. ಸಿದ್ದೇಶ್ವರ ದೇವಸ್ಥಾನ ಅಭಿವೃದ್ಧಿ ಪಡಿಸಿದ್ದೇನೆ. ಇದು ನನ್ನ ಕನಸು ಎನ್ನುತ್ತಿರುವ ಶಾಸಕಿಗೆ 2013 ರಿಂದ 2018ರಲ್ಲಿ ಅವರದ್ದೇ ಸರಕಾರ ಇದ್ದಾಗ ಕನಸು ಇರಲಿಲ್ಲವೇ. ಈಗ ಎಲ್ಲಿಂದ ಇವರಿಗೆ ಕನಸು ಬಂತು?" ಎಂದು ಪ್ರಶ್ನಿಸಿದರು.
ಈ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದ ಸಿ.ಟಿ.ರವಿ ಅವರ ಬಳಿ ನಾನು ಪ್ರಸ್ತಾವನೆ ಸಲ್ಲಿಸಿದ್ದೆ. ಸಿ.ಟಿ.ರವಿ ಅವರು ಮೂರೂವರೆ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಕಾಂಗ್ರೆಸ್ ಸರಕಾರ ಏನೂ ಅನುದಾನ ಕೊಟ್ಟಿಲ್ಲ" ಎಂದರು.
ಒಂದೇ ಒಂದು ರೂ. ಅನುದಾನ ಬಿಡುಗಡೆ ಆಗಿದ್ದರೆ ಅದು ಬಿಜೆಪಿ ಸರಕಾರದಲ್ಲಿಯೇ. ಕಾಂಗ್ರೆಸ್ ಸರಕಾರದಲ್ಲಿ ಯಾವುದೇ ರೀತಿ ಹಣ ಬಿಡುಗಡೆ ಮಾಡಿಲ್ಲ. ಅವರ ಸರಕಾರ ಇದ್ದಾಗ ಅನುದಾನ ಬಿಡುಗಡೆ ಮಾಡಿಸಿಲ್ಲ. ಅವರಂತೆ ನಾನು ಸೆಗಣಿ ತಿನ್ನುವುದಿಲ್ಲ, ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣಕ್ಕೆ ನಾನು ವಿರೋಧ ಪಡಿಸಿಲ್ಲ. ಮೋಸದ ಎರಡನೇ ಹೆಸರು ಲಕ್ಷ್ಮೀ ಹೆಬ್ಬಾಳ್ಕರ್. ಗ್ರಾಮೀಣ ಕ್ಷೇತ್ರದಲ್ಲಿ ಗಡದೇವರಮಠಗೆ ಟಿಕೆಟ್ ತಪ್ಪಿಸಿ ಅವರಿಗೂ ಮತ್ತು ರಮೇಶ ಜಾರಕಿಹೊಳಿ ಅವರಿಗೂ ಲಕ್ಷ್ಮೀ ಹೆಬ್ಬಾಳ್ಕರ ಮೋಸ ಮಾಡಿದ್ದಾರೆಎಂದು ಸಂಜಯ ಪಾಟೀಲ ಆರೋಪಿಸಿದರು.












Click it and Unblock the Notifications