ನಿಮ್ಮ ಹೆಣ ನಮಗೆ ಬೇಡ; ಸಿದ್ದರಾಮಯ್ಯ ಬೇಗ ಸಾಯಬಾರದು: ಕೆ ಎಸ್ ಈಶ್ವರಪ್ಪ ಹೇಳಿದಿಷ್ಟು!
ಶಿವಮೊಗ್ಗ, ಸೆಪ್ಟೆಂಬರ್ 12: ನಿಮ್ಮ ಹೆಣ ನಮಗೆ ಬೇಡ. ನೀವು ಬೇಗ ಸಾಯಬೇಡಿ. ಬಹಳ ದಿನ ಬದುಕಿ ಎಂದು ಮತ್ತೆ ನಾನು ಹೇಳುತ್ತೇನೆ. ಸಿದ್ದರಾಮಯ್ಯ ಬೇಗ ಸಾಯಬಾರದು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಟಾಂಗ್ ನೀಡಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿಗೆ ನನ್ನ ಹೆಣವೂ ಹೋಗಲ್ಲ ಎಂದಿದ್ದ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ. ನೀವು ಇನ್ನೂ ಬಹಳ ವರ್ಷ ಬದುಕಬೇಕು ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಬೇಗ ಸಾಯಬಾರದು. ಬಹಳ ವರ್ಷ ಬದುಕಿರಬೇಕು. ಜನರ ಪರವಾಗಿ ಹಿಂದುಳಿದವರ ಪರವಾಗಿ ಹೋರಾಟ ಮಾಡಲಿ. ನಾವಂತೂ ಬೇಡ ಅನ್ನೋದಿಲ್ಲ. ಯಾವ ಕಾರಣಕ್ಕೂ ನೀವು ಸಾಯೋದೂ ಬೇಡ, ನಿಮ್ಮ ಹೆಣ ಬಿಜೆಪಿ ಕಚೇರಿಗೆ ಬರೋದು ಬೇಡ. ಆದರೆ ನೀವು ಮೊದಲ ಸಲ ಸರಕಾರಿ ಕಾರು ಹತ್ತಿದ್ದು ಬಿಜೆಪಿ ಬೆಂಬಲಿತ ಸರ್ಕಾರದಿಂದ ಎಂಬುದನ್ನ ನೆನಪು ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟಾಂಗ್ ನೀಡಿದರು.
ರಾಮಕೃಷ್ಣ ಹೆಗಡೆ ಸರ್ಕಾರ ಬಂದಾಗ ನೀವು ಅಂದು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದೀರಿ. ಅಂದು ಬಿಜೆಪಿಯ 19 ಶಾಸಕರು ಬೇಷರತ್ ಬೆಂಬಲ ನೀಡಿದ್ದಕ್ಕೆ ಕಾಂಗ್ರೆಸ್ಸೇತರ ಸರ್ಕಾರ ವಾಗಿ ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರ ಅಧಿಕಾರಕ್ಕೆ ಬಂತು. ಅಂದು ನೀವು ಮೊದಲನೇ ಸರಕಾರಿ ಕಾರ್ ಪಡೆದಿದ್ರಿ. ಅಂದು ಕೋಮುವಾದಿ ಪಕ್ಷ ಎಂದು ನಿಮಗೆ ಗೊತ್ತಾಗಲಿಲ್ವ? ಎಂದು ಪ್ರಶ್ನಿಸಿದ್ದಾರೆ.
ಆ ಸರ್ಕಾರಿ ಕಾರ್ ಹತ್ತಿ ಮಜಾ ಮಾಡುವಾಗ ಎಲ್ಲಿ ಹೋಗಿತ್ತು ನಿಮ್ಮ ಸಿದ್ದಾಂತ.? ಬಿಜೆಪಿ ಬೆಂಬಲ ತೆಗೆದುಕೊಂಡು ಸಮಾಜವಾದಿಯಾದ್ರಿ ನಾವು ಈಗ ಕೋಮುವಾದಿ ಅಂತ ಕರೆಸಿಕೊಳ್ಳುತ್ತಿದ್ದೇವೆ. ಜೆಎಚ್ ಪಟೇಲ್ ಸರ್ಕಾರ ಕೂಡ ಬಿಜೆಪಿ ಬೆಂಬಲ ಪಡೆದುಕೊಂಡಿತ್ತು. ಅಂದು ಸಿದ್ದರಾಮಯ್ಯನವರಿಗೆ ಬಿಜೆಪಿ ಕೋಮುವಾದಿ ಎಂದು ಗೊತ್ತಾಗಲಿಲ್ವಾ? ಅವಕಾಶವಾದಿ ರಾಜಕಾರಣಿ ಸಿದ್ದರಾಮಯ್ಯ ಮಜಾ ಮಾಡೋದಕ್ಕೆ ಬಿಜೆಪಿ ಬೇಕು, ಆಗ ಸಮಾಜವಾದಿತನ ಎಂದು ಕಿಡಿಕಾರಿದ್ದಾರೆ.
ನಿಮ್ಮ ಹೆಣ ನಮಗೆ ಬೇಡ. ನೀವು ಬೇಗ ಸಾಯಬೇಡಿ. ಬಹಳ ದಿನ ಬದುಕಿ ಎಂದು ಮತ್ತೆ ನಾನು ಹೇಳುತ್ತೇನೆ. ಆದರೆ ನಮ್ಮ ಬಲದಿಂದ ಅಂದು ಸರ್ಕಾರಿ ಕಾರ್ ಪಡೆದಿದ್ದಕ್ಕಾಗಿ ಇಂದು ನೀವು ರಾಜ್ಯದ ಜನರ ಕ್ಷಮೆ ಕೇಳಬೇಕು. ಅಂದು ಬಿಜೆಪಿ ಬೆಂಬಲ ಪಡೆದಿದ್ದು ನಿಜ ಎಂದು ಜನರಿಗೆ ಹೇಳಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ ಎಂದರು.
ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಅನೇಕ ಸುಳ್ಳುಗಳನ್ನ ಹೇಳುತ್ತಾರೆ. ಆದರೆ ಅವುಗಳ ಬಗ್ಗೆ ನಾನು ಚಕಾರ ಎತ್ತೋದಿಲ್ಲ. ಆದರೆ ಬಿಜೆಪಿಯನ್ನು ಕೋಮುವಾದಿ ಎಂದು ಘೋಷಣೆ ಮಾಡಿಕೊಂಡು ಓಡಾಡುತ್ತಿದ್ದಾರೆ. ನನ್ನ ನೇರ ಪ್ರಶ್ನೆ ಸಿದ್ದರಾಮಯ್ಯಗೆ. ಬಿಜೆಪಿ ಕೋಮುವಾದಿ ಎಂದು ಸಿದ್ದರಾಮಯ್ಯನ ಅಂತವರಿಗೆ ಗೊತ್ತಾಗಿದ್ದು ಯಾವಾಗ.? ಅಧಿಕಾರಿ ಪಡೆದುಕೊಂಡು ಬೆಂಬಲಿತ ಸರ್ಕಾರ ಜೊತೆಗೆ ಸವಲತ್ತು ಅನುಭವಿಸುವಾಗ ಏಕಿಲ್ಲ.? ನಿಮಗೆ ಬಿಜೆಪಿ ಕೋಮುವಾದಿ ಅಂತ ಈಗ ಎನಿಸಿರುವುದು ದುರಂತ ಎಂದು ಈಶ್ವರಪ್ಪ ಹೇಳಿದರು.












Click it and Unblock the Notifications