ಸಚಿವ ಶಿವರಾಜ ತಂಗಡಗಿ ಕಪಾಳಕ್ಕೆ ಹೊಡೆಯುವುದು ಕೇವಲ ಒಂದು ನಿಮಿಷದ ಕೆಲಸ: ಜನಾರ್ದನ ರೆಡ್ಡಿ ಹೀಗೆ ಹೇಳಿದ್ಯಾಕೆ?
ಕೊಪ್ಪಳ, ಏಪ್ರಿಲ್ 09: ಮೋದಿ ಮೋದಿ ಎನ್ನುವವರ ಕಪಾಳಕ್ಕೆ ಹೊಡಿಯಿರಿ ಎನ್ನುವ ಸಚಿವ ಶಿವರಾಜ ತಂಗಡಗಿ ಕಪಾಳಕ್ಕೆ ಹೊಡೆಯುವುದು ಕೇವಲ ಒಂದು ನಿಮಿಷದ ಕೆಲಸ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಮೋದಿ ಮೋದಿ ಎನ್ನುವವರಿಗೆ ಕಪಾಳಕ್ಕೆ ಹೊಡಿಯಿರಿ ಎನ್ನುವ ಸಚಿವ ಶಿವರಾಜ್ ತಂಗಡಗಿಗೆ ಬಹಿರಂಗ ಸಭೆಯಲ್ಲಿ ಸಚಿವ ಶಿವರಾಜ್ ತಂಗಡಗಿ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು, ಪ್ರತಿಯೊಬ್ಬರ ಮನೆಯಲ್ಲಿ ತಂಗಡಗಿ ಬಗ್ಗೆ ಕೆಟ್ಟ ಭಾವನೆ ಮೂಡಿದೆ. ಕನಕಗಿರಿ ಕ್ಷೇತ್ರದ ಗೌರವ ಹೋಗುವ ರೀತಿಯಲ್ಲಿ ತಂಗಡಗಿ ನಡೆದುಕೊಂಡಿದ್ದಾನೆ. ಅವನಿಗೆ ಬುದ್ದಿ ಕಲಿಸೋ ರೀತಿಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಾಗಿದೆ ಎಂದರು.

ಅವನಿಗೆ ಕಪಾಳಕ್ಕೆ ಬಾರಿಸಲು ಎಲ್ಲರೂ ತೀರ್ಮಾನ ಮಾಡಿದ್ರೆ ಅದೇನು ದೊಡ್ಡ ವಿಚಾರವಲ್ಲ. ತಂಗಡಗಿಯ ದುರಂಹಕಾರ ಮಾತಿಗೆ ನಾವು ಮತಗಳ ಮುಖಾಂತರ ಉತ್ತರ ಕೊಡಬೇಕಿದೆ.ಮೋದಿ ಮೋದಿ ಸ್ಮರಣೆ ಮಾಡುವ ಮೂಲಕ ನಾವು ಮತಹಾಕಬೇಕಿದೆ.ಇದ್ರಿಂದ ತಂಗಡಗಿ ಗೌರವ ಹೋಗಿ, ಮಂತ್ರಿ ಸ್ಥಾನ ಕಳೆದುಕೊಂಡು ತಂಗಡಗಿ ಮನೆಗೆ ಹೋಗ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ನಿಲ್ಲಿಸ್ತೇನೆ ಅಂದ್ರೆ ನಾವು ಸುಲಭವಾಗಿ ಬಿಡಲ್ಲಾ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಬೀದಿಗೆ ತಂದು ಕೇಳ್ತೇವೆ. ಮೊದಲು ನಾನು ಒಬ್ಬನೇ ಇದ್ದೆ, ಇದೀಗ ನಮ್ಮ ಬಲ ಹೆಚ್ಚಾಗಿದೆ. ಗ್ಯಾರಂಟಿ ಹೆಸರಲ್ಲಿಯೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದೀಗ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸ್ತೇನೆ ಅನ್ನೋಕೆ ಹೇಗೆ ಬರುತ್ತದೆ ಎಂದು ವಾಗ್ದಾಳಿ ನಡೆಸಿದರು.
ಇದು ಲೋಕಸಭಾ ಚುನಾವಣೆ ರಾಜ್ಯದ ಚುನಾವಣೆ ಅಲ್ಲ. ಸೋನಿಯಾ ಗಾಂಧಿ ಸೋಲ್ತೇನೆ ಅಂತ ತಿಳಿದು ರಾಜ್ಯಸಭೆಗೆ ಹೋಗಿದ್ದಾರೆ. ರಾಹುಲ್ ಗಾಂಧಿಗೆ ಕೂಡಾ ಮತ್ತೆ ಗೆಲ್ಲುತ್ತೇನೋ ಇಲ್ವೋ ಅನ್ನೋ ಗಾಬರಿ ಇದೆ. ಪಲ್ಲಕ್ಕಿಯಲ್ಲಿ ದೇವರ ಮೂರ್ತಿಯಿದ್ದರೆ ನಾವು ಕೈ ಮುಗಿತೇವೆ. ಬಿಜೆಪಿ ಪಲ್ಲಕ್ಕಿಯಲ್ಲಿ ಮೋದಿ ಅನ್ನೋ ಮೂರ್ತಿಯಿದೆ. ಆದರೆ, ಕಾಂಗ್ರೆಸ್ ಪಲ್ಲಕ್ಕಿಯಲ್ಲಿ ಯಾರ ಮೂರ್ತಿಯೂ ಇಲ್ಲ. ಕಾಂಗ್ರೆಸ್ ಗೆ ತಮ್ಮ ಪ್ರಧಾನಿ ಅಭ್ಯರ್ಥಿ ಅಂತ ಘೋಷಿಸಲು ಧೈರ್ಯವಿಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದರು.












Click it and Unblock the Notifications