ಮಾಜಿ ಐಪಿಎಸ್ ಅಧಿಕಾರಿ ಮುಂದೆ ಮಾಜಿ ಸಿಎಂ ತಲೆತಗ್ಗಿಸಿ ನಿಲ್ಲುವಂತಾಯಿತು: ಅಣ್ಣಾಮಲೈ ಬಗ್ಗೆ ಜಗದೀಶ್ ಶೆಟ್ಟರ್ ಹೇಳಿದ್ದೇನು?
ಹುಬ್ಬಳ್ಳಿ, ಏಪ್ರಿಲ್ 18: ಭಾರತೀಯ ಜನತಾ ಪಕ್ಷಕ್ಕೆ ( BJP ) ರಾಜೀನಾಮೆ ನೀಡಿ ಕರ್ನಾಟಕದ ( Karnataka ) ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ( Jagadish Shettar ) ಅವರು ಕಾಂಗ್ರೆಸ್ ( Congress ) ಪಕ್ಷಕ್ಕೆ ಸೇರಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿದ ಪರಿಣಾಮವಾಗಿ ಜಗದೀಶ್ ಶೆಟ್ಟರ್ ಈ ನಿರ್ಧಾರ ಕೈಗೊಂಡಿದ್ದಾರೆ. ಅವರಿಗೆ ಕಾಂಗ್ರೆಸ್ ಬಿ ನೀಡಿದ್ದು, ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಮಹತ್ವದ ಸುದ್ದಿಗೋಷ್ಠಿ ಕರೆದಿದ್ದ ಜಗದೀಶ್ ಶೆಟ್ಟರ್ ಅವರು, 'ತಮ್ಮ ಇಡೀ ಕುಟುಂಬ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ. ಹುಬ್ಬಳ್ಳಿಯಲ್ಲಿ ಬಿಜೆಪಿಯನ್ನು ಬಲಪಡಿಸಲು ನಮ್ಮ ಕುಟುಂಬದ ಅನೇಕರು ಶ್ರಮಿಸಿದ್ದಾರೆ. ನನಗೆ ಅಧಿಕಾರದ ದಾಹ ಇಲ್ಲ' ಎಂದು ಸ್ಪಷ್ಟಪಡಿಸಿದರು.

ರಾಜ್ಯ ಬಿಜೆಪಿಯನ್ನು ಕೆಲವೇ ವ್ಯಕ್ತಿಗಳು ನಿಯಂತ್ರಿಸುತ್ತಿದ್ದಾರೆ ಎಂದು ಶೆಟ್ಟರ್ ಕಿಡಿಕಾರಿದರು. 'ಚುನಾವಣೆ ಟಿಕೆಟ್ ನಿರಾಕರಿಸಿದ್ದು ಏಕೆ ಎಂದು ನಾನು ಕೇಳಿದಾಗ ಬಿಜೆಪಿಯಿಂದ ಯಾರೂ ಉತ್ತರಿಸಲಿಲ್ಲ. ಅದು ನನಗೆ ತುಂಬಾ ನೋವುಂಟು ಮಾಡಿದೆ. ಹಿರಿಯ ನಾಯಕರನ್ನು ಹೊರಹಾಕಬೇಕು ಎಂಬುದು ಉದ್ದೇಶವಾಗಿದೆ' ಎಂದು ಶೆಟ್ಟರ್ ಹೇಳಿದರು.
ನನಗೆ ಟಿಕೆಟ್ ತಪ್ಪುವಂತೆ ಮಾಡಿದ್ದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್. ಅವರು ತಮ್ಮ ಮಾನಸ ಪುತ್ರ ಮಹೇಶ್ ತೆಂಗಿನಕಾಯಿ ಅವರಿಗೆ ಟಿಕೆಟ್ ನೀಡಲು ನನಗೆ ಟಿಕೆಟ್ ತಪ್ಪಿಸಿದರು ಎಂದು ಹೇಳಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂಬುದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ತಿಳಿಯುತ್ತಿಲ್ಲ. ಕೆಲ ವ್ಯಕ್ತಿಗಳಿಂದ ರಾಜ್ಯದಲ್ಲಿ ಬಿಜೆಪಿ ನಾಶವಾಗುತ್ತಿದೆ ಎಂದು ಅವರು ಹರಿಹಾಯ್ದರು.
ಸಂಸದ ಸ್ಥಾನಕ್ಕೆ ಅಭ್ಯರ್ಥಿಯಾಗಲು ಪ್ರಹ್ಲಾದ್ ಜೋಶಿ ಅವರ ಹೆಸರನ್ನು ಸೂಚಿಸಿದ್ದೇ ನಾನು. ಅವರನ್ನು ಗೆಲ್ಲಿಸುವುದಕ್ಕಾಗಿ ಶತಾಯಗತಾಯ ಪ್ರಯತ್ನ ಪಟ್ಟಿದ್ದೇನೆ. ಆದರೆ, ಅವರೂ ಸಹ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಹೇಳಿದರು.
ನನ್ನನ್ನು ಚಿಕ್ಕ ಬಾಲಕನಂತೆ ನಡೆಸಿಕೊಳ್ಳಲಾಯಿತು. ಏಳು ಬಾರಿ ಬಿಜೆಪಿಯಿಂದ ಶಾಸಕನಾಗಿದ್ದೇನೆ. ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ನಾನು ಅಪಾರ ಕೊಡುಗೆ ನೀಡಿದ್ದೇನೆ. ಮಾಜಿ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದೇನೆ. ಆದರೆ, ನನ್ನನ್ನು ಬಿಜೆಪಿಯವರು ಚಿಕ್ಕ ಹುಡುಗನಂತೆ ನಡೆಸಿಕೊಂಡು ಅವಮಾನ ಮಾಡಿದರು ಎಂದು ಕೇಸರಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದೆ.
ಇದೇ ವೇಳೆ, ಮಾಜಿ ಐಎಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧವೂ ಜಗದೀಶ್ ಶೆಟ್ಟರ್ ಗುಡುಗಿದರು. ಅಣ್ಣಾಮಲೈ ಅವರನ್ನು ತಮಿಳುನಾಡಿ ಬಿಜೆಪಿಗೆ ಅಧ್ಯಕ್ಷರನ್ನಾಗಿ ಮಾಡಲಾಯಿತು. ಕರ್ನಾಟಕದ ಟಿಕೆಟ್ ಹಂಚಿಕೆ ಪ್ರಕ್ರಿಯೆಯಲ್ಲಿಯೂ ಅವರನ್ನು ನೇಮಿಸಲಾಯಿತು. ಒಬ್ಬ ಮಾಜಿ ಐಎಎಸ್ ಅಧಿಕಾರಿ ಎದುರು ಮಾಜಿ ಸಿಎಂ ಆಗಿರುವ ನನ್ನನ್ನು ತಲೆ ತಗ್ಗಿಸಿ ನಿಲ್ಲುವಂತೆ ಮಾಡಲಾಯಿತು ಎಂದು ಶೆಟ್ಟರ್ ಹರಿಹಾಯ್ದರು.












Click it and Unblock the Notifications