ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಲೋಕಸಭಾ ಚುನಾವಣೆ ಸ್ಪರ್ಧೆ? ಯಾವ ಕ್ಷೇತ್ರದಿಂದ ಕಣಕ್ಕೆ?
ಮೈಸೂರು, ಫೆಬ್ರವರಿ 19: ಲೋಕಸಭಾ ಚುನಾವಣೆಗೆ ಇನ್ನು ಒಂದೆರಡು ತಿಂಗಳಷ್ಟೇ ಬಾಕಿಯಿದೆ. ಹೀಗಾಗಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಮುನ್ನಲೆಗೆ ಬರುತ್ತಿದ್ದು, ತಮ್ಮ ಬಯಕೆಯನ್ನು ಹೊರಗೆಡವುತ್ತಿದ್ದಾರೆ. ಆದರೆ ಎರಡು ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್ ಯಾರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುತ್ತಾರೋ ಗೊತ್ತಿಲ್ಲ. ಆದರೂ ಸಮಯ ಸಿಕ್ಕಾಗಲೆಲ್ಲ ನಾಯಕರು ತಮ್ಮ ದಾಳವನ್ನು ಉರುಳಿಸುತ್ತಲೇ ಇರುವುದು ಎದ್ದು ಕಾಣಿಸುತ್ತಿದೆ.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ ಕಾಂಗ್ರೆಸ್ ನಲ್ಲಿ ಡಜನ್ ಗಟ್ಟಲೆ ಆಕಾಂಕ್ಷಿಗಳಿದ್ದರೂ ಬಿಜೆಪಿಯಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಬಿಟ್ಟರೆ ಇತರೆ ನಾಯಕರು ಸ್ಪರ್ಧೆ ಕುರಿತಂತೆ ತಮ್ಮ ಆಕಾಂಕ್ಷೆಗಳನ್ನು ಹೊರಗೆ ಹಾಕಿರಲಿಲ್ಲ. ಆದರೀಗ ಕಾಂಗ್ರೆಸ್ ಮುಖಂಡ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಹೈಕಮಾಂಡ್ ಟಿಕೆಟ್ ನೀಡಿದರೆ ಸ್ಪರ್ಧಿಸುವುದಾಗಿ ಹೇಳಿರುವುದು ಅಚ್ಚರಿ ಮೂಡಿಸಿದೆ. ಆದರೆ ಅವರು ಗಂಭೀರವಾಗಿ ಪರಿಗಣಿಸಿಯೇ ಹೇಳಿಕೆಯನ್ನು ನೀಡಿದ್ದಾರೆ ಎನ್ನುವುದನ್ನು ತಳ್ಳಿಹಾಕಲಾಗದು.

ಹಾಗೆನೋಡಿದರೆ ಎಎಪಿಯಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಭಾಸ್ಕರರಾವ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಲ್ಲಿ ಜಮೀರ್ ಅಹಮದ್ ಎದುರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಇಲ್ಲಿ ಗೆಲುವು ಅಸಾಧ್ಯ ಎನ್ನುವುದು ಗೊತ್ತಿರುವ ವಿಚಾರವೇ ಆಗಿತ್ತು. ಆದರೂ ಪ್ರಯತ್ನ ಮಾಡಿದ್ದರು. ಅದು ಅವರಿಗೊಂದು ಅನುಭವವಾಗಿತ್ತು. ಅದಾದ ನಂತರ ಅವರು ಸಂಘಟನೆಯತ್ತ ಗಮನಹರಿಸಿದ್ದರು.
ಬ್ರಾಹ್ಮಣರ ಮತ ಕಲೆಹಾಕಿಸುವ ಯತ್ನ
ಹಲವು ತಿಂಗಳ ಹಿಂದೆಯೇ ಕೊಡಗು ಮತ್ತು ಮೈಸೂರು ಭಾಗದಲ್ಲಿ ಬ್ರಾಹ್ಮಣ ಸಂಘಟನೆಗಳ ಪ್ರಮುಖರನ್ನು ಭೇಟಿ ಮಾಡಿ ಸಭೆ ನಡೆಸಿ ಸಮುದಾಯವನ್ನು ಒಗ್ಗೂಡಿಸುವ ಕೆಲಸಕ್ಕೆ ಶ್ರಮಿಸಿದ್ದರು. ಇತ್ತೀಚೆಗಿನ ದಿನಗಳಲ್ಲಿ ಮೈಸೂರು ಮತ್ತು ಕೊಡಗು ವ್ಯಾಪ್ತಿಯಲ್ಲಿ ಹೆಚ್ಚು ಹೆಚ್ಚಾಗಿ ಕಾಣಿಸಿಕೊಂಡ ಭಾಸ್ಕರ ರಾವ್ ಅವರು ಮಿಂಚಿನ ಸಂಚಾರ ನಡೆಸುತ್ತಾ ಬಂದಿದ್ದು, ಮೊದಲಿಗೆ ಬ್ರಾಹ್ಮಣರನ್ನು ಒಟ್ಟಾಗಿಸಿ ಮತ ಕಲೆ ಹಾಕುವ ಗುರಿ ಹೊಂದಿದ್ದಾರೆ.
ಇನ್ನು ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷೆ ವ್ಯಕ್ತಪಡಿಸಲು ಕಾರಣವೂ ಇಲ್ಲದಿಲ್ಲ. ಪೊಲೀಸ್ ಅಧಿಕಾರಿಯಾಗಿ ಅವರು ಕೊಡಗು ಮತ್ತು ಮೈಸೂರು ಭಾಗಗಳಲ್ಲಿ ಕೆಲಸ ಮಾಡಿದ್ದು, ಹೀಗಾಗಿ ಈ ವ್ಯಾಪ್ತಿಯ ಜನರ ನಾಡಿ ಮಿಡಿತ ಗೊತ್ತಿದೆ. ಆದರೆ ರಾಜಕಾರಣಿಯಾಗಿ, ಅಧಿಕಾರಿಯಾಗಿ ನೋಡುವ ರೀತಿಯೇ ವಿಭಿನ್ನವಾಗಿರುತ್ತದೆ. ಆದರೂ ಭಾಸ್ಕರರಾವ್ ಅವರಿಗೆ ಮನದೊಳಗೆ ಆತ್ಮವಿಶ್ವಾಸವಂತು ಇದ್ದೇ ಇದೆ.

ರಾಜ್ಯ, ರಾಷ್ಟ್ರ ನಾಯಕರಿಗೆ ಸಂದೇಶ ರವಾನೆ
ಪೊಲೀಸ್ ಅಧಿಕಾರಿಯಾಗಿದ್ದಾಗ ರಾಜ್ಯದ ವಿವಿಧೆಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಮೈಸೂರು, ಕೊಡಗು ಭಾಗದಲ್ಲಿಯೂ ಉತ್ತಮ ಕೆಲಸ ಮಾಡಿದ್ದೇನೆ. ಯಾರದೇ ರಕ್ತ ನೆಲದ ಮೇಲೆ ಬೀಳದಂತೆ ಕಾನೂನು ಸುವ್ಯವಸ್ಥೆ ಕಾಪಾಡಿದ್ದೇನೆ. ಇದೆಲ್ಲವೂ ಈ ಭಾಗದ ಜನರಿಗೆ ಗೊತ್ತಿದೆ. ಪಕ್ಷ ಅವಕಾಶ ನೀಡಿದರೆ ಮೈಸೂರು-ಕೊಡಗು ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ದನಿದ್ದೇನೆ. ಈ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದನಾಗಿದ್ದೇನೆಂದು ತಮ್ಮ ಮನದ ಇಂಗಿತ ವ್ಯಕ್ತಪಡಿಸುವ ಮೂಲಕ ನಾನು ಆಕಾಂಕ್ಷಿ ಎಂಬ ಸಂದೇಶವನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರಿಗೆ ರವಾನಿಸಿದ್ದಾರೆ.
ನಾನು ಕೂಡ ಟಿಕೆಟ್ ಆಕಾಂಕ್ಷಿ ಎನ್ನುವುದನ್ನು ಬಹಿರಂಗವಾಗಿಯೇ ಹೊರ ಹಾಕಿರುವ ಕಣಕ್ಕಿಳಿಯುವ ಅರ್ಹತೆ ನನಗೂ ಇದೆ. ನಾನು ಟಿಕೆಟ್ ಆಕಾಂಕ್ಷಿ ಎನ್ನುವುದಕ್ಕಿಂತ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ಅರ್ಹತೆಗಳಿವೆ ಎಂದು ಹೇಳುವುದರ ಜತೆಗೆ ಬ್ರಾಹ್ಮಣ ಸಮಾಜದ ಸಂಘಟನೆಯನ್ನು ಏಕೆ ಸಕ್ರಿಯಗೊಳಿಸಬೇಕು ಎಂಬುದರ ಬಗ್ಗೆಯೂ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜತೆಗೆ ಆಗಾಗ್ಗೆ ಮೈಸೂರಿಗೆ ಏಕೆ ಬರುತ್ತಿದ್ದಾರೆ ಎಂಬ ಪ್ರಶ್ನೆಗೂ ಉತ್ತರವನ್ನು ನೀಡಿದ್ದಾರೆ.
ರಾಜಕೀಯಕ್ಕೆ ಬರಲು ಮುಂದಾಗಬೇಕು
ನಾನು ಮೈಸೂರಿಗೆ ಬರುತ್ತಿರುವುದು ನಮ್ಮ ಸಮಾಜದ ಒಳಿತಿಗಾಗಿ. ನಮ್ಮ ಸಮಾಜದ ಮುಂದೆ ಹಲವಾರು ಸವಾಲುಗಳಿವೆ. ದಿಟ್ಟ ಹೆಜ್ಜೆ ಇಡಲು ಚಿಂತನೆ ಮಾಡುತ್ತಿದ್ದೇವೆ. ಯಾರಾದರೂ ನಮಗೆ ಏನು ಅನ್ನುತ್ತಾರೋ ಎಂದು ನಾವು ಯೋಚಿಸುತ್ತೇವೆ. ಮುಜುಗರ, ಸೋಲಿನ ಭಯ ಬಿಟ್ಟು ಮುನ್ನುಗ್ಗಬೇಕು. ನಾವು ಸಂಘಟಿತರಾಗಲು ಅಸಮರ್ಥರಾಗಬಾರದು. ನಮ್ಮ ಸಮಾಜದ ಮೇಲೆ ಎಲ್ಲಾ ಸಮುದಾಯದವರಿಗೆ ಗೌರವವಿದೆ. ಪ್ರತಿಷ್ಠಿತ ಹುದ್ದೆಗಳನ್ನು ನಮ್ಮ ಸಮಾಜದವರು ಅಲಂಕರಿಸಿದ್ದಾರೆ.
ಹಂಗರ್ ಫಾರ್ ಪವರ್ ಇದ್ದರೆ ಮಾತ್ರ ನಾವು ಮುಂದೆ ಬರಲು ಸಾಧ್ಯ. ನಾವು ಎಲ್ಲಾ ಮಟ್ಟದ ಚುನಾವಣೆಗಳಲ್ಲೂ ಧೈರ್ಯದಿಂದ ಮುನ್ನುಗ್ಗಿ ಸ್ಫರ್ಧಿಸಬೇಕು. ಶಸ್ತ್ರ ತ್ಯಾಗ ಮಾಡಿ ನಮ್ಮಲ್ಲಿರುವ ಶಕ್ತಿ ಸಾಮರ್ಥ್ಯ ವ್ಯರ್ಥ ಮಾಡಿಕೊಳ್ಳಬಾರದು. ರಾಜಕೀಯಕ್ಕೆ ನಮ್ಮ ಸಮಾಜದಲ್ಲಿ ಯಾರು ಮುಂದೆ ಬರುತ್ತಿಲ್ಲ. ಪ್ರಯತ್ನ ಪಟ್ಟರಷ್ಟೇ ಭಗವಂತ ಮೆಚ್ಚುವುದು. ಪ್ರಯತ್ನವನ್ನೇ ಮಾಡದಿದ್ದರೆ ಯುದ್ದಕ್ಕೂ ಮುಂಚೆಯೇ ಸೋತಂತೆ ಎಂದು ಹೇಳುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಕೂಡ ಆಕಾಂಕ್ಷಿ ಎಂಬುದನ್ನು ಬಹಿರಂಗಗೊಳಿಸಿದ್ದಾರೆ.












Click it and Unblock the Notifications