Family Politics: ಮೂವರು ಮಾಜಿ ಸಿಎಂ ಗಳಿಗೆ ಪುತ್ರ ವ್ಯಾಮೋಹ; ಮಕ್ಕಳ ಗೆಲುವಿನ ಹಿಂದೆ ತಂದೆಯರ ಶ್ರಮ! ಆ ಮೂವರು ಮಾಜಿ ಸಿಎಂ ಯಾರು?
ಬೆಂಗಳೂರು,ಏಪ್ರಿಲ್21: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಕುಟುಂಬ ರಾಜಕಾರಣ ಸದಾ ಸದ್ದು ಮಾಡುತ್ತಿರುತ್ತದೆ. ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷದಲ್ಲೂ ಕುಟುಂಬ ರಾಜಕಾರಣ ವಿಚಾರದ ಟೀಕೆ ಟಿಪ್ಪಣಿಗಳು ಸಹಜವಾಗಿವೆ.
ಪಕ್ಷ ಪಟ್ಟಿ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ವರ್ಚಸ್ಸು ಹಾಗೂ ಹೆಸರನ್ನ ಹೊಂದಿರುವ ಮೂವರು ಮಾಜಿ ಮುಖ್ಯಮಂತ್ರಿಗಳಿಗೂ ರಾಜಕೀಯದ ಆಳ-ಅಗಲ ಹಾಗೂ ಕಷ್ಟದ ದಿನಗಳಿಗೆನೂ ಕೊರತೆಯಿಲ್ಲ. ಆದರೆ ಈ ಬಾರಿಯ 2023 ರ ವಿಧಾನಸಭಾ ಚುನಾವಣೆಯಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳಿಗೆ ಮಕ್ಕಳ ರಾಜಕೀಯ ಭವಿಷ್ಯದ ಪ್ರಶ್ನೆಯಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಮಕ್ಕಳ ಮಕ್ಕಳ ರಾಜಕೀಯ ಭವಿಷ್ಯ ಗಟ್ಟಿಮಾಡಲು ಟೊಂಕ ಕಟ್ಟಿದ್ದಾರೆ.

ವಿಜಯೇಂದ್ರ ರಾಜಕೀಯ ಭವಿಷ್ಯಕ್ಕಾಗಿ ಬಿಎಸ್ವೈ ಗೆ ನೂರೆಂಟು ಸವಾಲು
ದಕ್ಷಿಣ ಭಾರತದ ಪ್ರಭಾವಿ ನಾಯಕ, ರಾಜ್ಯ ಬಿಜೆಪಿಯ ಮಾಸ್ ಲೀಡರ್ ಬಿ.ಎಸ್ ಯಡಿಯೂರಪ್ಪ ಇಡೀ ರಾಜ್ಯಕ್ಕೆ ಪರಿಚಿತರು. ಬಿ ಎಸ್ ಯಡಿಯೂರಪ್ಪ ಅವರ ರಾಜಕೀಯ ಮುಳ್ಳಿನ ಹಾಸಿಗೆಯಾಗಿತ್ತು. ರಾಜಕೀಯದ ಅಳ-ಅಗಲ ತಿಳಿದಿರುವ ಯಡಿಯೂರಪ್ಪ ಅವರಿಗೆ ಪುತ್ರ ವ್ಯಾಮೋಹ.
ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರು ಬಿ ವೈ ವಿಜಯೇಂದ್ರ ಅವರು ಪಕ್ಷ ಸಂಘಟನೆಯ ಜೊತೆಗೆ ಬಿಜೆಪಿ ಸರ್ಕಾರ ರಚನೆಯ ಬಳಿಕ ನಡೆದ ಉಪಚುನಾವಣೆಯ ಸಂದರ್ಭದಲ್ಲಿ ಪಕ್ಷ ಕೊಟ್ಟ ಜವಾಬ್ದಾರಿಯನ್ನ ನಿರ್ವಹಿಸಿದ್ದಾರೆ. ಮುಖ್ಯಮಂತ್ರಿ ಆದಾಗ ಅವರ ಕುಟುಂಬ ಸದಸ್ಯರ ಪಾರುಪಥ್ಯ ಬಹಳಷ್ಟು ಸದ್ದುಮಾಡಿತ್ತು, ಪಕ್ಷದ ನಾಯಕರ ವಿರೋಧದ ಮಧ್ಯದಲ್ಲೇ ರಾಘವೇಂದ್ರ ಅವರನ್ನ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿ ಗೆಲ್ಲಿಸಿದರು.
ಇನ್ನು ವಿಜಯೇಂದ್ರ ಅವರ ರಾಜಕೀಯ ಭವಿಷ್ಯಕ್ಕಾಗಿ ಸಾಕಷ್ಟು ಸವಾಲುಗಳನ್ನ ಯಡಿಯೂರಪ್ಪ ಅವರು ಎದುರಿಸಿದ್ದಾರೆ. ಈ ಹಿಂದೆ 2018 ರ ವಿಧಾನಸಭಾ ಚುನಾವಣೆ ಹಾಗೂ ಉಪ ಚುನಾವಣೆ ಯ ಕ್ಷೇತ್ರಗಳಾದ ಚಾಮುಂಡೇಶ್ವರಿ, ವರುಣಾ, ಕೆ ಆರ್ ಪೇಟೆ, ಹಾಗೂ ಶಿರಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಿ ವೈ ವಿಜಯೇಂದ್ರ ಹೆಸರು ಮುನ್ನೆಲೆಗೆ ಬಂದಿದ್ದು, ಕೊನೆಯ ಹಂತದಲ್ಲಿ ಕೈ ತಪ್ಪುತ್ತಿತ್ತು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ ಎಸ್ ಯಡಿಯೂರಪ್ಪ ಅವರು ಕೆಳಗೆ ಇಳಿದ ಬಳಿಕ ಒಂದು ವರ್ಷ ಕಾಲ ಮೌನವಾಗಿದ್ದರು. ಕೊನೆಗೆ ಪಕ್ಷ ತನ್ನನ್ನು ಮೂಲೆಗುಂಪು ಮಾಡುತ್ತಿದೆ ಎಂಬುದು ಅರಿವಾಗುತ್ತಿದ್ದಂತೆ, ಶಿವಮೊಗ್ಗದಲ್ಲಿ ಚುನಾವಣಾ ನಿವೃತ್ತಿ ಘೋಷಣೆ ಮಾಡಿ ಶಿಕಾರಿಪುರದಿಂದ ಬಿ.ವೈ.ವಿಜಯೇಂದ್ರ ಸ್ಪರ್ಧಿಸುವುದಾಗಿ ಘೋಷಿಸಿದರು.
ಇನ್ನೂ ಚುನಾವಣಾ ದಿನಾಂಕ ಘೋಷಣೆಯ ಬಳಿಕ ಮತ್ತೆ ವರುಣಾದಿಂದ ವಿಜಯೇಂದ್ರ ಅವರು ಸ್ಪರ್ಧೆ ಮಾಡ್ತಾರೆ ಎಂಬ ಚರ್ಚೆಗಳು ಹೆಚ್ಚಾಗ ತೊಡಗಿದ್ದು, ಸಿದ್ದರಾಮಯ್ಯ ಅವರಿಗೆ ಎದುರಾಳಿಯಾಗಿ ಗೆಲುವು ಕಷ್ಟ. ಅಲ್ಲದೆ, ಪಕ್ಷದ ಮೇಲಿನ ತಮ್ಮ ಹಿಡಿತ, ಪ್ರಭಾವ ತಗ್ಗಿಸಲು ಪಕ್ಷದೊಳಗೆ ನಡೆಸುತ್ತಿರುವ ಪ್ರಯತ್ನ ಎಂಬುದನ್ನು ಅರಿತ ಯಡಿಯೂರಪ್ಪ ಅವರು ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಯಾವುದೇ ಕಾರಣಕ್ಕೂ ವರುಣಾದಿಂದ ಸ್ಪರ್ಧೆಸಲ್ಲ. ಈ ಕುರಿತು ಹೈಕಮಾಂಡ್ ನಾಯಕರಿಗೂ ತಿಳಿಸಿದ್ದೇನೆ ಎಂದು ಹೇಳಿದ್ದರು.
ಯಡಿಯೂರಪ್ಪ ಅವರ ಶ್ರಮ ಹಾಗೂ ಅವರ ಮಾತಿಗೆ ಮಣಿದ ಹೈಕಮಾಂಡ್ ವಿಜಯೇಂದ್ರ ಅವರಿಗೆ ಶಿಕಾರಿಪುರದಿಂದ ಟಿಕೆಟ್ ನೀಡಿದ್ದು, ವಿಜಯೇಂದ್ರ ಅವರ ರಾಜಕೀಯ ಭವಿಷ್ಯಕ್ಕಾಗಿ ಹಾಗೂ ಅವರ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.
ನಿಖಿಲ್ ಗೆಲುವಿಗಾಗಿ ತಂದೆ-ತಾಯಿ ಇಬ್ಬರಿಂದಲೂ ತ್ಯಾಗ;ತಪಸ್ಸು
ಸಿನಿಮಾ ರಂಗದ ಜೊತೆ ಜೊತೆಗೆ ರಾಜಕೀಯ ರಂಗಕ್ಕೆ ಎಂಟ್ರಿಯಾಗಿರುವ ಮಾಜಿ ಪ್ರಧಾನ ಮಂತ್ರಿ ದೇವೇಗೌಡರ ಮೊಮ್ಮಗ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನ ರಾಜಕೀಯವಾಗಿ ನೆಲೆಗೊಳಿಸಲು ಸಾಕಷ್ಟು ಪ್ರಯತ್ನವನ್ನ ಕೈಗೊಂಡಿದ್ದಾರೆ.
2019 ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋತ ನಂತರ ಮತ್ತೆ ರಾಜಕೀಯವಾಗಿ ಮುನ್ನಲೆಗೆ ತರಲು ಕುಮಾರಸ್ವಾಮಿ ದಂಪತಿಗಳಿಬ್ಬರು ಪ್ರಯತ್ನಪಡುತ್ತಿದ್ದು, ಮಗನ ರಾಜಕೀಯ ಭವಿಷ್ಯಕ್ಕಾಗಿ ರಾಮನಗರ ಕ್ಷೇತ್ರವನ್ನ ಅನಿತಾ ಕುಮಾರಸ್ವಾಮಿ ಬಿಟ್ಟುಕೊಟ್ಟಿದ್ದಾರೆ.
ಈಗಾಗಲೇ ಚುನಾವಣೆಗೆ ಸಕಲ ರೀತಿಯಲ್ಲೂ ಸಿದ್ದತೆಯನ್ನ ನಡೆಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕುಟುಂಬ ರಾಜಕಾರಣದ ಹಣೆಪಟ್ಟಿಯ ಜೊತೆಗೆ ಮಗನನ್ನ ರಾಮನಗರ ಕ್ಷೇತ್ರದಿಂದ ಕಣಕ್ಕಿಳಿಸಿದ್ದು, ಹೆಚ್ ಡಿ ರೇವಣ್ಣ ಅವರ ಇಬ್ಬರು ಪುತ್ರರಾದ ಪ್ರಜ್ವಲ್ ರೇವಣ್ಣ ಸಂಸದರಾಗಿ, ಸೂರಜ್ ರೇವಣ್ಣ ವಿಧಾನ ಪರಿಷತ್ ಸದಸ್ಯರಾಗಿ ರಾಜಕೀಯಕ್ಕೆ ಎಂಟ್ರಿಯಾಗಿದ್ದು, ನಿಖಿಲ್ ಕುಮಾರಸ್ವಾಮಿ ಅವರನ್ನ ರಾಜಕೀಯಕ್ಕೆ ಕರೆತರಲು ಕುಮಾರಸ್ವಾಮಿ ದಂಪತಿಗಳಿಬ್ಬರು ತ್ಯಾಗ ಹಾಗೂ ತಪ್ಪಸನ್ನ ಕೈಗೊಂಡಿದದ್ದಾರೆ.
ಸಿದ್ದರಾಮಯ್ಯ ಗೆ ಯತೀಂದ್ರನ ರಾಜಕೀಯ ಭವಿಷ್ಯದ ಚಿಂತೆ
ಕಾಂಗ್ರೆಸ್ ನ ಪ್ರಭಾವಿ ನಾಯಕ, ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಪುತ್ರ ರಾಕೇಶ್ ಸಿದ್ದರಾಮಯ್ಯ ಅವರು ಅಗಲಿದ ನಂತರ ಇನ್ನೊಬ್ಬ ಮಗನಾದ ಯತೀಂದ್ರ ಅವರನ್ನ ರಾಜಕೀಯಕ್ಕೆ ಕರೆತರಲು 2018 ರ ಚುನಾವಣೆಯಲ್ಲಿ ತಮ್ಮ ಸ್ವಕ್ಷೇತ್ರ ವರುಣಾವನ್ನ ಬಿಟ್ಟುಕೊಟ್ಟು ವರುಣಾದಿಂದ ಕಣಕ್ಕಿಳಿಸಿ ಗೆಲುವು ಸಾಧಿಸಿ ಯತೀಂದ್ರ ಸಿದ್ದರಾಮಯ್ಯ ಶಾಸಕರಾದರು.
ಇತ್ತ ಪುತ್ರನಿಗೆ ಕ್ಷೇತ್ರ ಬಿಟ್ಟುಕೊಟ್ಟ ಸಿದ್ದರಾಮಯ್ಯ ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿ ಚಾಮುಂಡೇಶ್ವರಿಯಲ್ಲಿ ಸೋತರೆ, ಬಾದಾಮಿಯಲ್ಲಿ ಕಡಿಮೆ ಅಂತರದಿಂದ ಗೆಲುವು ಕಂಡರು. ಇನ್ನು 2023 ರ ಚುನಾವಣೆಯಲ್ಲಿ ಕೋಲಾರ ಹಾಗೂ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸುವ ಆಸೆಯನ್ನ ಸಿದ್ದರಾಮಯ್ಯ ಅವರು ವ್ಯಕ್ತಪಡಿಸಿದ್ದರು.
ಕೋಲಾರ ಕ್ಷೇತ್ರದಿಂದ ಸ್ಪರ್ಧೆ ನಡೆಸಿದರೇ ಕೋಲಾರ ಕ್ಷೇತ್ರದ ಸುತ್ತಮುತ್ತಾ ಕ್ಷೇತ್ರಗಳಲ್ಲೂ ಸಿದ್ದರಾಮಯ್ಯ ಪರ ಹೆಚ್ಚಾಗಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನ ಗೆಲ್ಲಲು ಸಹಾಯಕವಾಗುತ್ತದೆ ಎಂಬ ಲೆಕ್ಕಾಚಾರ ನಡೆದಿತ್ತು. ಅಲ್ಲದೇ ಕೋಲಾರ ಹಾಗೂ ವರುಣಾ ಈ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದರೆ, ಆಗ ವರುಣಾಕ್ಷೇತ್ರದ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಯತೀಂದ್ರ ಅವರನ್ನು ಕಣಕ್ಕೆ ಇಳಿಸಿ ಯತೀಂದ್ರ ಅವರನ್ನ ಮತ್ತೆ ರಾಜಕೀಯವಾಗಿ ನೆಲೆಗೊಳಿಸಬೇಕು ಎಂಬ ಲೆಕ್ಕಾಚಾರವನ್ನ ಸಿದ್ದರಾಮಯ್ಯ ಅವರು ಹಾಕಿಕೊಂಡಿದ್ದರು.
ಇತ್ತ ಒಬ್ಬರಿಗೆ ಒಂದೇ ಸೀಟ್ ಎಂದು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವನ್ನ ಮಾಡಿದ್ದು, ಮೊದಲ ಪಟ್ಟಿಯಲ್ಲಿ ವರುಣಾ ಕ್ಷೇತ್ರವನ್ನ ನೀಡಿದ್ದ ಹೈಕಮಾಂಡ್ ಎರಡನೇ ಪಟ್ಟಿಯಲ್ಲಿ ಕೋಲಾರ ಕ್ಷೇತ್ರದಿಂದ ಟಿಕೆಟ್ ಸಿಗುತ್ತೆ ಎನ್ನುವ ಆಸೆಯಲ್ಲಿದ್ದ ಸಿದ್ದರಾಮಯ್ಯ ಅವರ ಆಸೆಗೆ ಹೈಕಮಾಂಡ್ ತಣ್ಣೀರೆರಚಿದ್ದು, ಕೋಲಾರದಿಂದ ಕೊತ್ತೂರು ಮಂಜುನಾಥ್ ಗೆ ಹೈಕಮಾಂಡ್ ಟಿಕೆಟ್ ನೀಡಿದೆ.
ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಸ್ವಕ್ಷೇತ್ರ ವರುಣಾವನ್ನ ಬಿಟ್ಟುಕೊಟ್ಟಿದ್ದ ಸಿದ್ದರಾಮಯ್ಯ ಇದೀಗ ತಮ್ಮ ರಾಜಕೀಯಕ್ಕಾಗಿ ಮಗನ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಲು ಸಜ್ಜಾಗಿದ್ದು, ಸಿದ್ದರಾಮಯ್ಯ ಅವರಿಗೆ ಯತೀಂದ್ರ ಅವರ ರಾಜಕೀಯ ಭವಿಷ್ಯದ ಚಿಂತೆಯೇ ದೊಡ್ಡ ಪ್ರಶ್ನೆಯಾಗಿದೆ.












Click it and Unblock the Notifications