ಮನೆ ಮನೆಯ ಮೇಲೂ ಕನ್ನಡ ಬಾವುಟ, ಎಚ್‌ಡಿಕೆಯಿಂದ ಧ್ವಜಾರೋಹಣ
ಬೆಂಗಳೂರು, ಅಕ್ಟೋಬರ್ 31; ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1ರಂದು ಮನೆ, ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಲು ಜೆಡಿಎಸ್ ಪಕ್ಷ ಕರೆ ನೀಡಿದೆ. ಪಕ್ಷದ ಪಂಚರತ್ನ ಅಭಿಯಾನಕ್ಕೆ ಸಹ ಮಂಗಳವಾರ ಚಾಲನೆ ದೊರೆಯಲಿದೆ.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಂಗಳವಾರ ಗಡಿನಾಡು ಕೋಲಾರ ಜಿಲ್ಲೆಯ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ.
ಬಳಿಕ ಪಂಚರತ್ನ ರಥ ಯಾತ್ರೆಗೆ ಚಾಲನೆ ನೀಡುವ ಮುನ್ನ ಸಾಮಾನ್ಯ ಕಾರ್ಯಕರ್ತರೊಬ್ಬರ ಮನೆಯ ಮೇಲೆ ಕನ್ನಡ ಬಾವುಟ ಕಟ್ಟುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬಿಜೆಪಿ 'ಹರ್ ಘರ್ ತಿರಂಗ' ಎಂಬ ಅಭಿಯಾನ ನಡೆಸಿತ್ತು. ಅದೇ ಮಾದರಿಯಲ್ಲಿ ಜೆಡಿಎಸ್ ಪಕ್ಷ ಮನೆ ಮನೆಯಲ್ಲೂ ಕನ್ನಡ ಬಾವುಟ ಎಂಬ ಅಭಿಯಾನ ಆಯೋಜಿಸಿದೆ.

ಎಚ್. ಡಿ. ಕುಮಾರಸ್ವಾಮಿ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಬೆಳಗ್ಗೆ 7 ಗಂಟೆಗೆ ಕನ್ನಡ ಧ್ವಜಾರೋಹಣ ಮಾಡುವರು. ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಉಪಸ್ಥಿತರಿರುವರು.
ರಾಜ್ಯದ ಪ್ರತಿ ಮನೆಯ ಮೇಲೂ ಕನ್ನಡದ ಬಾವುಟ ಹಾರಿಸಲು ಕನ್ನಡಿಗರಲ್ಲಿ ಮನವಿ ಮಾಡಿರುವ ಎಚ್. ಡಿ. ಕುಮಾರಸ್ವಾಮಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಬಾವುಟವನ್ನು ಮನೆಯ ಮೇಲೆ ಹಾರಿಸುವ ಅಭಿಯಾನವನ್ನು ಹಮ್ಮಿಕೊಳ್ಳುವಂತೆ ಅವರು ಸೂಚನೆ ನೀಡಿದ್ದಾರೆ.
ನವೆಂಬರ್ ೧ ರಂದು ಆರಂಭವಾಗಲಿರುವ ಹೆಚ್.ಡಿ. ಕುಮಾರಸ್ವಾಮಿಯವರ ಮಹತ್ವಕಾಂಕ್ಷೆಯ ಪಂಚರತ್ನ ರಥಯಾತ್ರೆಯು ಮುಳುಬಾಗಿಲು ವಿಧಾಸಭಾ ಕ್ಷೇತ್ರದಲ್ಲಿ ಸಾಗುವ ಮಾರ್ಗ. pic.twitter.com/jRqsylIJh9
— Janata Dal Secular (@JanataDal_S) October 31, 2022
ಕನ್ನಡ ಬಾವುಟದ ಅಭಿಯಾನದಲ್ಲಿ ಪಕ್ಷದ ಎಲ್ಲಾ ನಾಯಕರು, ಮುಖಂಡರು, ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಪಕ್ಷದ ಪದಾಧಿಕಾರಿಗಳು, ಶಾಸಕರು, ತಮ್ಮ ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕನ್ನಡ ಬಾವುಟಗಳ ಮೆರವಣಿಗೆ ಹಾಗೂ ವಿತರಣೆಯ ಅಭಿಯಾನವನ್ನು ನಡೆಸಿದ್ದಾರೆ.

ನವೆಂಬರ್ 1ರಂದು ನಮ್ಮ ಪಕ್ಷದ ವತಿಯಿಂದ ಮನೆ ಮನೆ ಮೇಲೆ ಕನ್ನಡ ಬಾವುಟ ಹಾರಿಸುವ ಸಂಕಲ್ಪ ಮಾಡಿದ್ದೇವೆ. ರಾಜ್ಯದ ಜನರು ಇದರಲ್ಲಿ ಭಾಗವಹಿಸಬೇಕೆಂದು ಕುಮಾರಸ್ವಾಮಿ ಕರೆ ನೀಡಿದ್ದಾರೆ.
ಜೆಡಿಎಸ್ ಪಕ್ಷ ಈಗಾಗಲೇ ಹಲವು ಕನ್ನಡ ಪರ ಅಭಿಯಾನದ ಮೂಲಕ ಜನರನ್ನು ತಲುಪುತ್ತಿದೆ. ಕನ್ನಡ ನಾಡು, ನುಡಿ, ನೆಲ, ಜಲದ ವಿಚಾರದಲ್ಲಿ ಧ್ವನಿ ಎತ್ತುತ್ತಿದೆ.
ಪಂಚರತ್ನ ಯಾತ್ರೆ; ಜೆಡಿಎಸ್ ಪಕ್ಷದ ಬಹುನಿರೀಕ್ಷಿತ ಪಂಚರತ್ನಯಾತ್ರೆಗೆ ಸಹ ಮಂಗಳವಾರ ಚಾಲನೆ ದೊರೆಯಲಿದೆ. ಪಂಚರತ್ನ ರಥಯಾತ್ರೆಗೆ ಸಾಂಕೇತಿಕವಾಗಿ ಈಗಾಗಲೇ ಚಾಲನೆ ನೀಡಲಾಗಿದೆ. ಮಂಗಳವಾರ ರಥಗಳು ಹೊರಡಲಿವೆ. ಪಂಚರತ್ನ ರಥಯಾತ್ರೆ ಮೂಲಕ ಎಚ್. ಡಿ. ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ರೂಪಿಸುವ ಕಾರ್ಯಕ್ರಮಗಳ ಕುರಿತು ಜನರಿಗೆ ಮಾಹಿತಿ ನೀಡಲಿದ್ದಾರೆ.
ಪಂಚರತ್ನ ರಥಯಾತ್ರೆ ಎಂದರೆ...
1. ಶಿಕ್ಷಣವೇ ಆಧುನಿಕ ಶಕ್ತಿ; ಉತ್ತಮ ಗುಣಮಟ್ಟದ ಹಾಗೂ ವ್ಯವಸ್ಥಿತ ಶಿಕ್ಷಣವನ್ನು ಉಚಿತವಾಗಿ ನೀಡುವ ಯೋಜನೆ.
2. ಆರೋಗ್ಯ ಸಂಪತ್ತು; ಪ್ರತಿಯೊಂದು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ 24*7 ಕಾರ್ಯ ನಿರ್ವಹಣೆ ಮಾಡುವ ಸುಸಜ್ಜಿತ ಹೈ-ಟೆಕ್ ಆಸ್ಪತ್ರೆ ನಿರ್ಮಾಣ.
3. ರೈತ ಚೈತನ್ಯ; ಆಧುನಿಕ ತಂತ್ರಜ್ಞಾನದ ಕೃಷಿ ಪದ್ಧತಿ ಅಳವಡಿಕೆ, ಸರಿಯಾದ ಬೆಳೆ ಶೇಖರಣಾ ವ್ಯವಸ್ಥೆ ಹಾಗೂ ಲಾಭದಾಯಕವಾದ ಮಾರುಕಟ್ಟೆ ವ್ಯವಸ್ಥೆ.
4. ಯುವ ನವ ಮಾರ್ಗ ಹಾಗೂ ಮಹಿಳಾ ಸಬಲೀಕರಣ; ಯುವಜನತೆ ಹಾಗೂ ಮಹಿಳೆಯರಿಗೆ ಉದ್ಯೋಗ ಪಡೆಯಲು ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ.
5. ವಸತಿಯ ಆಸರೆ; ವಸತಿ ಇಲ್ಲದವರಿಗೆ ಸರ್ಕಾರದಿಂದಲೇ ವಸತಿ ಕಟ್ಟಿಕೊಡುವ ಯೋಜನೆ












Click it and Unblock the Notifications