Lok Sabha Election 2024: ರಾಜ್ಯದ ಸಿವೋಟರ್ ಸರ್ವೇ ಬಗ್ಗೆ ಎಚ್‌ಡಿಕೆ ಗಂಭೀರ ಹೇಳಿಕೆ
ಮುಂದಿನ ವರ್ಷದ ಮೇ ತಿಂಗಳೊಳಗೆ ನಡೆಯಬೇಕಾಗಿರುವ ಲೋಕಸಭಾ ಚುನಾವಣೆಯಲ್ಲಿ ಈಗ ಚುನಾವಣೆ ನಡೆದರೆ ಯಾವ ಪಕ್ಷದ ಪರ ಜನರ ಒಲವು ಎನ್ನುವ ಸಮೀಕ್ಷೆಯನ್ನು ಹಲವು ಸಂಸ್ಥೆಗಳು ನಡೆಸಿವೆ. ಕೆಲವು ಸಮೀಕ್ಷೆಗಳಲ್ಲಿ ಮತ್ತೆ ಮೋದಿ ಎಂದು ಹೇಳಿದರೆ, ಇನ್ನೊಂದು ಸಮೀಕ್ಷೆ ಅತಂತ್ರ ಎಂದಿದೆ.
ಈ ಸಮೀಕ್ಷೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಹಾಸನದಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಿದೆ ಎನ್ನುವ ಸುದ್ದಿಯ ನಡುವೆ ಕುಮಾರಸ್ವಾಮಿಯವರ ಈ ಹೇಳಿಕೆ ಮಹತ್ವನ್ನು ಪಡೆದುಕೊಂಡಿದೆ.

"ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಎಲ್ಲಾ 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸುತ್ತದೆ, ಈ ಬಗ್ಗೆ ಅನುಮಾನ ಬೇಡ. ಎಲ್ಲಾ 28 ಕ್ಷೇತ್ರಗಳಲ್ಲಿ ನಾವೇ ಗೆದ್ದು ಬಿಡುತ್ತೇವೆ ಎನ್ನುವ ಉಡಾಫೆಯ ಮಾತನ್ನು ನಾನು ಆಡುವುದಿಲ್ಲ"ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನಾವು ನಾಲ್ಕೈದು ಸ್ಥಾನ ಗೆಲ್ಲುವ ಅವಕಾಶವಿದೆ. ಮುಂದಿನ ದಿನಗಳಲ್ಲೂ ನಮ್ಮ ಪಕ್ಷದ ಕಾರ್ಯಕರ್ತರನ್ನು ನಾನು ಉಳಿಸಬೇಕು. ಕಾರ್ಯಕರ್ತರನ್ನು ಉಳಿಸಿಕೊಳ್ಳಲು, ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ನಾವು ನಮ್ಮ ಪಕ್ಷದ ಕಾರ್ಯಕರ್ತರ ದುಡಿಮೆಗೆ ಯಾವುದೇ ರೀತಿಯ ಸಮಸ್ಯೆಗಳು ಉದ್ಭವವಾಗಬಾರದು. ಆ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳುತ್ತಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.
ಸಿ ವೋಟರ್ ಸೇರಿ ಹಲವಾರು ಸರ್ವೇ ರಿಪೋರ್ಟ್
"ನಾವಂತೂ ಯಾರ ಹತ್ತಿರವೂ ಮೈತ್ರಿ ಚರ್ಚೆಗೆ ಹೋಗಿಲ್ಲ. ಇದು ಹೊರಗಡೆ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಯಷ್ಟೇ. ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಸಿ ವೋಟರ್ ಸೇರಿ ಹಲವಾರು ಸರ್ವೇ ರಿಪೋರ್ಟ್‌ಗಳು ಆಗಲೇ ಬರುತ್ತಿವೆ. ಬಿಜೆಪಿಯವರು 24-25 ಗೆಲ್ಲುತ್ತಾರೆ, ಕಾಂಗ್ರೆಸ್ 5 ಸೀಟು ಗೆಲ್ಲುತ್ತದೆ ಎಂದು ಸಮೀಕ್ಷೆಗಳು ಬರುತ್ತಿವೆ. ಹೀಗಿರುವಾಗ ಬಿಜೆಪಿಯವರಿಗೆ ನಮ್ಮ ಜತೆ ಹೊಂದಾಣಿಕೆ ಅವಶ್ಯಕತೆ ಏನಿದೆ" ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬಿಜೆಪಿಗೆ ನಮ್ಮ ಅವಶ್ಯಕತೆ ಇಲ್ಲವಲ್ಲ
ಅವರೇ (ಬಿಜೆಪಿ) ಸ್ವತಂತ್ರವಾಗಿ 24-25 ಸೀಟ್ ಗೆಲ್ಲುವುದಾದರೆ ಬಿಜೆಪಿಗೆ ನಮ್ಮ ಅವಶ್ಯಕತೆ ಇಲ್ಲವಲ್ಲ. ಇನ್ನು, ಕಾಂಗ್ರೆಸ್ ನವರಿಗೆ ನಮ್ಮ ಅವಶ್ಯಕತೆ ಇಲ್ಲವೇ ಇಲ್ಲ ಬಿಡಿ. ಅವರೂ ಇಪ್ಪತ್ತು ಸೀಟು ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಹೀಗಾಗಿ ಯಾರ ಜತೆಯೂ ಮೈತ್ರಿಯ ವಿಚಾರ ನಮ್ಮ ಮುಂದೆ ಇಲ್ಲ. ಈಗ ಹರಿದಾಡುತ್ತಿರುವ ಸುದ್ದಿಗಳು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಎಂದು ಕುಮಾರಸ್ವಾಮಿ ಸ್ಪಷ್ಟ ಪಡಿಸಿದರು.
ಎರಡೂ ಪಕ್ಷಗಳು ದೊಡ್ಡದಾಗಿ ಬೆಳೆದಿವೆ
ಎರಡೂ ಪಕ್ಷಗಳು ದೊಡ್ಡದಾಗಿ ಬೆಳೆದಿವೆ, ಆರ್ಥಿವಾಗಿ ಬಲಿಷ್ಠವಾಗಿವೆ. ನಾವು ಕಾರ್ಯಕರ್ತರ ಪಡೆಯೊಂದಿಗೆ ಯಾವ ರೀತಿ ಹೋಗಬೇಕು, ಯಾವ ರೀತಿ ಸಂಘಟನೆ ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ. ಈಗಾಗಲೇ ಪಕ್ಷದ ಹೊಸ ಕೋರ್ ಕಮಿಟಿ ರಚನೆ ಮಾಡಿದ್ದೇವೆ. ಶೀಘ್ರವೇ ಜನಪರ ವಿಷಗಳನ್ನು ಇಟ್ಟುಕೊಂಡು ರಾಜ್ಯದ ಪ್ರವಾಸ ಮಾಡುತ್ತೇವೆ ಎಂದು ಕುಮಾರಸ್ವಾಮಿ ಮಾಧ್ಯಮದವರಿಗೆ ಹೇಳಿದರು.
ಚಂದ್ರಯಾನ ವಿಷಯದಲ್ಲಿ ರಾಜಕೀಯ
ಚಂದ್ರಯಾನ ವಿಷಯದಲ್ಲಿ ಕೇಂದ್ರ ಸರಕಾರಕ್ಕಿಂತ ಮೊದಲೇ ಕರ್ನಾಟಕ ಸರಕಾರದ ದೊಡ್ಡ ಜಾಹೀರಾತು ಬಂತು. ಈಗ ಪೈಪೋಟಿ ಮೇಲೆ ಕೇಂದ್ರ ಸರಕಾರದಿಂದಲೂ ಜಾಹೀರಾತು ಬರುತ್ತದೆ. ವಿಜ್ಞಾನಿಗಳ ಪರಿಶ್ರಮದ ದಾಖಲೆ ಎನ್ನುವುದೇನಿದೆ, ಅದಕ್ಕೂ ಮೈಲೇಜ್ ತೆಗೆದುಕೊಳ್ಳಲು ಪೈಪೋಟಿ ನಡೆದಿದೆ. ಇದಕ್ಕೂ ನಿಜಕ್ಕೂ ಬೇಸರದ ಸಂಗತಿ ಎಂದು ಕುಮಾರಸ್ವಾಮಿ ಅವರು ಹೇಳಿದರು.












Click it and Unblock the Notifications