ಹನುಮಭಕ್ತ ಯುವಕರ ಮೇಲೆ ಲಾಠಿಚಾರ್ಜ್: ಮಾಜಿ ಸಿಎಂ ಆಕ್ರೋಶ
ಬೆಂಗಳೂರು, ಜನವರಿ29: ಮಂಡ್ಯದ ಕೆರಗೋಡುನಲ್ಲಿ ಹನುಮಧ್ವಜದ ವಿಷಯದಲ್ಲಿ ಪೊಲೀಸರು, ರಾಜ್ಯ ಕಾಂಗ್ರೆಸ್ ಸರಕಾರದ ವರ್ತನೆ ಅಕ್ಷಮ್ಯ. ಕಾರ್ಯಕ್ರಮಕ್ಕೆ ಶಾಸಕರನ್ನು ಕರೆಯಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಮಂಡ್ಯದ ಕೆರಗೋಡು ಗ್ರಾಮದ ಯುವಕರ ಮೇಲೆ ದಬ್ಬಾಳಿಕೆ ನಡೆಸಿ ಲಾಠಿಚಾರ್ಜ್ ಮಾಡಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ.
ಈ ಕುರಿತು ಭಾನುವಾರ ಮಾಧ್ಯಮ ಹೇಳೀಕೆ ಬಿಡುಗಡೆ ಮಾಡಿರುವ ಕುಮಾರಸ್ವಾಮಿ, ಕೆರಗೋಡು ಗ್ರಾಮದಲ್ಲಿ ಏನೆಲ್ಲಾ ಧ್ವಂಸ ಮಾಡಲಾಗಿಯೋ ಅದೆಲ್ಲಾ ಯಥಾಸ್ಥಿತಿಗೆ ಬರಬೇಕು. ನಾನು ಕೆರಗೋಡು ಗ್ರಾಮದ ಯುವಕರ ಜತೆ ಇದ್ದೇನೆ ಎಂದು ಘೋಷಣೆ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ʼನ ಕಣಕಣದಲ್ಲೂ ಜನದ್ವೇಷವೇ ತುಂಬಿದೆ. ಆ ಮನಃಸ್ಥಿತಿಯನ್ನು ಮತ್ತೆಮತ್ತೆ ರುಜುವಾತು ಮಾಡುತ್ತಿದೆ. ಮುಗ್ಧ ಯುವಕರ ಮೇಲೆ ಲಾಠಿಚಾರ್ಜ್ ಮಾಡುವವರೆಗೂ ಆ ದ್ವೇಷ ಬಂದು ನಿಂತಿದೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.

ಕೆರಗೋಡುನಲ್ಲಿ ಯುವಕರು ತಾವೇ ಹಣ ಸಂಗ್ರಹಿಸಿ ಭಕ್ತಿಯಿಂದ ಸ್ಥಾಪಿಸಿದ ಹನುಮ ಧ್ವಜಸ್ತಂಭ ಧ್ವಂಸ ಮಾಡಿ ಧ್ವಜ ಇಳಿಸಿದ್ದು, ಪ್ರಶ್ನಿಸಿದ ಹನುಮಭಕ್ತ ಯುವಕರ ಮೇಲೆ ಲಾಠಿಚಾರ್ಜ್ ಮಾಡಿರುವ ಪೊಲೀಸರ ವರ್ತನೆ ಅತಿರೇಖದ್ದು. ಲಾಠಿಚಾರ್ಜ್ ಮಾಡಲು ಇವರಿಗೆ ಆದೇಶಿಸಿದ ಆ ಪ್ರಭೃತಿ ಯಾರು? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಯುವಕರು ಪಂಚಾಯಿತಿ ಅನುಮತಿ ಪಡೆದೇ ದ್ವಜಸ್ತಂಭ ನಿರ್ಮಿಸಿದ್ದಾರೆ. ಧೈರ್ಯ, ಸಾಹಸ, ನಂಬಿಕೆ, ನಿಷ್ಠೆ, ಭಕ್ತಿಯ ಪ್ರತೀಕನಾದ ಹನುಮ ದೇವರು ಯುವಕರ ಆದರ್ಶ. ಹಳ್ಳಿಗರ ಭಾವನೆಗಳನ್ನು ಗೌರವಿಸದಷ್ಟು ಅಸಹಿಷ್ಣುತೆಯ ಉರಿಯಲ್ಲಿ ಸರಕಾರ ಬೇಯುತ್ತಿದೆ. ಶಾಸಕರನ್ನು ಕರೆಯಲಿಲ್ಲ ಎನ್ನುವ ಕಾರಣಕ್ಕೆ ಇಷ್ಟೆಲ್ಲಾ ಮಾಡಬೇಕೆ? ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ ಹನುಮ ಜನ್ಮಸ್ಥಳ. ನನ್ನ ಹೆಸರಿನಲ್ಲೂ ರಾಮನಿದ್ದಾನೆ ಎಂದು ಹುಸಿಭಕ್ತಿಯ ಢೋಂಗಿಗಳಿಗೆ ಹನುಮಭಕ್ತಿ ಅರ್ಥವಾಗುವುದೇ? ವೋಟಿಗಾಗಿ, ಅಧಿಕಾರಕ್ಕಾಗಿ ಜಾತಿ-ಧರ್ಮಗಳನ್ನು ಒಡೆದು ದೇವರನ್ನೂ ರಾಜಕಾರಣಕ್ಕೆ ಎಳೆದು ತರುತ್ತಿರುವುದು, ಓಲೈಕೆ ರಾಜಕಾರಣದ ವಿಕೃತಿ ಎಂದು ಅವರು ಕಿಡಿಕಾರಿದ್ದಾರೆ.

ಪೊಲೀಸರು ಹನುಮ ಭಕ್ತರ ಮೇಲೆ ಲಾಠಿಚಾರ್ಜ್ ಮಾಡಿದ್ದು, ಏಕಪಕ್ಷೀಯವಾಗಿ ಹನುಮಧ್ವಜ ತೆರವು ಮಾಡಿದ್ದು ತಪ್ಪು. ಕೂಡಲೇ ಅಲ್ಲಿ ಎಲ್ಲವೂ ಯಥಾಸ್ಥಿತಿಗೆ ಬರಲೇಬೇಕು. ಗ್ರಾಮದಲ್ಲಿ ನಿಷೇಧಾಜ್ಞೆ ವಿಧಿಸಿ ಭಯಭೀತಿ ಉಂಟು ಮಾಡುವ ಅಗತ್ಯ ಇರಲೇ ಇಲ್ಲ. ಕೆರಗೋಡಿನ ಎಲ್ಲಾ ಸಮುದಾಯದ ಜನರೂ ಹನುಮಧ್ವಜ ಸ್ಥಾಪನೆಗೆ ಬೆಂಬಲ ಸೂಚಿಸಿದ್ದರೂ, ಓಲೈಕೆ ಕಾಂಗ್ರೆಸ್ ಸರಕಾರ ಹನುಮ ವಿರೋಧಿ ಕೆಲಸ ಮಾಡಿದೆ. ತನ್ನ ಹಳೆಚಾಳಿಯನ್ನು ಕಾಂಗ್ರೆಸ್ ಬದಲಿಸಿಕೊಳ್ಳದಿದ್ದರೆ ಈ ಸರಕಾರದ ವಿರುದ್ಧ ಇಡೀ ರಾಜ್ಯವೇ ದಂಗೆ ಏಳಬೇಕಾಗುತ್ತದೆ. ನಾನು ಕರೆಗೋಡಿನ ಯುವಕರ ಜತೆ ಇದ್ದೇನೆ, ಇರುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.












Click it and Unblock the Notifications