ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧೆ; ಯಾವ ಕ್ಷೇತ್ರದಿಂದ ಕಣಕ್ಕೆ?
ಬೆಂಗಳೂರು, ಜನವರಿ 11: ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಜೆಡಿಎಸ್ ಬರುವ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹಳೇ ಮೈಸೂರು ಭಾಗದಿಂದ ಕಣಕ್ಕಿಳಿಸುವ ಕುರಿತು ದ್ದಿಲ್ಲದೆ ತಯಾರಿ ನಡೆಯುತ್ತಿದೆ.
ಹೌದು, ದಿನದಿಂದ ದಿನಕ್ಕೆ ಹಳೇ ಮೈಸೂರು ಭಾಗದಲ್ಲಿ ದಳಪತಿಗಳ ವರ್ಚಸ್ಸು ಕಡಿಮೆಯಾಗುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಹಳೇ ಮೈಸೂರು ಸೇರಿದಂತೆ ಇತರೆ ಭಾಗದಲ್ಲೂ ಜೆಡಿಎಸ್ ಸಂಘಟನೆಯನ್ನ ಬಲ ಪಡಿಸಬೇಕು ಹಾಗೂ ಆಡಳಿತರೂಢ ಕಾಂಗ್ರೆಸ್ ನಾಯಕರಿಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ನಡೆಸಿದ್ದಾರೆ. ಅದರಂತೆ ಮಂಡ್ಯದಲ್ಲಿ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿದರೆ ಅದರ ಪ್ರಭಾವ ಹಳೇ ಮೈಸೂರು ಭಾಗದಲ್ಲಿ ಹೆಚ್ಚಾಗಬಹುದು ಎಂದು ಚರ್ಚೆ ನಡೆಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಹೆಚ್ ಡಿ ಕುಮಾರಸ್ವಾಮಿ ಅವರನ್ನ ಮಂಡ್ಯದಿಂದ ಕಣಕ್ಕಿಳಿಸುವುದರಿಂದ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಸಾಧ್ಯವಾಗಬಹುದು ಎಂಬ ಲೆಕ್ಕಾಚಾರ ಜೆಡಿಎಸ್ ಮುಖಂಡರು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನೂ ಮಂಡ್ಯದಲ್ಲಿ ಸ್ಪರ್ಧೆ ಹಾಗೂ ಬಿಜೆಪಿಯಿಂದ ಸಿಗುವ ಕ್ಷೇತ್ರಗಳಲ್ಲಿ ಯಾರನ್ನ ಅಭ್ಯರ್ಥಿಗಳಾಗಿ ಆಯ್ಕೆ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಚಿಕ್ಕಮಗಳೂರಿನ ಮಲ್ಲೇನಹಳ್ಳಿಯಲ್ಲಿರುವ ಹನಿ ಡ್ಯೂ ರೆಸಾರ್ಟ್‌ನಲ್ಲಿ ಹಳೇ ಮೈಸೂರು ಭಾಗದ ಜೆಡಿಎಸ್ ಮುಖಂಡರು ಸಭೆ ಸೇರಿ ಗಂಭೀರ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ರೆಸಾರ್ಟ್ ನಲ್ಲಿ ಮಂಗಳವಾರ ರಾತ್ರಿ ಮಂಡ್ಯದ ಮಾಜಿ ಸಂಸದ ಪುಟ್ಟರಾಜು ಸೇರಿ ಹಲವು ನಾಯಕರು ಜತೆಗಿದ್ದರು. ಬುಧವಾರ ಬೆಳಗ್ಗೆ ಮಾಜಿ ಶಾಸಕ ಸಾ.ರಾ.ಮಹೇಶ್, ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಬಾಲಕೃಷ್ಣ ಅವರ ಜೊತೆಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಈಗಾಗಲೇ ಕುಮಾರಸ್ವಾಮಿ ಸ್ಪರ್ಧೆಗೂ ಸಹ ಸಾಕಷ್ಟು ಒತ್ತಡಗಳು ಕೇಳಿ ಬಂದಿದ್ದು, ಬಿಜೆಪಿಯಿಂದ ಸಿಗುವ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ ಎಂದು ಎಂಎಲ್ಸಿ ಎಸ್.ಎಲ್.ಭೋಜೇಗೌಡ ಕೂಡ ಸುಳಿವು ನೀಡಿದ್ದಾರೆ. ಮಂಡ್ಯ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಮೂರೂ ಕ್ಷೇತ್ರಗಳಲ್ಲಿ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಕುಮಾರಸ್ವಾಮಿ ಸ್ಪರ್ಧೆಗೆ ದುಂಬಾಲು ಬಿದ್ದಿದ್ದಾರೆ ಎಂದು ಹೇಳಿದ್ದಾರೆ.
ಇತ್ತ ಮುಂದಿನ ಲೋಕಸಭಾ ಚುಣಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕುಮಾರಸ್ವಾಮಿ ಮೈತ್ರಿಯಿಂದ ಸಿಗುವ ನಾಲ್ಕು ಕ್ಷೇತ್ರವನ್ನ ಗೆಲ್ಲುವ ನಿಟ್ಟಿನಲ್ಲಿ ತಂತ್ರಗಾರಿಕೆಯನ್ನ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಿಜೆಪಿಯ ಹಲವು ನಾಯಕರು ಹಾಗೂ ಹಾಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಆಪ್ತರ ಜೊತೆಗೆ ಕುಮಾರಸ್ವಾಮಿ ಸ್ಪರ್ಧೆ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಬೆಂಗಳೂರು ಗ್ರಾಮಾಂತರ , ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಸ್ಪರ್ಧೆ ಕುರಿತು ಸರ್ವೆ ನಡೆಸಲಿದ್ದಾರೆ ಎನ್ನಲಾಗಿದೆ.
ಮಂಡ್ಯ ಕ್ಷೇತ್ರವನ್ನ ಮತ್ತೆ ಮರಳಿ ಪಡೆಯುವ ದೃಷ್ಟಿಯಿಂದಾಗಿ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ರೆ ಮೈತ್ರಿ ಅಭ್ಯರ್ಥಿಗಳಿಗೂ ಹೆಚ್ಚು ಬಲ ಬರಲಿದೆ ಎಂದು ಬಿಜೆಪಿ ನಾಯಕರು ಚರ್ಚೆ ನಡೆಸಿದ್ದಾರೆ. ಕುಮಾರಸ್ವಾಮಿ ಸ್ಪರ್ಧೆಗೂ ಬಿಜೆಪಿ ಹೈ ಕಮಾಂಡ್ ಸಹ ಒಲವು ತೋರಿದೆ ಎನ್ನಲಾಗಿದೆ.












Click it and Unblock the Notifications