ಬಜೆಟ್‌ನಲ್ಲಿ ಜಾರಿಯಾಗದ 7ನೇ ವೇತನ ಅಯೋಗ ಶಿಫಾರಸು: ಯಡಿಯೂರಪ್ಪ ಹೇಳಿದ್ದೇನು?
ಬೆಂಗಳೂರು, ಮಾ.4: ಇಂದು ತಮ್ಮ ಮೊದಲ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರ ನಿರೀಕ್ಷೆಗಳಿಗೆ ತಕ್ಕಂತೆ ತಕ್ಕಂತೆ, ರಾಜ್ಯದ ಪ್ರಗತಿ, ಸ್ವಾವಲಂಬನೆಗೆ ಒತ್ತು ನೀಡುವ ಜೊತೆಗೆ ನವಕರ್ನಾಟಕ ನಿರ್ಮಾಣದ ಪರಿಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹೊಸಚೈತನ್ಯ ಮತ್ತು ಶಕ್ತಿ ನೀಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಣ್ಣಿಸಿದ್ದಾರೆ.
ಸಾಂಕ್ರಾಮಿಕದ ಸವಾಲುಗಳ ನಿರ್ವಹಣೆಯ ನಡುವೆ ಈ ಬಜೆಟ್ ಅತ್ಯಂತ ಆಶಾದಾಯಕವಾಗಿದೆ. ರೈತರು, ನೀರಾವರಿ, ಮೂಲಸೌಕರ್ಯ, ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಠಿ, ಅಧಿಕ ಹೂಡಿಕೆಗೆ ಆದ್ಯತೆಯ ಜೊತೆಗೆ ಯುವಶಕ್ತಿ, ಮಹಿಳೆಯರು ಮತ್ತು ದುರ್ಬಲ ವರ್ಗಗಳ ಜನರ ಸಬಲೀಕರಣಕ್ಕೆ ಉತ್ತೇಜನ ನೀಡಲಾಗಿದೆ. ಕೃಷಿ, ಪೂರಕ ವಲಯಗಳಿಗೆ 33,700 ಕೋಟಿ ರೂ ಮೀಸಲು ಇಡಲಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ 43,188 ಕೋಟಿ ರೂ, ಬೆಂಗಳೂರು ಸಮಗ್ರ ಅಭಿವೃದ್ಧಿಗೆ 8,409 ಕೋಟಿ ರೂ ನಿಗದಿಪಡಿಸಿರುವುದು ಸ್ವಾಗತಾರ್ಹ. ಸರ್ವರಿಗೂ ಸಮಪಾಲು, ಸಮಬಾಳು, ಸಾಮಾಜಿಕ ನ್ಯಾಯ, ಅಂತ್ಯೋದಯದ ನಮ್ಮ ಬದ್ಧತೆಗೆ ಅನುಗುಣವಾಗಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸುವ ಸರ್ವಸ್ಪರ್ಶಿ ಬಜೆಟ್ ಇದಾಗಿದೆ ಎಂದು ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಜೆಟ್ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರನ್ನು, ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಅಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಿರಿ. ಆದರೆ, ಬಜೆಟ್‌ನಲ್ಲಿ ಜಾರಿ ಮಾಡಿಲ್ಲ ಎಂಬ ಪ್ರಶ್ನೆ ಎದುರಾಯಿತು.
'ನನ್ನ ಬೇಡಿಕೆಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ ನಿಜ. ಅದರೆ, ಬಜೆಟ್ ಮೇಲೆ ಉತ್ತರ ಕೊಡುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಇದನ್ನು ಜಾರಿ ಮಾಡಿಯೇ ಮಾಡುತ್ತಾರೆ. ಇದು ಶತಃ ಸಿದ್ಧ' ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications