ವರ್ಗಾವಣೆಯೊಂದೇ ಸರ್ಕಾರದ ಅಜೆಂಡಾ: ನಿವೃತ್ತ ಐಎಎಸ್ ಅಧಿಕಾರಿ ರತ್ನಪ್ರಭಾ ಟೀಕೆ
ಬೆಂಗಳೂರು, ಜುಲೈ 17: ರಾಜ್ಯ ಸಮ್ಮಿಶ್ರ ಸರ್ಕಾರದ ಬಿಕ್ಕಟ್ಟಿನ ನಡುವೆಯೂ ಇಲಾಖೆಗಳ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವುದಕ್ಕೆ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೊಡ್ಡಮಟ್ಟದಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ವರ್ಗಾವಣೆಯೇ ಸರ್ಕಾರದ ಏಕೈಕ ಉದ್ದೇಶವೇ ಎಂದು ನಿವೃತ್ತ ಐಎಎಸ್ ಅಧಿಕಾರಿ ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.
'ವಿಶೇಷವಾಗಿ ಕೆಲವು ದಿನಗಳಿಂದ ವರ್ಗಾವಣೆಯ ದೊಡ್ಡ ಪಟ್ಟಿಯನ್ನೇ ನೋಡುತ್ತಿದ್ದೇನೆ. ಇಂದೂ ಕೂಡ ಸುಮಾರು 150 ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಗಳೇ ಸರ್ಕಾರದ ಏಕೈಕ ಅಜೆಂಡಾವಾಗಿದೆಯೇ ಎಂಬ ಅಚ್ಚರಿ ಮೂಡುತ್ತಿದೆ' ಎಂದು ರತ್ನಪ್ರಭಾ ಅವರು ಟ್ವೀಟ್ ಮಾಡಿದ್ದಾರೆ.

2018ರ ಜೂನ್‌ನಲ್ಲಿ ಸರ್ಕಾರಿ ಹುದ್ದೆಯಿಂದ ನಿವೃತ್ತರಾಗಿದ್ದ ಕೆ. ರತ್ನಪ್ರಭಾ ಅವರು ಏಪ್ರಿಲ್ 4ರಂದು ಬಿಜೆಪಿ ಸೇರ್ಪಡೆಯಾಗಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಉಮೇಶ್ ಜಾಧವ್ ಅವರ ಪರ ಪ್ರಚಾರ ನಡೆಸಿದ್ದರು.
ಅವರು ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿ ಅವರ ನಿವೃತ್ತಿ ಸಂದರ್ಭದಿಂದಲೂ ಹರಡಿತ್ತು. ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಟಿಕೆಟ್ ನೀಡಲಿದೆ ಎನ್ನಲಾಗಿತ್ತು. ನಿವೃತ್ತಿ ಬಳಿಕ ಜನರ ಸೇವೆ ಮಾಡಲು ರಾಜಕೀಯವೇ ಉತ್ತಮ ಮಾರ್ಗ ಎಂದು ಅಂದುಕೊಂಡಿದ್ದಾಗಿ ಅವರು ಬಿಜೆಪಿ ಸೇರಿದ ಬಳಿಕ ತಿಳಿಸಿದ್ದರು.












Click it and Unblock the Notifications