ಸಾಲ ಮರುಪಾವತಿಗೆ ಒತ್ತಾಯ ಆತ್ಮಹತ್ಯೆಗೆ ಪ್ರಚೋದನೆಯಾಗದು
ಬೆಂಗಳೂರು, ಅಕ್ಟೋಬರ್ 01; ಸಾಲ ಮರುಪಾವತಿ ಮಾಡಬೇಕೆಂದು ಒತ್ತಾಯಪಡಿಸುವುದು ಅಥವಾ ಬಲವಂತಪಡಿಸುವುದು ಆತ್ಮಹತ್ಯೆಗೆ ಪ್ರಚೋದನೆಯಾಗದು. ಹೀಗೆಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಇದೇ ಬಗೆಯ ಆರೋಪದ ಮೇಲೆ ಮಹಿಳೆಯೊಬ್ಬರಿಗೆ ವಿಧಿಸಲಾಗಿದ್ದ ಜೈಲು ಶಿಕ್ಷೆಯನ್ನು ರದ್ದುಗೊಳಿಸಿದೆ.
ಬೆಂಗಳೂರಿನ ಬನ್ನೇರುಘಟ್ಟದಲ್ಲಿ ನಡೆದ ಪ್ರಕರಣವೊಂದರಲ್ಲಿ ವಿಚಾರಣಾ ನ್ಯಾಯಾಲಯ 7 ವರ್ಷದ ಜೈಲು ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಮಂಗಳಗೌರಿ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ. ಮೇಲ್ಮನವಿ ಪುರಸ್ಕರಿಸಿರುವ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿದೆ.

'ಮೃತ ರಾಜುಗೆ ಆತ್ಮಹತ್ಯೆ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದಲೇ ಅರ್ಜಿದಾರರಾದ ಮಂಗಳ ಗೌರಿ ಪ್ರಚೋದನೆ ನೀಡಿದರೆಂಬುದನ್ನು ಸಾಬೀತುಪಡಿಸಲು ಯಾವುದೇ ಅಂಶಗಳಿಲ್ಲ. ಜತೆಗೆ ಯಾವುದೇ ಆಯಾಮದಿಂದ ನೋಡಿದರೂ ಸಹ ಆರೋಪಿ ಸಾಲಮರುಪಾವತಿ ಮಾಡದಿದ್ದರೆ ಜೀವ ತೆಗೆಯುತ್ತೇನೆಂದು ಬೆದರಿಕೆ ಹಾಕಿರುವುದು ಪ್ರಚೋದನೆ ನೀಡಿದಂತಾಗದು' ಎಂದು ನ್ಯಾಯಾಲಯ ಹೇಳಿದೆ.
ಉದ್ದೇಶ ಪೂರ್ವಕವಲ್ಲ: ಸಾಕ್ಷ್ಯಗಳನ್ನು ಪರಿಶೀಲಿಸಿದ ಹೈಕೋರ್ಟ್, ಅರ್ಜಿದಾರರಿಂದ ರಾಜು ಸಾಲ ಪಡೆದಿದ್ದರು. ಅವರು ಮರುಪಾವತಿ ಮಡುವಂತೆ ಕೇಳಿದ್ದರು. ಆದರೆ ಅದೇ ಉದ್ದೇಶದಿಂದ ಕಿರುಕುಳ ನೀಡಿದ್ದಾರೆ ಎಂಬುದಕ್ಕೆ ಸಾಕ್ಷಿ ಇಲ್ಲ. ಜತೆಗೆ ಅರ್ಜಿದಾರರಿಗೆ ಮರು ಪಾವತಿ ಬೇಕಿತ್ತೇ ವಿನಃ ಅದಕ್ಕಾಗಿ ರಾಜು ಪ್ರಾಣ ಬೇಕಾಗಿರಲಿಲ್ಲ.
ಹಾಗಾಗಿ ಅವರು ಉದ್ದೇಶಪೂರ್ವಕವಾಗಿಯೇ ಪ್ರಚೋದನೆ ನೀಡಿದರೆಂಬುದನ್ನು ಸಾಬೀತುಪಡಿಸುವ ಯಾವುದೇ ಅಂಶಗಳಿಲ್ಲದ ಕಾರಣ ಪ್ರಕರಣವನ್ನು ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ಆದೇಶಿಸಿದೆ. ಅರ್ಜಿದಾರರ ವಿರುದ್ಧ ಸಾಂದರ್ಭಿಕ ಸಾಕ್ಷ್ಯಗಳೂ ಇಲ್ಲ. ಆದರೂ ಅಧೀನ ನ್ಯಾಯಾಲಯ ಪ್ರಾಸಿಕ್ಯೂಷನ್ ಮೇಲೆ ಸಾಕ್ಷ್ಯವನ್ನು ನೀಡುವ ಹೊಣೆ ವಹಿಸದಿರುವುದು ಸರಿಯಲ್ಲಎಂದು ಹೇಳಿದೆ.
ಪ್ರಕರಣದ ಹಿನ್ನೆಲೆ: ಮೃತ ರಾಜು ಮತ್ತು ಕವಿತಾ ಮದುವೆಯಾಗಿದ್ದರು. ಅವರಿಗೆ ಒಂದು ಮಗುವಿತ್ತು. ಅವರು ಅರ್ಜಿದಾರರ ಬಳಿ ಹಣವನ್ನು ಸಾಲ ಪಡೆದಿದ್ದರು. ಆ ಹಣ ಮರುಪಾವತಿಗಾಗಿ ಅರ್ಜಿದಾರರು ಮೃತನಿಗೆ ಕಿರಕುಳ ನೀಡುತ್ತಿದ್ದರು, ಅದೇ ಕಾರಣಕ್ಕೆ ರಾಜು 2019ರ ಏಪ್ರಿಲ್ 25ರಂದು ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನು.
ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಆತ ಚಿಕಿತ್ಸೆ ಫಲಕಾರಿಯಾಗದೆ 2019ರ ಮೇ 10ರಂದು ಕೊನೆಯುಸಿರೆಳೆದಿದ್ದನು. ಪ್ರಕರಣದಲ್ಲಿ ದೂರು ಆಧರಿಸಿ ಪೊಲೀಸರು ಅರ್ಜಿದಾರರಾದ ಮಂಗಳ ಗೌರಿಯನ್ನು ಬಂಧಿಸಿ ಅವರ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಿದ್ದರು.
ಸೆಕ್ಷನ್ 306 ಕೊಲೆಯತ್ನ ಆರೋಪದಲ್ಲಿ ವಿಚಾರಣಾ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡವನ್ನು ವಿಧಿಸಿತ್ತು. ಆ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications