ಆರೋಪಿಗಳ ಜಾಮೀನಿಗೆ ಬ್ಯಾಂಕ್ ಗ್ಯಾರಂಟಿ ಕೇಳುವುದು ಅಕ್ರಮ: ಹೈಕೋರ್ಟ್
ಬೆಂಗಳೂರು, ಜುಲೈ 13: ಆರೋಪಿಗಳಿಗೆ ಜಾಮೀನು ಮಂಜೂರು ಮಾಡುವುದಕ್ಕೆ ಒಂದಷ್ಟು ಮೊತ್ತದ ಬ್ಯಾಂಕ್ ಗ್ಯಾರಂಟಿ ಒದಗಿಸಬೇಕು ಎಂಬ ಷರತ್ತು ವಿಧಿಸುವುದು ಅಕ್ರಮ ಮತ್ತು ಕಾನೂನು ಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಅಲ್ಲದೆ, ಕಾನೂನಿನಲ್ಲಿ ಬ್ಯಾಂಕ್ ಗ್ಯಾರಂಟಿ ಅವಕಾಶವಿಲ್ಲ ಎಂದು ಅಭಿಪ್ರಾಯ ಪಟ್ಟು ಆರೋಪಿಗೆ ಜಾಮೀನು ಮಂಜೂರು ಮಾಡಿದೆ.
ಜಾಮೀನು ಮಂಜೂರು ಮಾಡಿದ್ದ ವಿಚಾರಣಾ ನ್ಯಾಯಾಲಯ 50 ಲಕ್ಷ ರೂ. ಗಳ ಬ್ಯಾಂಕ್ ಗ್ಯಾರಂಟಿ ಷರತ್ತು ವಿಧಿಸಿದ್ದ ಕ್ರಮವನ್ನು ಪ್ರಶ್ನಿಸಿ ಬೆಂಗಳೂರಿನ ನಿವಾಸಿ ವೈಭವ್ ರಾಜ್ ಉತ್ಸವ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಹೈಕೋರ್ಟ್ ಆದೇಶವೇನು?: ಕರಣ್‌ದೀಪ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಸೇರಿದಂತೆ ವಿವಿಧ ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಜಾಮೀನು ನೀಡುವಾಗ ವಿಚಾರಣಾ ನ್ಯಾಯಾಲಯ ಬ್ಯಾಂಕ್ ಗ್ಯಾರಂಟಿ ನೀಡುವ ಷರತ್ತುಗಳನ್ನು ವಿಧಿಸುತ್ತಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗಾಗಿ ಈ ರೀತಿಯಲ್ಲಿ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪೀಠ ಹೇಳಿದೆ.
ಜಾಮೀನು ನೀಡಿದ ನಂತರ ಆರೋಪಿಗಳ ಬಿಡುಗಡೆಗೆ ಬ್ಯಾಂಕ್ ಗ್ಯಾರಂಟಿ ನೀಡುವಂತೆ ಸಂಬಂಧಪಟ್ಟ ನ್ಯಾಯಾಲಯವು ಒತ್ತಾಯಿಸುವಂತಿಲ್ಲ. ಬ್ಯಾಂಕ್ ಗ್ಯಾರಂಟಿಯನ್ನು ಹೊರತುಪಡಿಸಿ ಇತರೆ ಕಾನೂನುಬದ್ಧ ಷರತ್ತುಗಳನ್ನು ವಿಧಿಸಲು ಅವಕಾಶವಿರಲಿದೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ವಿಮುಕ್ತಿ ಟ್ರಸ್ಟ್‌ಗೆ ಸೇರಿದ್ದ 1,08,50,000 ರೂ.ಗಳ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಡಾ. ಕಿರಣ್ ಕಮಲಾ ಎಂಬವರು ವೈಭವ್‌ರಾಜ್ ಉತ್ಸವ್ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಸಂಬಂಧ ಪೊಲೀಸರು ಐಪಿಸಿಯ ವಿವಿಧ ಸೆಕ್ಷಕ್ಷನ್‌ಗಳ ಅಡಿಯಲ್ಲಿ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ವಿಚಾರಣಾ ನ್ಯಾಯಾಲಯ 50 ಲಕ್ಷ ರೂ. ಗಳ ವೈಯಕ್ತಿಕ ಬಾಂಡ್ ಮತ್ತು 1 ಕೋಟಿ ರು.ಗಳ ಬ್ಯಾಂಕ್ ಗ್ಯಾರಂಟಿ ನೀಡುವಂತೆ ಷರತ್ತು ವಿಧಿಸಿ ಆದೇಶಿಸಿತ್ತು. ಅಲ್ಲದೆ, ಈ ಆದೇಶ ಜಾಮೀನಿನ ಮೇಲೆ ಬಿಡುಗಡೆಯಾದ ಮೂರು ತಿಂಗಳಲ್ಲಿ ಪಾಲನೆ ಮಾಡಬೇಕು ಎಂದು ತಿಳಿಸಿತ್ತು.
ಇದಾದ ನಂತರ ಷರತ್ತುಗಳನ್ನು ಸಡಿಲಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ, ಬ್ಯಾಂಕ್ ಗ್ಯಾರಂಟಿ ಮೊತ್ತವನ್ನು 1 ಕೋಟಿ ರು.ಗಳಿಂದ 50 ಲಕ್ಷ ರೂ.ಗೆ ಕಡಿತಗೊಳಿಸಿತ್ತು. ಮತ್ತಷ್ಟು ಮೊತ್ತ ಕಡಿತಗೊಳಿಸಲು ಕೋರಿದ್ದ ಮನವಿ ಮನವಿ ತಿರಸ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ವೈಭವರಾಜ್ ಉತ್ಸವ್ ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications