ಫಾರ್ಮ್‌ಹೌಸ್‌ನಲ್ಲಿ ಭ್ರೂಣ ಲಿಂಗ ಪತ್ತೆ ಮಾಡುವ ದಂಧೆ ಬೆಳಕಿಗೆ
ಭ್ರೂಣ ಲಿಂಗ ಪತ್ತೆ ಮಾಡುವುದು ಕಾನೂನು ಪ್ರಕಾರ ಅಪರಾಧ. ಆದರೂ ಹಲವೆಡೆ ಈ ಜಾಲ ಅಕ್ರಮವಾಗಿ ನಡೆಯುತ್ತಿದ್ದು, ಆಗಾಗ ಬೆಳಕಿಗೆ ಬರುತ್ತಿವೆ. ಇದೀಗ ಮೈಸೂರು ಬಳಿಯ ಫಾರ್ಮ್‌ಹೌಸ್‌ನಲ್ಲಿ ಭ್ರೂಣ ಲಿಂಗ ಪತ್ತೆ ಮಾಡುವ ಜಾಲ ಸಕ್ರಿಯವಾಗಿದ್ದು, ಭ್ರೂಣಲಿಂಗ ಪತ್ತೆ ಮಾಡುವುದು ಹಾಗೂ ಹತ್ಯೆ ಮಾಡಿದ್ದ ಗ್ಯಾಂಗ್ ಅನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿ ಬಂಧಿಸಿದ್ದಾರೆ. ಮಹಿಳೆ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಇದರಲ್ಲಿ ಬನ್ನೂರಿನ ಪ್ರತಿಷ್ಠಿತ ನರ್ಸಿಂಗ್ ಹೋಂವೊಂದರ ಕೈವಾಡ ಇದೆ ಎಂದು ಶಂಕಿಸಲಾಗಿದೆ. ಈ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮೈಸೂರು ಬಳಿಯ ಮೆಲ್ಲಹಳ್ಳಿ ಬಳಿಯ ಹುನಗನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಐಶಾರಾಮಿ ಫಾರ್ಮ್‌ಹೌಸ್‌ನಲ್ಲಿ ಭ್ರೂಣ ಲಿಂಗ ಪತ್ತೆ ಮಾಡುವುದು ಹಾಗೂ ಹತ್ಯೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಫಾರ್ಮ್‌ಹೌಸ್‌ಗೆ ಗರ್ಭಿಣಿಯರನ್ನು ಕರೆತಂದು, ಭ್ರೂಣ ಲಿಂಗ ಪತ್ತೆ ಮಾಡಲಾಗುತ್ತಿತ್ತು. ಗರ್ಭದಲ್ಲಿರುವುದು ಹೆಣ್ಣೇ ಅಥವಾ ಗಂಡು ಮಗುವೇ? ಎಂದು ಪತ್ತೆ ಮಾಡಲು ಸಾವಿರಾರು ರೂಪಾಯಿ ಹಣ ವಸೂಲಿ ಮಾಡಲಾಗುತ್ತಿತ್ತು ಎಂಬ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ.

ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ಹಂಚಿಕೊಂಡಿದ್ದಾರೆ. ಬನ್ನೂರು ಹೈವೇ ಬಳಿಯ ಹುಣಗನಹಳ್ಳಿ ಫಾರ್ಮ್‌ಹೌಸ್‌ನಲ್ಲಿ ಲಿಂಗ ಭ್ರೂಣ ಪತ್ತೆ ಕಾರ್ಯ ನಡೆಯುತ್ತಿರುವುದನ್ನ ಪತ್ತೆ ಹಚ್ಚಲಾಗಿದೆ. ರಹಸ್ಯ ಕಾರ್ಯಾಚರಣೆ ಮೂಲಕ ನಮ್ಮ ಆರೋಗ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ಭ್ರೂಣ ಹಂತಕರನ್ನು ಸೆರೆ ಹಿಡಿದಿದ್ದಾರೆ. ಗರ್ಭಿಣಿ ಮಹಿಳೆಯ ಸಹಾಯ ಪಡೆದು ಲಿಂಗ ಭ್ರೂಣ ಪತ್ತೆ ಕಾರ್ಯಚಟುವಟಿಕೆ ನಡೆಸುತ್ತಿರುವುದನ್ನು ಪತ್ತೆ ಮಾಡಲಾಗಿದೆ ಎಂದಿದ್ದಾರೆ.
ಸ್ಕ್ಯಾನಿಂಗ್ ಉಪಕರಣ ಪತ್ತೆ
ಅಧಿಕಾರಿಗಳ ಕಾರ್ಯಾಚರಣೆ ವೇಳೆ ನಾಲ್ಕು ಗರ್ಭಿಣಿ ಸ್ತ್ರೀಯರು ಲಿಂಗ ಭ್ರೂಣ ಪತ್ತೆ ಮಾಡಿಸಿಕೊಳ್ಳಲು ಹಾಜರಿದ್ದರು. ಸ್ಕ್ಯಾನಿಂಗ್ ಬಳಕೆ ಮಾಡುವ ಉಪಕರಣ ಕೂಡ ಪತ್ತೆಯಾಗಿದೆ. ಈ ಸಂಬಂಧ ಹೆರಿಗೆ ಪೂರ್ವ ಭ್ರೂಣ ಲಿಂಗಪತ್ತೆ (ಪಿ.ಸಿ.ಪಿ.ಎನ್.ಡಿ.ಟಿ) ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದ್ದು, ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಆರೋಗ್ಯ ಇಲಾಖೆ ನಿರಂತರ ಹೋರಾಟ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಹೆಣ್ಣು ಭ್ರೂಣ ಹತ್ಯೆ ಒಂದು ಸಮಾಜಿಕ ಪಿಡುಗಾಗಿದ್ದು, ಸಮಾಜ ಈ ಬಗ್ಗೆ ಜಾಗೃತರಾಗಿ ಭ್ರೂಣ ಹತ್ಯೆಯ ವಿರುದ್ಧ ಸಮರ ಸಾರಲು ಮುಂದಾಗಬೇಕು. ಆರೋಗ್ಯ ಇಲಾಖೆ ಸದಾ ಭ್ರೂಣ ಹಂತಕರ ವಿರುದ್ಧ ಸಹಕರಿಸುವವರ ಜೊತೆಗೆ ಇದೆ. ಯಾರು ಎಷ್ಟೇ ದೊಡ್ಡವರಿದ್ದರೂ ಹೆಣ್ಣು ಭ್ರೂಣ ಹಂತಕರನ್ನು ಮಟ್ಟ ಹಾಕಲು ನಮ್ಮ ಸರ್ಕಾರ ಕಠಿ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.












Click it and Unblock the Notifications