Karnataka Flood: ಕೇಂದ್ರದಿಂದ ಕರ್ನಾಟಕಕ್ಕೆ ನೆರೆ ಪರಿಹಾರ ಬಿಡುಗಡೆ, ಸಿಎಂ ಬೊಮ್ಮಾಯಿ ಹರ್ಷ, ವಿವರ ಹೀಗಿದೆ
ಅತೀ ವೃಷ್ಠಿ, ಪ್ರವಾಹ ಮತ್ತು ನೆರೆಯಿಂದ ಸಾಕಷ್ಟು ತೊಂದರೆ, ನಷ್ಟ ಎದುರಿಸಿದ್ದ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರವು ಸೋಮವಾರ ಆರ್ಥಿಕ ನೆರವು ಮಂಜೂರು ಮಾಡಿದೆ. ಅದರ ವಿವರ ಇಲ್ಲಿದೆ.
ಬೆಂಗಳೂರು, ಮಾರ್ಚ್ 13: ಅತೀ ವೃಷ್ಠಿ, ಪ್ರವಾಹ ಮತ್ತು ನೆರೆಯಿಂದ ಸಾಕಷ್ಟು ತೊಂದರೆ, ನಷ್ಟ ಎದುರಿಸಿದ್ದ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರವು ಒಟ್ಟು ₹941.04 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಹಣ ಬಿಡುಗಡೆ ಮಾಡಿದ್ದರ ಕುರಿತು ಹರ್ಷ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 2022ರ ಅವಧಿಯಲ್ಲಿ ಕರ್ನಾಟಕದಲ್ಲಿ ಅತೀವೃಷ್ಠಿ ಉಂಟಾಗಿತ್ತು. ರಾಜ್ಯದ ವಿವಿಧೆಡೆ ಪ್ರವಾಹ, ಭೂ ಕುಸಿತ ಹಾನಿಗೊಳಗಾಗಿದ್ದ ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ 'ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ'ಯಡಿ ಹೆಚ್ಚುವರಿಯಾಗಿ ₹941.04 ಕೋಟಿಯನ್ನು ಮಂಜೂರು ಮಾಡಿದೆ. ಇದು ಸಹಜವಾಗಿಯೇ ರಾಜ್ಯದ ಜನರಲ್ಲಿ ನಮ್ಮಲ್ಲಿ ಹರ್ಷ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆ ಬಳಿಕ ಹಣ ಮಂಜೂರು ಆಗಿದೆ. ಹಣ ಬಿಡುಗಡೆಯ ಈ ನಿರ್ಧಾರವು ನೈಸರ್ಗಿಕ ವಿಕೋಪಗಳನ್ನು ಎದುರಿಸಿದ ದೇಶದ ರಾಜ್ಯಗಳ ಜನರಿಗೆ ಸಹಾಯ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಸಂಕಲ್ಪವನ್ನು ಬಿಂಬಿಸುತ್ತದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕಳೆದ ವರ್ಷ ಮೂರು ತಿಂಗಳಲ್ಲಿ ನಿಂತರ ಮಳೆ ಆರ್ಭಟ ಕಂಡು ಬಂದಿತ್ತು. ರಾಜ್ಯ ನಾನಾ ಕಡೆಗಲ್ಲಿ ಜೋರು ಮಳೆ ಬಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ರೈತರು, ಜನರು ಸಂಕಷ್ಟ ಎದುರಿಸಿದ್ದರು. ಜಾನೂವಾರುಗಳಿಗೆ ಮೇವು ಕೊರತೆ ಉಂಟಾದರೆ, ಲಕ್ಷಾಂತರ ಹೆಕ್ಟೇರ್ ಪ್ರದೇಶಗಳಲ್ಲಿನ ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು.
2022ರಲ್ಲಿ ಭಾರಿ ಮಳೆ: ನಷ್ಟ ಅಂದಾಜಿಸಿದ್ದ ಸರ್ಕಾರ
ಈ ಸಂಬಂಧ ರಾಜ್ಯ ಸರ್ಕಾರ ರಾಜ್ಯದಲ್ಲಿ ಅಂದಾಜು 7,647.13 ಕೋಟಿ ರೂ. ನಷ್ಟವಾಗಿದೆ (ಆಗಸ್ಟ್ 2022ರ ವೇಳೆಗೆ) ಎಂದು ತಿಳಿಸಿತ್ತು. ಅಲ್ಲದೇ ಆ ತಕ್ಷಣಕ್ಕೆ ಪರಿಹಾರವಾಗಿ 1,012 ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಸಂಬಂಧ ರಾಜ್ಯದ ಪ್ರವಾಹ, ನೆರೆ ಪರಿಸ್ಥಿತಿ ಅಧ್ಯಯನಕ್ಕಾಗಿ ಸಚಿವಾಲಯ ತಂಡಗಳನ್ನು ಕರ್ನಾಟಕಕ್ಕೆ ಭೇಟಿ ನೀಡುವಂತೆಯೂ ಮನವಿ ಮಾಡಲಾಗಿತ್ತು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದರು. ಅದರಂತೆ ತಜ್ಞರು ಬಂದು ರಾಜ್ಯದ ಪ್ರವಾಹ, ನಷ್ಟ ಕುರಿತು ಪರಿಶೀಲಿಸಿದ್ದರು.

ಅದಾಗಿ ತಿಂಗಳುಗಳ ಬಳಿಕ ಇದೀಗ ಕರ್ನಾಟಕಕ್ಕೆ ಹಣ ಬಿಡುಗಡೆ ಮಾಡಿದೆ. ಹೀಗಿದ್ದರು ಇದು ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ಹಣ ಮಂಜೂರು ಮಾಡಲಾಗಿದೆ ಎನ್ನಲಾಗುತ್ತಿದೆ.
ಇನ್ನೂ ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ ಒಟ್ಟು 5 ರಾಜ್ಯಗಳಿಗೆ 1,816.162 ಕೋಟಿ ಹೆಚ್ಚುವರಿ ಆರ್ಥಿಕ ನೆರವು ನೀಡಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ
* ಕರ್ನಾಟಕಕ್ಕೆ 941.04 ಕೋಟಿ ರೂಪಾಯಿ
* ಅಸ್ಸಾಂಗೆ 520.466 ಕೋಟಿ ರೂಪಾಯಿ
* ಹಿಮಾಚಲ ಪ್ರದೇಶಕ್ಕೆ 239.31 ಕೋಟಿ ರೂಪಾಯಿ
* ಮೇಘಾಲಯಕ್ಕೆ 47.326 ಕೋಟಿ ರೂಪಾಯಿ
* ನಾಗಾಲ್ಯಾಂಡ್‌ಗೆ 68.02 ಕೋಟಿ ರೂಪಾಯಿ












Click it and Unblock the Notifications