ಟ್ವೀಟ್ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಕಾಶ್ ರಾಜ್ ಪ್ರಶ್ನೆ!
ಬೆಂಗಳೂರು, ಅಕ್ಟೋಬರ್ 04 : ಪ್ರವಾಹದಿಂದ ರಾಜ್ಯದಲ್ಲಿ ಉಂಟಾಗಿರುವ ನಷ್ಟಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ. ಪರಿಹಾರ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ತಿರಸ್ಕಾರ ಮಾಡಲಾಗಿದ್ದು, ಈ ಬಗ್ಗೆ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಕರ್ನಾಟಕ ಸರ್ಕಾರ ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ (ಎನ್‌ಡಿಆರ್‌ಎಫ್) ನಿಯಮಾವಳಿ ಅನ್ವಯ 3500 ಕೋಟಿ ಪರಿಹಾರ ನೀಡಬೇಕು ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕೆಲವು ಸ್ಪಷ್ಟೀಕರಣ ಕೋರಿರುವ ಸಚಿವಾಲಯ ಪ್ರಸ್ತಾವನೆ ತಿರಸ್ಕಾರ ಮಾಡಿದೆ.
ನಟ, ನಿರ್ದೇಶಕ ಪ್ರಕಾಶ್ ರಾಜ್ ಈ ಕುರಿತು ಟ್ವೀಟ್ ಮಾಡಿದ್ದಾರೆ. "ನಾನು ಉಗುದೆ...ಒರಸ್ಕೊಂಡ್ರೀ...ಈಗ ಜನ ಕ್ಯಾಕರ್ಸ್ಕೊಂಡ್ ಉಗೀತಾ ಇದಾರೆ...ಎಷ್ಟೂಂತ ಒರಸ್ಕೊತೀರಪ್ಪ' ಎಂದು ಪ್ರಶ್ನೆ ಮಾಡಿರುವ ಅವರು #justasking ಹ್ಯಾಷ್ ಟ್ಯಾಗ್ ಬಳಸಿದ್ದಾರೆ.

ಪ್ರವಾಹ ಪರಿಹಾರದ ವಿಚಾರದಲ್ಲಿ ಹಲವರು ಮಾಡಿರುವ ಟ್ವೀಟ್ ಸ್ಕ್ರೀನ್ ಶಾಟ್ ಲಗತ್ತಿಸಿರುವ ಪ್ರಕಾಶ್ ರಾಜ್ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಾನು ಉಗುದೆ...ಒರಸ್ಕೊಂಡ್ರೀ...ಈಗ ಜನ ಕ್ಯಾಕರ್ಸ್ಕೊಂಡ್ ಉಗೀತಾ ಇದಾರೆ...ಎಷ್ಟೂಂತ ಒರಸ್ಕೊತೀರಪ್ಪ....#justasking pic.twitter.com/baU3DEFaoY
— Prakash Raj (@prakashraaj) October 4, 2019
ಕೇಂದ್ರದಲ್ಲಿ 2ನೇ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕರ್ನಾಟಕದ ಕೊಡುಗೆಯೂ ಆಪಾರವಾಗಿದೆ. ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಆದರೆ, ಕೇಂದ್ರ ಸರ್ಕಾರ ರಾಜ್ಯದ ಕಡೆ ತಿರುಗಿ ನೋಡುತ್ತಿಲ್ಲ.
ಕರ್ನಾಟಕದ ಪ್ರಸ್ತಾವನೆ ತಿರಸ್ಕಾರ ಏಕೆ? : ಪ್ರವಾಹ ಪರಿಹಾರ ನೀಡುವಂತೆ ಕರ್ನಾಟಕ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ತಿರಸ್ಕರಿಸಿದೆ. ಎನ್‌ಡಿಆರ್‌ಎಫ್ ನಿಯಮಾವಳಿ ಅನ್ವಯ 3500 ಕೋಟಿ ಪರಿಹಾರದ ನೆರವು ನೀಡಬೇಕು ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಕೇಂದ್ರ ಅಧ್ಯಯನ ತಂಡ ಪ್ರತ್ಯೇಕವಾದ ವರದಿಯನ್ನು ಸಲ್ಲಿಸಿದೆ. ಆದರೆ, ಈ ವರದಿಯು ರಾಜ್ಯ ಸರ್ಕಾರ ಸಲ್ಲಿಸಿರುವ ನಷ್ಟದೊಂದಿಗೆ ತಾಳೆಯಾಗುತ್ತಿಲ್ಲ. ಕೊಡಲೇ ಸ್ಪಷ್ಟೀಕರಣ ನೀಡಬೇಕು ಎಂದು ಕೇಂದ್ರ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪ್ರವಾಹದಿಂದ ಹಾನಿಗೊಳಗಾದ ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿದ್ದು, ರೈತರು ಬೆಳೆ ನಷ್ಟದ ಪರಿಹಾರ ಕೊಡಿ ಎಂದು ಮುಖ್ಯಮಂತ್ರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.












Click it and Unblock the Notifications