Get Updates
Get notified of breaking news, exclusive insights, and must-see stories!

2022ರ ಹಿನ್ನೋಟ: ಉತ್ತರ ಕನ್ನಡದಲ್ಲಿ ನಡೆದ ಮಹತ್ವದ ಘಟನೆಗಳು ಯಾವುವು..?

ಕಾರವಾರ, ಡಿಸೆಂಬರ್‌ 31: ಹೊಸ ವರ್ಷಾಚರಣೆಗೆ ಎಲ್ಲೆಡೆ ಕಾತುರದಿಂದ ಕಾಯಲಾಗುತ್ತಿದೆ. ಕೆಲವೇ ಗಂಟೆಗಳು ಕಳೆದರೆ ನೂತನ ವರ್ಷವನ್ನು ಸಂಭ್ರಮ ಸಡಗರದಿಂದ ಬರಮಾಡಿಕೊಳ್ಳಲಾಗುತ್ತದೆ. ಆದರೆ ಹೊಸ ವರ್ಷಾಚರಣೆಗೂ ಮುನ್ನ 2022ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಕೆಲ ಸಿಹಿ ಕಹಿ ಘಟನೆಗಳ ಹಿನ್ನೋಟ ಇಲ್ಲಿದೆ.

ಜಿಲ್ಲೆಯಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆ

ಜಿಲ್ಲೆಯಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆ

ಕಳೆದ ಬಾರಿ ವಿಧಾನಸಭಾ ಚುನಾವಣೆ ವೇಳೆಗೆ ಮೃತರಾಗಿದ್ದ ಯುವಕ ಪರೇಶ ಮೇಸ್ತಾನದ್ದು ಕೊಲೆ ಎಂದು ಪ್ರಚಾರ ನಡೆಸಿ ಕರಾವಳಿಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಬಿಜೆಪಿಗೆ ಅಕ್ಟೋಬರ್ ಮೊದಲ ವಾರದಲ್ಲಿ ಈ ಬಗ್ಗೆ ತನಿಖೆ ನಡೆಸಿದ್ದ ಸಿಬಿಐ ನೀಡಿದ ಬಿ ರಿಪೋರ್ಟ್ ಮುಖಭಂಗ ಅನುಭವಿಸುವಂತಾಗಿತ್ತು.

ಈ ಸಂಬಂಧ ಕುಮಟಾದಲ್ಲಿ ಇತ್ತೀಚೆಗೆ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ದೊಡ್ಡ ಸಮಾರಂಭ ನಡೆಸಿ ಬಿಜೆಪಿಗರ ವಿರುದ್ಧ ಕಿಡಿಕಾರಿದ್ದರು. ಸದ್ಯ ಪರೇಶ್ ಮೆಸ್ತಾ ತಂದೆ ಕಮಲಾಕರ ಮೇಸ್ತಾ ಹೊನ್ನಾವರ ಕೋರ್ಟ್ ಗೆ ಸಿಬಿಐನ 'ಬಿ' ರಿಪೋರ್ಟ್ ವಿರುದ್ಧ ಆಕ್ಷೇಪಣೆ ಸಲ್ಲಿಸಿದ್ದಾರೆ. ಇನ್ನು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕೆಲ ತಿಂಗಳ ಹಿಂದೆ ಅಂಕೋಲಾದಲ್ಲಿ ಸಂಚರಿಸಿ ಚುನಾವಣೆಗಾಗಿ ಕೊಂಚ ಮೈಕೊಡವಿ ಎದ್ದಂತೆ ಕಂಡಿದ್ದರು. ಆದರೆ ಸದ್ಯ ಆನಂದ ಸದ್ದೇ ಇಲ್ಲದಂತಾಗಿದೆ.

ಇನ್ನು ಯಲ್ಲಾಪುರ ಕ್ಷೇತ್ರದ ಮಾಜಿ ಶಾಸಕ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮಾಜಿ ಅಧ್ಯಕ್ಷ ವಿ.ಎಸ್.ಪಾಟೀಲ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಹಲವು ವರ್ಷಗಳ ಕಾಲ ಬಿಜೆಪಿಯಲ್ಲಿದ್ದು, ನಿಗಮವನ್ನು ಮುನ್ನಡೆಸುತ್ತಿದ್ದ ಅವರು ಸಚಿವ ಶಿವರಾಮ ಹೆಬ್ಬಾರ್ ಮೇಲೆ ಮುನಿಸಿಕೊಂಡಿದ್ದರು. ಅದಕ್ಕಾಗಿಯೇ ಪಕ್ಷ ತೊರೆಯುವುದಾಗಿಯೂ ಹೇಳಿದ್ದ ಅವರು, ಕಾಂಗ್ರೆಸ್ ಸೇರಿದ ಮೇಲೂ ಹೆಬ್ಬಾರ್ ಮೇಲೆ ಅಸಮಾಧಾನ ತೋರ್ಪಡಿಸಿಕೊಳ್ಳುತ್ತಿದ್ದಾರೆ.

ಇನ್ನು ವಿಧಾನಸಭಾ ಚುನಾವಣೆ ತಯಾರಿಯಂತೆ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಒಬ್ಬರು ಹಿಂದೆ ಒಬ್ಬರಂತೆ ವರ್ಗಾವಣೆ ಮಾಡಲಾಯಿತು. ಜಿಲ್ಲಾಧಿಕಾರಿ, ಸಿಇಓ ಹಾಗೂ ಎಸ್ಪಿ ಮೂವರು ಅಧಿಕಾರಿಗಳನ್ನು ವರ್ಗಾವಣೆಯ ಮೂಲಕ ಜಿಲ್ಲೆಯ ರಾಜಕಾರಣಿಗಳು ತಮ್ಮ ಚುನಾವಣಾ ಹಾದಿ ಸುಗಮಗೊಳಿಸಿಕೊಂಡಿದ್ದಾರೆ ಎನ್ನುವ ಆರೋಪಗಳು ಇಂದಿಗೂ ಇದೆ.

ಉತ್ತರ ಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಹೋರಾಟ

ಉತ್ತರ ಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಹೋರಾಟ

ಇನ್ನು ಜಿಲ್ಲೆಯ ಗೋವಾ ಗಡಿಗೆ ಹೊಂದಿಕೊಂಡಿರುವ ಕಾರವಾರದಲ್ಲಿ ಜೂನ್ ತಿಂಗಳಿನಲ್ಲಿ ಭಾಷಾ ವಿವಾದ ಭುಗಿಲೆದ್ದಿತು. ದೇವನಾಗರಿ ಲಿಪಿಯಲ್ಲಿ ವಾರ್ಡ್ಗಳ ಹೆಸರುಗಳನ್ನ ಕೊಂಕಣಿಗೆ ತರ್ಜುಮೆ ಮಾಡಿ ನಗರಸಭೆಯಿಂದ ನಾಮಫಲಕ ಅಳವಡಿಸಿದ್ದನ್ನು ಕನ್ನಡಪರ ಸಂಘಟನೆಗಳು ಖಂಡಿಸಿದ್ದವು. ಕರವೇ ನಾಮಫಲಕಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿತು. ಕಾರವಾರದ ಈ ಭಾಷಾ ವಿವಾದ ತಣ್ಣಗಾಗುವಷ್ಟರಲ್ಲೇ ಭಟ್ಕಳ ಪುರಸಭೆಗೆ ಉರ್ದು ಬೋರ್ಡ್ ಅಳವಡಿಕೆ ವಿಚಾರ ವಿವಾದಕ್ಕೆ ಕಾರಣವಾಯಿತು. ಜಿಲ್ಲಾಧಿಕಾರಿಗಳ ಮಧ್ಯಪ್ರವೇಶದಿಂದ ಕೊನೆಗೆ ಈ ಎರಡೂ ವಿವಾದಗಳು ತಣ್ಣಗಾಗಿದ್ದರೂ, ಒಳಬೇಗುದಿ ಮಾತ್ರ ಹಾಗೆಯೇ ಇದೆ.

ಇದಲ್ಲದೆ ಉತ್ತರ ಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕೆಂದು ಕುಮಟಾ, ಹೊನ್ನಾವರ, ಕಾರವಾರ, ಶಿರಸಿಯಲ್ಲಿ ಪ್ರತಿಭಟನೆಗಳು ನಡೆದವು. ಟ್ವಿಟರ್‌ನಲ್ಲಿ ಅಭಿಯಾನ ಕೂಡ ನಡೆದಿತ್ತು. ಅಂತಿಮವಾಗಿ ಜಿಲ್ಲೆಯ ಜನತೆಯ ಆಕ್ರೋಶಕ್ಕೆ ಮಣಿದ ಸರ್ಕಾರ, ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಭರವಸೆ ನೀಡಿತ್ತು. ಆದರೆ ಈವರೆಗೂ ಭರವಸೆಯಾಗಿಯೇ ಉಳಿದಿದೆ.

ಇದಲ್ಲದೆ ಎಸ್‌ಸಿ ಪ್ರಮಾಣಪತ್ರಕ್ಕಾಗಿ ಮೊಗೇರ ಸಮುದಾಯದವರು 300ಕ್ಕೂ ಹೆಚ್ಚು ದಿನಗಳವರೆಗೆ ಧರಣಿ ನಡೆಸಿದರು. ಸರ್ಕಾರದ ಸಚಿವರುಗಳು ಧರಣಿ ನಿರತ ಮುಖಂಡರ ಸಭೆ ನಡೆಸಿದರೂ ಈವರೆಗೆ ಸಮಸ್ಯೆ ಇತ್ಯರ್ಥವಾಗಿಲ್ಲ. ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯಿಂದ ಕಬ್ಬು ಬೆಳೆಗಾರರ ಹಿಂದಿನ ಬಾಕಿ ಪಾವತಿ, ಪ್ರಸ್ತುತ ವರ್ಷದ ಕಬ್ಬಿಗೆ ನ್ಯಾಯಯುತ ಬೆಲೆ ಹಾಗೂ ಕಟಾವು ಮತ್ತು ಸಾಗಾಟ ವೆಚ್ಚ ದರ ಪರಿಷ್ಕರಣೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ತಿಂಗಳಿನಿಂದ ಹಳಿಯಾಳದ ಆಡಳಿತ ಸೌಧದ ಎದುರು ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ ನಡೆಸಿದರು. ಎರಡು- ಮೂರು ಸುತ್ತಿನ ಮಾತುಕತೆ, ಚರ್ಚೆಯ ಬಳಿಕ ಕೊನೆಗೆ ಹೆಚ್ಚಿನ ದರ ನೀಡುವುದಾಗಿ ಕಂಪನಿ ಒಪ್ಪಿಕೊಂಡ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

2022ರಲ್ಲಿಯೂ ಹಾಗೇ ಉಳಿದ ಸಮಸ್ಯೆಗಳು

2022ರಲ್ಲಿಯೂ ಹಾಗೇ ಉಳಿದ ಸಮಸ್ಯೆಗಳು

ಗೋವಾದಿಂದ ಕುಂದಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ 2014ರಲ್ಲಿ ಪ್ರಾರಂಭವಾದರೂ ಇನ್ನೂ ಪೂರ್ಣಗೊಂಡಿಲ್ಲ. ಶೇ.70 ರಷ್ಟು ಕಾಮಗಾರಿ ಪೂರ್ಣವಾಗಿದೆ. ಉಳಿದ ಶೇ.30 ರಷ್ಟು ಕಾಮಗಾರಿ ನಡೆದಿದೆ. ಆದರೆ ಕರಾವಳಿಯುದ್ದಕ್ಕೂ ಅಲ್ಲಲ್ಲಿ ಕಾಮಗಾರಿ ಅರೆಬರೆಯಾಗಿರುವ ಕಾರಣ ಸಾಕಷ್ಟು ಅಪಘಾತಗಳಿಗೆ ಕಾರಣವಾಗಿದೆ. ಇದಲ್ಲದೆ ಕುಮಟಾ- ಶಿರಸಿ ರಸ್ತೆ ಅಗಲೀಕರಣ ಕೈಗೊಳ್ಳಲಾಗಿದೆಯಾದರೂ ಅದು ಕೂಡ ಕುಂಟುತ್ತಲೆ ಸಾಗಿದೆ.

ಇನ್ನು ಅಂಕೋಲಾದ ಹಾರವಾಡ ಬೇಲೇಕೇರೆಯಲ್ಲಿ ಸೀಬರ್ಡ ನೌಕಾನೆಲೆಗೆ ಹೊಂದಿಕೊಂಡು ನಾಗರಿಕ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಾಗಿ ಸರ್ಕಾರ ಹೇಳಿತ್ತು. ಆದರೆ ರನ್ ವೇ ಬೇಕಾದ 75 ಹೆಕ್ಟೇರ್ ಹೆಚ್ಚುವರಿ ಭೂಮಿಯನ್ನು ರಾಜ್ಯ ಸರ್ಕಾರ ಗುರುತಿಸಿದೆ. 93 ರಿಂದ 99 ಜನ ಭೂಮಿಯನ್ನು ಕಳೆದುಕೊಳ್ಳಲಿದ್ದು, 99 ರಿಂದ 110 ಎಕರೆ ಭೂಮಿಗೆ ಪರಿಹಾರವನ್ನು ರಾಜ್ಯ ಸರ್ಕಾರ ವಿತರಿಸಬೇಕಿದೆ. ಜಿಲ್ಲೆಯಲ್ಲಿ ಸಾಗರ ಮಾಲಾ ಯೋಜನೆ ಅಡಿ ಕಾರವಾರ ವಾಣಿಜ್ಯ ಬಂದರು ವಿಸ್ತರಣೆ, ಬೇಲೇಕೇರಿ, ತದಡಿ ಬಂದರುಗಳ ಆಧುನೀಕರಣಕ್ಕೆ ಕೇಂದ್ರ ಸರ್ಕಾರ ಕೈ ಹಾಕಿತ್ತು. ಮೀನುಗಾರರ ವಿರೋಧದ ಕಾರಣ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಲಿಲ್ಲ. ಸರ್ಕಾರ ಕೂಡ ಯೋಜನೆ ಜಾರಿಗೆ ಹೆಚ್ಚು ಆಸಕ್ತಿ ವಹಿಸಿದಂತೆ ಇಲ್ಲ.

ಇನ್ನು ಅಂಕೋಲಾ ಹುಬ್ಬಳ್ಳಿ ರೈಲು ಮಾರ್ಗದ ಶತಮಾನಗಳ ಕನಸು ಕೂಡ ಹಾಗೆ ಉಳಿದಿದೆ. ಕೈಗಾ ಅಣುಸ್ಥಾವರದ 5-6 ಘಟಕಗಳ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ನಿರ್ಮಾಣ ಕಾರ್ಯ ಆರಂಭವಾಗಿತ್ತು. ತಲಾ 750 ಮೆಗಾವ್ಯಾಟ್ ಸಾಮರ್ಥ್ಯದ ಘಟಕಗಳು ಇವಾಗಿದ್ದವು. ಈಚೆಗೆ ಪರಿಸರ ಯಾವುದೋ ಪತ್ರ ಸರಿಯಿಲ್ಲ ಎಂದು ತಡೆಯಾಜ್ಞೆ ತರಲಾಗಿದೆ. ಶಿರಸಿ ಜಿಲ್ಲೆ ರಚನೆಗೂ ಕೂಡ ಜಿಲ್ಲೆಯ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಹೋರಾಟ ನಡೆಸಲಾಗುತ್ತಿದೆ. ಆದರೆ ಇದು ಕೂಡ ಈ ವರ್ಷ ಅಂತಿಮ ಕಾಣದೆ ಹಾಗೆ ಉಳಿದುಕೊಂಡಿದೆ. ಇನ್ನು ಜಿಲ್ಲೆಯ ಪ್ರಮುಖ ಸಮಸ್ಯೆಗಳಲ್ಲಿ ಒಂದಾದ ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ಪತ್ರ ನೀಡಬೇಕಾದ ಸರ್ಕಾರದ ಹೊಣೆಗಾರಿಕೆ ಮಾತ್ರ 3 ದಶಕಗಳಿಂದ ಹಾಗೆ ಇದೆ. ಆನರಿಂದ ದೊಡ್ಡ ಮಟ್ಟದ ಕೂಗು ಕೇಳಿಬರುತ್ತಿದೆಯಾದರೂ ಆಳುವ ದೊರೆಗಳ ಕಿವಿಗೆ ಅದು ಕೇಳದ ಪರಿಸ್ಥಿತಿ ಇದೆ.

ಅಗಲಿದ ಹಿರಿಯ ಸಾಧಕ ಜೀವಗಳು

ಅಗಲಿದ ಹಿರಿಯ ಸಾಧಕ ಜೀವಗಳು

ಇನ್ನು ಜಿಲ್ಲೆಯಲ್ಲಿ ನಡೆದ ಎರಡು ಭೀಕರ ದುರಂತಗಳು ಜನಮಾನಸದಲ್ಲಿ ನೋವಾಗಿಯೆ ಉಳಿಯುವಂತಾಗಿದೆ. ಭಟ್ಕಳದಲ್ಲಿ ಹಿಂದೆಂದೂ ಕಂಡರಿಯದಂತೆ ಸುರಿದ ಮಳೆಗೆ ಪ್ರವಾಹ ಎದುರಾಗಿತ್ತು. ಇದೇ ವೇಳೆಗೆ ತಾಲ್ಲೂಕಿನ ಮುಟ್ಟಳ್ಳಿ ಬಳಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಅವಶೇಷಗಳಡಿ ನಾಲ್ವರು ಸಿಲುಕಿ ಮೃತಪಟ್ಟಿದ್ದರು. ಗೌರಮ್ಮಜ್ಜಿ ಮನೆಯ ಲಕ್ಷ್ಮಿ ಎನ್.ನಾಯ್ಕ (48), ಅವರ ಪುತ್ರಿ ಲಕ್ಷ್ಮಿ ನಾಯ್ಕ (33), ಪುತ್ರ ಅನಂತ ನಾಯ್ಕ (32) ಹಾಗೂ ಸಂಬಂಧಿ ಪ್ರವೀಣ ನಾಯ್ಕ (20) ಮಣ್ಣಿನಲ್ಲಿ ಸಿಲುಕಿಕೊಂಡು ಸಾವನ್ನಪ್ಪಿದ್ದರು. ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿತ್ತು. ಇದಲ್ಲದೆ ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿಗಳನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಭಟ್ಕಳ ಸಮೀಪದ ಶಿರೂರು ಟೋಲ್ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಆಂಬ್ಯುಲೆನ್ಸ್ ಬರುವ ದಾರಿಯಲ್ಲಿ ದನ ಮಲಗಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಟೋಲ್ ಬಳಿ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ದುರ್ಘಟನೆಯಲ್ಲಿ ಹೊನ್ನಾವರ ತಾಲೂಕಿನ ಹಾಡಗೇರಿ ಗ್ರಾಮದ ಗಜಾನನ ನಾಯ್ಕ (45), ಲೋಕೇಶ್ ನಾಯ್ಕ (39), ಮಂಜುನಾಥ್ ನಾಯ್ಕ (42) ಹಾಗೂ ಜ್ಯೋತಿ ನಾಯ್ಕ (28) ಮೃತಪಟ್ಟಿದ್ದರು. ಘಟನೆಯಲ್ಲಿ ಆಂಬ್ಯುಲೆನ್ಸ್ ಚಾಲಕ ರೋಷನ್ ರೋಡ್ರಿಗಸ್, ಟೋಲ್ ಸಿಬ್ಬಂದಿ ಸಾಂಬಾಜಿ, ಶಶಿಕಾಂತ್ ಹಾಗೂ ಇನ್ನೋರ್ವರು ಗಾಯಗೊಂಡಿದ್ದರು. ಈ ಘಟನೆಯ ಬಳಿಕ ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಬೇಡಿಕೆಯ ಕೂಗು ಜೋರಾಗಿತ್ತು.

ಕಲೆ, ಸಂಸ್ಕೃತಿ, ಪರಿಸರಕ್ಕೆ ಹೆಸರಾದ ಜಿಲ್ಲೆಯಲ್ಲಿ ಇದೇ ಕ್ಷೇತ್ರದ ಮೂಲಕ ಹೆಸರು ಮಾಡಿದ ಕೆಲ ಪ್ರಮುಖ ಹಿರಿಯ ಜೀವಗಳನ್ನು 2022ರಲ್ಲಿ ಕಳೆದಕೊಳ್ಳುವಂತಾಯಿತು. ಅದರಲ್ಲಿ ಪ್ರಮುಖವಾಗಿ ಮಾಜಿ ಸಚಿವ ಪ್ರಭಾಕರ್ ರಾಣೆ(81) ಕೂಡ ಒಬ್ಬರು. ಕಾರವಾರ- ಜೊಯಿಡಾ ಭಾಗದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ವಿದ್ಯಾದಾನ ಮಾಡಿದ್ದ ಅವರು ಸೆ.5 ರ ಶಿಕ್ಷಕರ ದಿನದಂದೇ ನಿಧನರಾಗಿದ್ದಾರೆ. ಕಾರವಾರ- ಜೊಯಿಡಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ರಾಣೆ, ಗ್ರಂಥಾಲಯ ಮತ್ತು ವಯಸ್ಕರ ಶಿಕ್ಷಣ ಸಚಿವರಾಗಿದ್ದರು. ಅಲ್ಲದೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ, ಜನಪದ ಕಲಾವಿದ ಮಹಾದೇವ ವೇಳಿಪ (90) ಫೆಬ್ರುವರಿಯಲ್ಲಿ ನಿಧನ ಹೊಂದಿದರು.

ಜೊಯಿಡಾ ತಾಲೂಕಿನ ಕಾರ್ಟೋಳಿ ಗ್ರಾಮದ ಅವರು ನೂರಾರು ಬಗೆಯ ಗೆಡ್ಡೆ-ಗೆಣಸುಗಳನ್ನು ಉಳಿಸಿ ಬೆಳೆಸುವ ಜೊತೆಗೆ ಅರಣ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಬುಡಕಟ್ಟು ಕುಣುಬಿ ಸಂಸ್ಕೃತಿ ಕಲೆಯನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಈ ಬಗ್ಗೆ ಸಾವಿರಾರು ಜನಪದ ಹಾಡುಗಳನ್ನು ರಚಿಸಿ ಹಾಡುತ್ತಿದ್ದರು. ಇನ್ನು ಕಾರವಾರದ ಹೆಸರಾಂತ ಹಿರಿಯ ರಂಗಕರ್ಮಿ, ನಾಟಕ ಕಲಾವಿದ, ನಿರ್ದೇಶಕ ಹಾಗೂ ಬರಹಗಾರ ಮಾರುತಿ ಬಾಡಕರ್ ಹೃದಯಘಾತದಿಂದ ಸೆಪ್ಟೆಂಬರ್‌ನಲ್ಲಿ ವಿಧಿವಶರಾದರು. ಕವಿಗಳಾಗಿದ್ದ ಇವರು, ಸತ್ಯಮೇವ ಜಯತೇ, ಸೇಡಿನ ಜ್ವಾಲೆ, ನಟ ಸಾಮ್ರಾಟ, ಸ್ನೇಹ ಬಂಧನ, ತಾಳಿ ಕಟ್ಟಿದರೂ ಗಂಡನಲ್ಲ ಇತ್ಯಾದಿ ಜನಪ್ರಿಯ ನಾಟಕಗಳನ್ನು ಬರೆದಿದ್ದರು. ಸ್ವತಃ ನಾಟಕ ಕಲಾವಿದ, ನಿರ್ದೇಶಕರಾಗಿಯೂ ರಂಗಸೇವೆ ಮಾಡಿದ್ದರು. ಇವರಲ್ಲದೆ ಯಕ್ಷಗಾನ ಭಾಗವತಿಕೆ ಹಾಗೂ ಸಂಗೀತದಲ್ಲಿ ಅಪಾರ ಜ್ಞಾನ ಹೊಂದಿದ್ದ ಯಲ್ಲಾಪುರ ತಾಲ್ಲೂಕಿನ ತಿಮ್ಮಪ್ಪ ಭಾಗವತ ಬಾಳೆಹದ್ದ (59) ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಇತ್ತೀಚೆಗೆ ನಿಧನರಾದರು. ರಂಗಭೂಮಿಗೆ ಸಂಗೀತ ನೀಡುತ್ತಿದ್ದ ಇವರು ರಂಗಾಯಣದ ಮೂಲಕ ಖೈದಿಗಳಿಗೆ ನಾಟಕ ಕಲಿಸುವ ತಂಡದಲ್ಲಿ ಸಕ್ರಿಯರಾಗಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+