5 ಗ್ಯಾರಂಟಿಗಳ ಅನುಷ್ಠಾನ; ಹೊಸ ಸಚಿವರ ಹೇಳಿಕೆಗಳು
ಬೆಂಗಳೂರು, ಮೇ 29; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡಿಕೊಂಡು, ಆಡಳಿತ ಆರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯಂತೆ 5 ಗ್ಯಾರಂಟಿಗಳ ಅನುಷ್ಠಾನ ಯಾವಾಗ? ಎಂಬುದು ಈಗಿನ ಪ್ರಶ್ನೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಶಕ್ತಿ ಭವನದಲ್ಲಿ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಯೋಜನೆಗಳ ಅನುಷ್ಠಾನಕ್ಕೆ ಆಗುವ ವೆಚ್ಚ, ಫಲಾನುಭವಿಗಳು ಮುಂತಾದ ಮಾಹಿತಿ ಪಡೆದುಕೊಂಡರು.

ಸಿದ್ದರಾಮಯ್ಯ ಸಂಪುಟದ ನೂತನ ಸಚಿವರು ಸಹ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಮತ್ತೊಂದು ಕಡೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಹ ಗ್ಯಾರಂಟಿ ಜಾರಿ ಯಾವಾಗ? ಎಂದು ಕೇಳುತ್ತಿವೆ. ಜನರು ಈಗಾಗಲೇ ಕರೆಂಟ್ ಬಿಲ್ ಕಟ್ಟಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾರೆ.
ಸಚಿವರ ಹೇಳಿಕೆಗಳು; ಹಿಂದುಳಿ ವರ್ಗ, ಕನ್ನಡ & ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, "ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಮಾಧಾನದಿಂದ ಇರಬೇಕು. 5 ಗ್ಯಾರಂಟಿ ಜಾರಿ ಮಾಡಲ್ಲ ಎಂದು ನಾವು ಹೇಳಿಲ್ಲವಲ್ಲ. ಜೂನ್ 1ರಂದು ಜಾರಿ ಮಾಡುವುದಾಗಿ ಹೇಳಿದ್ದೇವೆ. ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬದ್ಧತೆ ಇದೆ. ಹುಟ್ಟಿದ ಮಗು ಏಕಾಏಕಿ ಓಡಾಡಲು ಆಗದು" ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಾತನಾಡಿ, "ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ. ಊಹಾಪೋಹಗಳಿಗೆ ಕಿವಿಗೊಡಬೇಡಿ, ಗಾಬರಿಯಾಗಬೇಡಿ. ಯಾರು ಬೇಕಾದರೂ ಟೀಕೆ ಮಾಡಲಿ ಅದಕ್ಕೆ ನಾವು ಬೇಡ ಎನ್ನುವುದಿಲ್ಲ. ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಇದೆ. ಮಾತನಾಡುವವರು ನಮ್ಮನ್ನು ತಿದ್ದಲಿ, ನಾವು ಮಾಡಿ ತೋರಿಸುತ್ತೇವೆ" ಎಂದರು.

ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, "ಮಹಿಳೆಯರಿಗೆ ಬಸ್ ಪಾಸ್ ಕೊಟ್ಟೇ ಕೊಡುತ್ತೇವೆ. ವಿರೋಧ ಪಕ್ಷದವರು ತಾಳ್ಮೆಯಿಂದ ಇರಲಿ. ಜೂನ್ 1ರಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವಾಗುತ್ತದೆ. ಎಷ್ಟು ಮಹಿಳೆಯರು ಓಡಾಡುತ್ತಾರೆ ಎಂದು ಮಾಹಿತಿ ಕೇಳಿದ್ದೇವೆ. ಶಾಲಾ ಬಸ್ ಪಾಸ್‌ನಂತೆ ಮಹಿಳೆಯರ ಬಸ್ ಪಾಸುಗಳಿಗೂ ನಿಗಮಗಳಿಗೆ ಹಣ ಕೊಡುತ್ತೇವೆ" ಎಂದು ಹೇಳಿದರು.
ಪಕ್ಷದ ಹಿರಿಯ ನಾಯಕ, ಶಿರಾ ಕ್ಷೇತ್ರದ ಶಾಸಕ ಟಿ. ಬಿ. ಜಯಚಂದ್ರ ಮಾತನಾಡಿ, "ಪಕ್ಷದ 5 ಗ್ಯಾರಂಟಿ ಜಾರಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಬೇಕು. ಸಂಪನ್ಮೂಲ ಕ್ರೋಡಿಕರಿಸಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕು. ನಿರ್ಧಾರಕ್ಕೆ ಬರುವವರೆಗೂ ಸಚಿವರು ವಿಶ್ಲೇಷಣೆ ಮಾಡುವುದು ತಪ್ಪು. ಹಾರಿಕೆ ಉತ್ತರ ನೀಡಿದರೆ ಜನರಲ್ಲಿ ಗೊಂದಲ ಮೂಡುತ್ತದೆ" ಎಂದರು.
ಸಹಕಾರ ಸಚಿವ ಕೆ. ಎನ್. ರಾಜಣ್ಣ ಮಾತನಾಡಿ, "ಚುನಾವಣೆ ಸಮಯದಲ್ಲಿ ಮನೆ-ಮನೆಗೆ ಗ್ಯಾರಂಟಿ ಕಾರ್ಡ್ ನೀಡಿದ ಹಾಗೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ. ನಿರ್ಗತಿಕರು, ಬಡವರು ಯಾರಿದ್ದಾರೋ ಅವರನ್ನು ಗುರುತಿಸಿ ಗ್ಯಾರಂಟಿ ಯೋಜನೆಗಳನ್ನು ತಲುಪಿಸುತ್ತೇವೆ. ಪ್ರಣಾಳಿಕೆಯಲ್ಲಿರುವ ಗ್ಯಾರಂಟಿ ಜಾರಿಗೊಳಿಸುತ್ತೇವೆ. ಆದರೆ ಎಲ್ಲರಿಗೂ ಈ ಯೋಜನೆಗಳನ್ನು ನೀಡಲು ಸಾಧ್ಯವಿಲ್ಲ" ಎಂದು ಹೇಳಿದ್ದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, "ಗ್ಯಾರಂಟಿ ಯೋಜನೆಗಳ ಜಾರಿ ಸ್ವಲ್ಪ ವಿಳಂಬವಾಗಬಹುದು. ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಿಗೆ ಷರತ್ತುಗಳು ಅನ್ವಯ ಆಗಲಿವೆ. ಪ್ರಚಾರದ ವೇಳೆ ಮನೆ-ಮನೆಗೆ ಗ್ಯಾರಂಟಿ ಕಾರ್ಡ್ ಎಸೆದ ಹಾಗೆ ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಆಗಲ್ಲ. ನಿರ್ಗತಿಕರು, ಬಡವರನ್ನು ಗುರುತಿಸಿ ಯೋಜನೆ ತಲುಪಿಸುತ್ತೇವೆ" ಎಂದು ತಿಳಿಸಿದ್ದರು.












Click it and Unblock the Notifications