ಮೀನುಗಾರರಿಗೆ ಗುಡ್ ನ್ಯೂಸ್: ಪರಹಾರ ಮೊತ್ತ ಮತ್ತಷ್ಟು ಏರಿಕೆ: ಇಲ್ಲಿದೆ ಸಂಪೂರ್ಣ ಮಾಹಿತಿ
ಮುರುಡೇಶ್ವರ, ನವೆಂಬರ್ 22: ಮೀನುಗಾರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಈ ಹಿಂದೆ ಮೀನುಗಾರರಿಗೆ ಸಮುದ್ರದಲ್ಲಿ ಮೀನುಗಾರಿಕೆ ವೇಳೆ ಹಾನಿಯಾದರೆ ಪರಿಹಾರವಾಗಿ ₹6 ಲಕ್ಷ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ₹8 ಲಕ್ಷಕ್ಕೆ ಏರಿಸಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ₹10 ಲಕ್ಷಕ್ಕೆ ಏರಿಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಘೋಷಣೆ ಮಾಡಿದರು.
ಮುರುಡೇಶ್ವರದಲ್ಲಿ ನಡೆದ ವಿಶ್ವ ಮೀನುಗಾರಿಕೆ ದಿನ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿ, ಮಂಗಳೂರಿನಲ್ಲಿ ₹49 ಕೋಟಿ ವೆಚ್ಚದಲ್ಲಿ ಮೀನುಗಾರಿಕೆ ಬಂದರು ಕಾಮಗಾರಿ ಪೂರ್ಣಗೊಂಡಿದೆ. ಸಮೀಕ್ಷೆ ಪ್ರಕಾರ 99% ಮೀನುಗಾರರು ಆರ್ಥಿಕವಾಗಿ ಹಿಂದುಳಿದಿದ್ದು, ಈ ಮೀನುಗಾರರ ರಕ್ಷಣೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಮೀನು ಮಾರಾಟ ಮಾಡಲು ತ್ರಿಚಕ್ರ ಎಲೆಕ್ಟ್ರಿಕ್ ವಾಹನ ಹಂಚಲಾಗಿದೆ ಎಂದು ತಿಳಿಸಿದರು.

"ಈ ಕರಾವಳಿ ಭಾಗದಲ್ಲಿ ನೂತನ ಪ್ರವಾಸೋದ್ಯಮ ನೀತಿ ರೂಪಿಸಬೇಕು ಎಂದು ಸಚಿವರಾದ ಹೆಚ್.ಕೆ ಪಾಟೀಲ್ ಅವರಿಗೆ ಸಚಿವ ಸಂಪುಟ ಸಭೆಯಲ್ಲಿ ತಿಳಿಸಿದ್ದೇವೆ. ನೂತನ ಪ್ರವಾಸೋದ್ಯಮ ನೀತಿಯಲ್ಲಿ ಮಂಗಳೂರಿನಿಂದ ಕಾರವಾರದವರೆಗೂ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಲಹೆಗಳನ್ನು ಪಡೆದಿದ್ದೇವೆ. ಈ ಭಾಗದಲ್ಲಿ ಪಂಚತಾರಾ ಹೋಟೆಲ್ ಗಳಿಲ್ಲ. ಈ ಬಗ್ಗೆಯೂ ಗಮನ ಹರಿಸಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನಮ್ಮ ಕಾರ್ಯಕ್ರಮ ಜಾರಿ ಮಾಡುತ್ತೇವೆ. ಈ ಭಾಗದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಕಾರ್ಯಕ್ರಮ ರೂಪಿಸಲಾಗುವುದು. ಇಲ್ಲಿನ ಬಂದರುಗಳ ಅಭಿವೃದ್ಧಿ ಮಾಡಲಾಗುವುದು. ಕರಾವಳಿ ಭಾಗ ನಮ್ಮ ರಾಜ್ಯದ ಶಕ್ತಿ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ.
ನೊಬೆಲ್ ಪ್ರಶಸ್ತಿ ವಿಜೇತ ಮೊಹಮದ್ ಯೂನಿಸ್ ಅವರು ಒಂದು ಮಾತು ಹೇಳಿದ್ದಾರೆ. ಒಬ್ಬ ವ್ಯಕ್ತಿಗೆ ಮೀನು ಕೊಟ್ಟರೆ ಅದು ಆತನಿಗೆ ಒಂದು ಹೊತ್ತಿನ ಊಟಕ್ಕೆ ಸಮ. ಆದರೆ ಅದೇ ವ್ಯಕ್ತಿಗೆ ಮೀನುಗಾರಿಕೆ ಹೇಳಿಕೊಟ್ಟರೆ ಅದು ಅವನ ಬದುಕಿಗೆ ಊಟ ಕಲ್ಪಿಸಿಕೊಡುವುದಕ್ಕೆ ಸಮ ಎಂದು. ಅದೇ ರೀತಿ ನಮ್ಮ ಸರ್ಕಾರ ಮೀನುಗಾರರ ಬದುಕು ಬದಲಾಯಿಸಿ, ಅವರ ಕಾಲ ಮೇಲೆ ಅವರು ಸ್ವಾವಲಂಬನೆ ಬದುಕುವಂತೆ ಮಾಡಲು ಕಾರ್ಯಕ್ರಮ ರೂಪಿಸುತ್ತಿದೆ. ಮೀನುಗಾರರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ.
ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದ ಬಡ, ಮಧ್ಯಮ ವರ್ಗದ ಜನರ ಸಂಕಷ್ಟಕ್ಕೆ ಸ್ಪಂದಿಸಲು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಬಿಜೆಪಿ ಸ್ನೇಹಿತರು ಈ ಯೋಜನೆ ಬಗ್ಗೆ ಟೀಕೆ, ಅಪಪ್ರಚಾರ ಮಾಡುತ್ತಿದ್ದಾರೆ. ಆದರೂ ಮಧ್ಯಪ್ರದೇಶ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ನಮ್ಮ ಮಾದರಿಯಲ್ಲಿ ಬಿಜೆಪಿ ಸರ್ಕಾರಗಳು ಯೋಜನೆ ರೂಪಿಸುತ್ತಿವೆ. ಆಮೂಲಕ ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ ಎಂದು ಬಿಜೆಪಿಯವರಿಗೂ ಅರ್ಥವಾಗಿದೆ. ನಮ್ಮ ಸರ್ಕಾರ 2 ಸಾವಿರ, ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, 10 ಕೆ.ಜಿ ಅಕ್ಕಿ, ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುತ್ತಿದೆ. ಎಲ್ಲಾ ಪಕ್ಷದವರಿಗೂ ಈ ಯೋಜನೆ ಜಾರಿ ಮಾಡಿದ್ದೇವೆ. ಇದಕ್ಕಾಗಿ ₹56 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ. ಇದರಿಂದ ಬಡ ಕುಟುಂಬಕ್ಕೆ ವಾರ್ಷಿಕವಾಗಿ ಸರಾಸರಿ 50 ಸಾವಿರದಷ್ಟು ಉಳಿತಾಯ ಮಾಡಲು ಮುಂದಾಗಿದೆ. ಆಮೂಲಕ ದೇಶಕ್ಕೆ ಕರ್ನಾಟಕ ಮಾದರಿ ಪರಿಚಯಿಸಿದ್ದೇವೆ.
ದೆಹಲಿಯಲ್ಲಿ ನಮ್ಮ ರಾಜ್ಯದ ರೈತರು ಉತ್ಪಾದಿಸುವ ನಂದಿನಿ ಹಾಲಿನ ಮಾರುಕಟ್ಟೆ ವಿಸ್ತರಣೆ ಮಾಡಲು ಇಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆ ಕಾರ್ಯಕ್ರಮಕ್ಕೆ ಮೂಖ್ಯಮಂತ್ರಿಗಳು ತೆರಳಿದರು. ಕರಾವಳಿ ಭಾಗದಲ್ಲಿ ನೀರಿನಲ್ಲಿ ಕೃಷಿ ಮಾಡುತ್ತಿರುವ ಮೀನುಗಾರರ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೇನೆ. ಮಂಕಾಳ ವೈದ್ಯ ಅವರು ಈ ಪವಿತ್ರವಾದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಒತ್ತಡ ಹಾಕಿದರು.
ರೈತ ಭೂಮಿಯಲ್ಲಿ ಕೃಷಿ ಮಾಡಿದರೆ, ಮೀನುಗಾರರು ನೀರಿನಲ್ಲಿ ಕೃಷಿ ಮಾಡುತ್ತೀರಿ. ನಿಮ್ಮಿಬ್ಬರಿಗೂ ವೇತನ, ಬಡ್ತಿ, ಲಂಚ, ನಿವೃತ್ತಿ ಪಿಂಚಣಿ ಇಲ್ಲ. ನೀವು ಆತ್ಮವಿಶ್ವಾಸದ ಮೇಲೆ ನಂಬಿಕೆ ಇಟ್ಟುಕೊಂಡು ಪ್ರಾಣವನ್ನು ಒತ್ತೆಯಿಟ್ಟು ಮೀನುಗಾರಿಕೆ ಮಾಡಿಕೊಂಡು ಬರುತ್ತಿದ್ದೀರಿ. ನೀವೆಲ್ಲರೂ ಬದುಕು ಸಾಗಿಸುತ್ತಿದ್ದೀರಿ. ಕೇವಲ ದೊಡ್ಡ ದೊಡ್ಡ ಮೀನುಗಾರಿಕೆ ಸಂಸ್ಥೆಗಳು ಮಾತ್ರ ಬದುಕಿನಲ್ಲಿ ಉತ್ತಮ ಲಾಭ ಕಾಣುತ್ತಿದ್ದಾರೆ.
ನಿಮ್ಮ ಬದುಕು ಹಸನಾಗಿಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾದ ನಂತರ ಈ ಭಾಗದ ಜನರ ಸಮಸ್ಯೆ ಆಲಿಸಿದ್ದೆ. ಮೊಗವೀರರ ಸಂಘ, ಬೋಟ್ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಬೇಡಿಕೆ ನನ್ನ ಮುಂದೆ ಇಟ್ಟಿದ್ದರು. ಮಂಕಾಳ ವೈದ್ಯ ಅವರು ಮೀನುಗಾರನಾಗಿ ಹುಟ್ಟಿದ್ದು, ಈ ಸಮುದಾಯದ ಜನರ ಬದುಕಿನಲ್ಲಿ ಬದಲಾವಣೆ ತರಬೇಕು ಎಂದು ಸರ್ಕಾರದ ಮೇಲೆ ಒತ್ತಡ ತಂದು ಅನೇಕ ಹೊಸ ಕಾರ್ಯಕ್ರಮ ರೂಪಿಸಿದ್ದಾರೆ. ಈ ಭಾಗದಲ್ಲಿ ಮತ್ತಷ್ಟು ಬಂದರು ಆಗಬೇಕು, ಮೀನುಗಾರರಿಗೆ ಅನುಕೂಲವಾಗಬೇಕು ಎಂದು ಚರ್ಚೆ ಮಾಡಿದ್ದಾರೆ.
ಕರಾವಳಿ ಭಾಗದ ಜನ, ವಿದ್ಯಾವಂತ, ಬುದ್ಧಿವಂತ, ಪ್ರಜ್ಞಾವಂತರಾಗಿದ್ದೀರಿ. ಸ್ವಾಭಿಮಾನದ ಬದುಕು ಸಾಗಿಸುತ್ತಿದ್ದೀರಿ. ಇಲ್ಲಿ ದೊಡ್ಡ ದೇವಾಲಯ, ವಿದ್ಯಾ ಸಂಸ್ಥೆಗಳು, ಪರಿಸರ ಸಂಪನ್ಮೂಲಗಳಿವೆ. ಆದರೂ ಈ ಭಾಗದ 40% ಜನ ಉದ್ಯೋಗಕ್ಕಾಗಿ ಮುಂಬೈ, ಅರಬ್ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದಾರೆ. ಇಲ್ಲಿ ಕೋಮು ಗಲಭೆಗಳು ಹೆಚ್ಚಾಗುತ್ತಿದ್ದು, ಇವುಗಳಿಗೆ ನಾವು ಅವಕಾಶ ನೀಡಬಾರದು. ಯುವಕರು ತಮ್ಮ ಬದುಕು ಕಟ್ಟಿಕೊಳ್ಳುವಂತೆ ನೋಡಿಕೊಳ್ಳಬೇಕು.












Click it and Unblock the Notifications