BJP candidates list: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಎಷ್ಟು ಜನರಿಗೆ ಸ್ಥಾನ ಗೊತ್ತೆ?
ಬೆಂಗಳೂರು, ಏಪ್ರಿಲ್. 10: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ ಎರಡು ಬಾರಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಜೆಡಿಎಸ್ ಕೂಡ ಎರಡನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ಆರಂಭಿಸಿದೆ. ಆದರೆ, ಆಡಳಿತರೂಢ ಬಿಜೆಪಿ ಮಾತ್ರ ಒಂದು ಸ್ಥಾನಕ್ಕೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಇದಕ್ಕೆ ಪ್ರತಿಪಕ್ಷಗಳು ಟೀಕೆ ವ್ಯಕ್ತಪಡಿಸಿವೆ.
ದಿನ ದಿನಕ್ಕೂ ಕಂಗಂಟಾಗುತ್ತಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ನವದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಏಪ್ರಿಲ್ 11 ಅಥವಾ 12 ರಂದು ಬಿಡುಗಡೆ ಮಾಡಲಾಗುವುದು. ಪಟ್ಟಿ ಅಂತಿಮಗೊಳಿಸುವ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಏಪ್ರಿಲ್ 10 ರಂದು ಹೇಳಿದ್ದಾರೆ.

"ಬಹುಶಃ ಮೊದಲ ಪಟ್ಟಿಯನ್ನು ನಾಳೆ ಅಥವಾ ನಾಳೆಯ ಮರುದಿನ ಬಿಡುಗಡೆ ಮಾಡಲಾಗುವುದು. ಸೋಮವಾರ ಸಂಜೆ ಅದನ್ನು ಬಿಡುಗಡೆ ಮಾಡುವ ಸಾಧ್ಯತೆಯಿತ್ತು. ಆದರೆ ಹೆಚ್ಚಿನ ಚರ್ಚೆಗಳು ನಡೆಯಬೇಕಾಗಿರುವುದರಿಂದ ಮಂಗಳವಾರ ಅಥವಾ ಬುಧವಾರ ಬಿಡುಗಡೆ ಮಾಡಬಹುದು" ಎಂದು ಬಸವರಾಜ ಬೊಮ್ಮಾಯಿ ನವದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
"ಕೆಲವು ಅಭ್ಯರ್ಥಿಗಳ ಬಗ್ಗೆ ಹೆಚ್ಚಿನ ಗ್ರೌಂಡ್ ರಿಪೋರ್ಟ್ ಸಂಗ್ರಹಿಸಬೇಕು. ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕು ಮತ್ತು ಹೊಸ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಯಬೇಕು" ಎಂದು ಮುಖ್ಯಮಂತ್ರಿ ಹೇಳಿದ್ದರು. ಕಳೆದೊಂದು ವಾರದಿಂದಲೂ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯನ್ನು ಬಿಜೆಪಿ ನಾಯಕರು ಒಂದಲ್ಲ ಒಂದು ಕಾರಣದಿಂದ ಮುಂದೂಡುತ್ತಾ ಬರುತ್ತಿದ್ದಾರೆ.
ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ 224 ಸದಸ್ಯ ಬಲದ ವಿಧಾನಸಭೆಗೆ ನಡೆಯುವ ಚುನಾವಣೆಗೆ ಸುಮಾರು 170 ರಿಂದ 180 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ( ಏಪ್ರಿಲ್ 10) ಸಂಜೆಯೊಳಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದರು.

ಆದರೆ, ಮಧ್ಯಾಹ್ನದ ನಂತರ ಮಾತನಾಡಿದ್ದ ಬಿಎಸ್ ಯಡಿಯೂರಪ್ಪ "ನಿನ್ನೆ ಎಲ್ಲಾ ಕ್ಷೇತ್ರಗಳ ಬಗ್ಗೆ ಚರ್ಚೆಗಳು ನಡೆದಿವೆ. ಇಂದು ಮತ್ತೆ ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕೆಲವು ಸ್ಪಷ್ಟೀಕರಣಗಳಿಗಾಗಿ ನನ್ನನ್ನು ಕರೆದಿದ್ದರು. ನಾನು ಅವುಗಳನ್ನು ವಿವರಿಸಿದ್ದೇನೆ. ಅವರು ಅದನ್ನು ಮುಗಿಸಿದ ಬಳಿಕ ಇಂದು ಸಂಜೆ ಅಥವಾ ನಾಳೆ ಪಟ್ಟಿ ಬಿಡುಗಡೆ ಮಾಡುತ್ತಾರೆ" ಎಂದಿದ್ದಾರೆ.
ಪಟ್ಟಿ ಬಿಡುಗಡೆಯಲ್ಲಿ ಯಾವುದೇ ವಿಳಂಬವಾಗಿಲ್ಲ ಎಂದು ಕರ್ನಾಟಕ ಬಿಜೆಪಿ ಬಲವಾಗಿ ವಾದಿಸುತ್ತಿದೆ. ಟಿಕೆಟ್ ನೀಡುವ ಬಗ್ಗೆ ಚರ್ಚೆಗಳು ನಡೆದಿದ್ದು ಅದನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದಾರೆ. ಇದರ ಜೊತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಬೆಳಗ್ಗೆ ಕರೆದಿದ್ದ ಸಭೆಯಲ್ಲಿ ನೀವು ಗೈರುಹಾಜರಾಗಿದ್ದರಿಂದ ನೀವು ಅತೃಪ್ತಿ ಹೊಂದಿದ್ದೀರಾ ಎಂಬ ಪ್ರಶ್ನೆಗೆ, ಬಿಎಸ್ ಯಡಿಯೂರಪ್ಪ ಇಲ್ಲ ಎಂದಿದ್ದಾರೆ.
"ನಾನು ಏನೇ ಸಲಹೆಗಳನ್ನು ನೀಡಿದ್ದರೂ ಅವರು (ಬಿಜೆಪಿ ನಾಯಕತ್ವ) ಒಪ್ಪಿಕೊಂಡಿದೆ. ನಾವು ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತವನ್ನು ಪಡೆಯುತ್ತೇವೆ ಮತ್ತು ನಾವೇ ಸರ್ಕಾರವನ್ನು ರಚಿಸಲಿದ್ದೇವೆ, ಅದರಲ್ಲಿ ಯಾವುದೇ ಸಂದೇಹವಿಲ್ಲ" ಎಂದು ಹೇಳಿದ್ದಾರೆ. ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಜೊತೆ ಬಿಎಸ್ ಯಡಿಯೂರಪ್ಪ ಅವರು ಕೇವಲ 10 ನಿಮಿಷ ಸಭೆ ನಡೆಸಿದರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications